ಗ್ರಾಮದೇವಿ ಜಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಶಿವರಾಮ ಹೆಬ್ಬಾರ ಸೂಚನೆ
ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆ, ಕುಡಿಯುವ ನೀರು, ವಾಹನ ಸಂಚಾರ ವ್ಯವಸ್ಥೆ, ವಿದ್ಯುತ್ ಸಂಪರ್ಕ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಜನರಿಗೆ ಯಾವುದೇ ಸಮಸ್ಯೆ ಬಾರದಂತೆ ಕಾರ್ಯನಿರ್ವಹಿಸಬೇಕು. ಲೋಪವಾದಲ್ಲಿ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಪಂ ಸಭಾಭವನದಲ್ಲಿ ಗ್ರಾಮದೇವಿ ಜಾತ್ರೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಟಗಾರ ಕ್ರಾಸ್‌ನಿಂದ ನಿಸರ್ಗಮನೆ ಮೂಲಕ ಆನಗೋಡ ರಸ್ತೆಗೆ ತಲುಪುವಂತೆ ಪರ್ಯಾಯ ಮಾರ್ಗವನ್ನು ಪರಿಶೀಲಿಸಲಾಗಿದ್ದು, ೧೫ ಟನ್ ವರೆಗಿನ ವಾಹನಗಳು ಮಾತ್ರ ಓಡಾಡಲು ಅವಕಾಶವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಹಿಟ್ಟಿನಬೈಲ್, ಇಡಗುಂದಿ ಹಾಗೂ ಗುಳ್ಳಾಪುರದ ಮೈದಾನಗಳಲ್ಲಿ ಬೃಹತ್ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ದೊಡ್ಡ ವಾಹನಗಳನ್ನು ೬ರಿಂದ ೯ ಗಂಟೆ ಹಾಗೂ ೯ರಿಂದ ೧೧ ಗಂಟೆವರೆಗೆ 2 ಹಂತಗಳಲ್ಲಿ ನಿಲುಗಡೆ ಮಾಡಿ, ನಂತರ ಓಡಾಡಲು ಬಿಡಬೇಕು ಎಂದು ಪೊಲೀಸರಿಗೆ ಶಾಸಕರು ಸೂಚಿಸಿದರು. ಕಾರು, ಜೀಪು ಸೇರಿದಂತೆ ಸಣ್ಣ ವಾಹನಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಒಂದು ಅಗ್ನಿಶಾಮಕ ವಾಹನ, ಎರಡು ಅಗ್ನಿ ಬೈಕ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ಸಿದ್ಧತೆಯಲ್ಲಿ ಇರಿಸುವುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದರು.
೨೫ ಹೆಚ್ಚುವರಿ ಬಸ್‌ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಾತ್ರೆಗಾಗಿ ವಿಶೇಷ ಕೇಂದ್ರ ತೆರೆದು, ಜನರಿಗೆ ಉಪಯುಕ್ತವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್ ಮಾಹಿತಿ ನೀಡಿದರು.
ತಹಸೀಲ್ದಾರ ಚಂದ್ರಶೇಖರ ಹೊಸಮನಿ, ಗ್ರಾಮದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳು, ಪಪಂನ ಮಾಜಿ ಸದಸ್ಯರು, ಸಾರ್ವಜನಿಕರು ಇದ್ದರು.