ಮುಂಡರಗಿ: ಕಪ್ಪತ್ತಗುಡ್ಡ ಎಲ್ಲರ ಸಂಪತ್ತು. ಅದನ್ನು ಉಳಿಸಿ ಬೆಳೆಸುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಕಪ್ಪತ್ತಗುಡ್ಡದ ಉಳಿವಿಗಾಗಿ ಎಲ್ಲರೂ ಕಂಕಣಬದ್ಧರಾಗಿರೋಣ ಎಂದು ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ತಿಳಿಸಿದರು.
ಕಪ್ಪತ್ತಗುಡ್ಡದ ಮಹತ್ವ ಅರಿಯಬೇಕಾದರೆ ಅದನ್ನೊಮ್ಮೆ ಸಂಪೂರ್ಣವಾಗಿ ಸುತ್ತಿ ನೋಡಬೇಕು. ಕಪ್ಪತ್ತಗುಡ್ಡದಲ್ಲಿ 400ಕ್ಕೂ ಹೆಚ್ಚಿನ ಔಷಧಿ ಸಸ್ಯಗಳು, 20ಕ್ಕೂ ಹೆಚ್ಚು ಪ್ರಾಣಿಗಳಿವೆ. ಹೀಗಾಗಿ ಪ್ರತಿಯೊಬ್ಬರೂ ಕಾಳಜಿ ತೋರಿಸುವುದು ಅವಶ್ಯವಾಗಿದೆ ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಇಂದು ಕಪ್ಪತ್ತಗುಡ್ಡ ಉಳಿದಿದ್ದರೆ ಅದಕ್ಕೆ ಈ ಹಿಂದೆ ಕುತ್ತು ಬಂದಾಗ ಗದುಗಿನ ಲಿಂ. ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಹಾಗೂ ಜಿಲ್ಲೆಯ ಇತರೆ ಸ್ವಾಮೀಜಿಗಳ ಹಾಗೂ ಪರಿಸರವಾದಿಗಳ ಹೋರಾಟದ ಫಲವಾಗಿದೆ. ಹೀಗಾಗಿ ಈ ಗುಡ್ಡವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಕಪ್ಪತ್ತಗುಡ್ಡದ ಸುತ್ತಮುತ್ತಲಿನಲ್ಲಿರುವ ಎಲ್ಲ ಗ್ರಾಮಗಳಿಗೂ ಇದರ ಮಹತ್ವ ಗೊತ್ತಿದೆ. ಹೀಗಾಗಿ ನಮ್ಮೆಲ್ಲರ ನಡಿಗೆ ಕಪ್ಪತ್ತಗುಡ್ಡದ ಕಡೆಗೆ ಎನ್ನುವಂತೆ ಎಲ್ಲರೂ ಇದರ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಜಿಲ್ಲಾ ಶಾಮಿಯಾನ್ ಸಪ್ಲಾಯರ್ಸ್ ಸಂಘ ಹಾಗೂ ಮುಂಡರಗಿ ತಾಲೂಕು ಶಾಮಿಯಾನ್ ಸಪ್ಲಾಯರ್ಸ್ ಸಂಘದಿಂದ ತಾಲೂಕಿನ ಬಾಗೇವಾಡಿ ವ್ಯಾಪ್ತಿಯ ಕಪ್ಪತ್ತಗುಡ್ಡದಲ್ಲಿ ಬೀಜ ಬಿತ್ತುವ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ವಿವಿಧ ಬೀಜಗಳನ್ನು ಕಪ್ಪತ್ತಗುಡ್ಡದಲ್ಲಿ ಬಿತ್ತಲಾಯಿತು.