ಮಾದರಿ ತಾಲೂಕಾಗಿಸುವ ಸಂಕಲ್ಪ ಪ್ರತಿಯೊಬ್ಬರೂ ಮಾಡಲಿ: ಮಹೇಶ

KannadaprabhaNewsNetwork |  
Published : Aug 16, 2026, 03:30 AM IST
ಭಟ್ಕಳದ ತಾಲ್ಲೂಕು ಕ್ರೀಡಾಂಣದಲ್ಲಿ ಸಹಾಯಕ ಆಯಕ್ತ ಜೆ. ಮಹೇಶ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

ಭಟ್ಕಳದಾದ್ಯಂತ ಸಡಗರದಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಭಟ್ಕಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ ಆಚರಣೆಕನ್ನಡಪ್ರಭ ವಾರ್ತೆ ಭಟ್ಕಳ

ಭಟ್ಕಳದಾದ್ಯಂತ ಸಡಗರದಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ತಾಲ್ಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಹಾಯಕ ಆಯುಕ್ತ ಜೆ ಮಹೇಶ, ಸ್ವಾತಂತ್ರ್ಯವು ಒಂದೇ ದಿನದಲ್ಲಿ ದೊರೆತದ್ದಲ್ಲ. ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ನಿರಂತರ ಹೋರಾಟದ ಫಲವಾಗಿ ದೇಶ ಸ್ವಾತಂತ್ರ್ಯ ಪಡೆದಿದೆ. ಸ್ವಾತಂತ್ರ್ಯದ ಮೌಲ್ಯವನ್ನು ಅರಿತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಚೆನ್ನಭೈರಾದೇವಿ ಆಳ್ವಿಕೆ ನಡೆಸಿದ ಐತಿಹಾಸಿಕ ಭಟ್ಕಳದ ನೆಲದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಪ್ರಾಚೀನ ಕಾಲದಿಂದಲೂ ಸಮುದ್ರ ವ್ಯಾಪಾರದ ಪ್ರಮುಖ ಕೇಂದ್ರವಾಗಿದ್ದ ಭಟ್ಕಳದಲ್ಲಿ ವಿವಿಧ ದೇಶಗಳ ಜನರು ಬಂದು ನೆಲೆಸಿದ್ದು, ಹಲವು ಭಾಷೆ, ಧರ್ಮ ಮತ್ತು ಸಂಸ್ಕೃತಿಗಳ ಸಂಗಮಭೂಮಿಯಾಗಿ ಬೆಳೆದಿದೆ. ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಪರಂಪರೆಯನ್ನು ಮುಂದುವರಿಸುವ ಮೂಲಕ ಭಟ್ಕಳವನ್ನು ಮಾದರಿ ತಾಲೂಕನ್ನಾಗಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಮಂಕಾಳ ವೈದ್ಯ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹಿರಿಯರು ಅನುಭವಿಸಿದ ಕಷ್ಟ, ನೋವು ಹಾಗೂ ಸಂಕಷ್ಟಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಕಳೆದ 3 ವರ್ಷಗಳಲ್ಲಿ ಭಟ್ಕಳ ಕ್ಷೇತ್ರಕ್ಕೆ ಸುಮಾರು ₹800 ಕೋಟಿ ಅನುದಾನ ನೀಡಲಾಗಿದೆ. ಇದರಿಂದ ಬಡವರು ಹಾಗೂ ಸಾಮಾನ್ಯ ಜನರಿಗೆ ಆರ್ಥಿಕವಾಗಿ ನೆರವಾಗಿದೆ. ಯುವಕರು ಗಾಂಜಾ ಸೇರಿದಂತೆ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ವಿಚಾರದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಇದಕ್ಕೂ ಪೂರ್ವದಲ್ಲಿ ಪೊಲೀಸ್ ಇಲಾಖೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವ ಪಿಎಸ್ಐ ನವೀನ ನಾಯ್ಕ ಹಾಗೂ ಡಿಜಿ–ಐಜಿಪಿ ಶ್ಲಾಘನಾ ಚಿನ್ನದ ಪದಕಕ್ಕೆ ಆಯ್ಕೆಯಾಗಿರುವ ಹೆಡ್ ಕಾನ್‌ಸ್ಟೆಬಲ್ ದೀಪಕ್ ನಾಯ್ಕ ಅವರನ್ನು ಗೌರವಿಸಲಾಯಿತು.

ಜಾಲಿ ಪಪಂ ಅಧ್ಯಕ್ಷೆ ಖಾಜಾಯಾ ಅಫ್ಸಾ ಹುಜೈಫಾ, ಉಪಾಧ್ಯಕ್ಷ ಇಮ್ರಾನ್ ಲಂಕಾ, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರಾಜು ನಾಯ್ಕ, ಡಿವೈಎಸ್ಪಿ ಬಿ. ಗಿರೀಶ್, ನಗರಸಭೆ ಆಯುಕ್ತ ಬಾಬಾಸಾಹೇಬ್ ಮಾನೆ, ತಾಪಂ ಪ್ರಭಾರಿ ಇಒ ರಾಜೇಶ್ ಮಹಾಲೆ, ಜಾಲಿ ಪಪಂ ಮುಖ್ಯಾಧಿಕಾರಿ ಮಂಜಪ್ಪ ಎಸ್., ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಶೇಟ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಪ್ರಾಧಿಕಾರದಲ್ಲಿ ಕೋಟಿ ಕೋಟಿ ಲೂಟಿ!
ಜಿಲ್ಲೆಯಲ್ಲಿ 215 ಭಾರತ ಜೋಡೋ ಯುವ ಸಂಘ ಸ್ಥಾಪನೆ