ಕನ್ನಡಪ್ರಭ ವಾರ್ತೆ ಅಳ್ನಾವರ
ಅಳ್ನಾವರ ತಾಲೂಕಿನ ಬೆಣಚಿ, ಕಡಬಗಟ್ಟಿ ಮತ್ತು ಅರವಟಗಿ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಂದು ಕೆಲಸಕ್ಕೂ ಸರ್ಕಾರದ ಮೇಲೆ ಅವಲಂಬಿತವಾಗುವ ಮನೊಭಾವ ಜನರಲ್ಲಿ ದೂರಾಗಬೇಕು. ಈಗಿರುವ ಆಡಳಿತ ವ್ಯವಸ್ಥೆಯಲ್ಲಿ ಅರ್ಜಿ ಕೊಟ್ಟ ಮಾತ್ರಕ್ಕೆ ಕೆಲಸಗಳಾಗುವಂತಿದ್ದರೆ ನಮ್ಮ ದೇಶ ಸಿಂಗಾಪುರ ಮಾಡಬಹುದಿತ್ತು. ಇಂತಹ ಆಡಳಿತ ವ್ಯವಸ್ಥೆಯಲ್ಲಿ ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ಕೆಲವೊಂದು ಆಡಳಿತಾತ್ಮಕ ಮತ್ತು ಹಣಕಾಸಿನ ಸಂಪನ್ಮೂಲಗಳ ಕ್ರೋಢೀಕರಣ ಕಾರಣಗಳಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದು, ಆಧ್ಯತೆಯ ಮೇರೆಗೆ ಅವಶ್ಯಕ ಕೆಲಸಗಳಿಗೆ ಗಮನ ನೀಡಲಾಗುತ್ತಿದೆ ಎಂದು ಸಚಿವ ಲಾಡ್ ಹೇಳಿದರು.
ಬೆಣಚಿ ಗ್ರಾಮ ಪಂಚಾಯತ್ ಸದಸ್ಯ ಸಂದೀಪ ಪಾಟೀಲ ಮಾತನಾಡಿ, ಕಬ್ಬಿಗೆ ಹೆಚ್ಚುವರಿ ದರ ಕೊಡಿಸುವದು, ಪಿಎಂ ಕಿಸಾನ್ ಸಮ್ಮಾನ ಯೋಜನೆಯಡಿ ಹಿಂದೆ ರಾಜ್ಯ ಸರ್ಕಾರ ನೀಡುತ್ತಿದ್ದ ಪಾಲನ್ನು ಪುನರಾರಂಭಿಸುವಂತೆ ಮನವಿ ಮಾಡಿದರು.
ತಾಲೂಕಿನಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ ಹಣ ಬಾರದಿರುವ ವಿಷಯವೇ ಸಚಿವರ ಎದುರು ಪ್ರಮುಖವಾಗಿ ಚರ್ಚೆಯಾಯಿತು. ಈ ಕುರಿತು ಸಚಿವ ಲಾಡ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಶೀಘ್ರವಾಗಿ ಕುಟುಂಬದ ಸಮೀಕ್ಷೆ ಕೈಕೊಂಡು ಫಲಾನುಭವಿಗಳಿಗೆ ಯೋಜನೆಯ ಹಣ ತಲುಪಿಸುವ ಬಗ್ಗೆ ಸೂಚಿಸಿದರು.
ಜಲ ಜೀವನ ಮೀಷನ್:ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಕೇಳಿಬಂದ ದೂರುಗಳ ಬಗ್ಗೆ ಎರಡು ವಾರದೊಳಗಾಗಿ ಕುಲಂಕಷವಾಗಿ ಗುಣಮಟ್ಟವನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಣಚಿಯಲ್ಲಿ ಅನಾಥ ಮತ್ತು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಚಿವ ಲಾಡ್ ಆರ್ಥಿಕ ಸಹಾಯ ನೀಡುವ ವಾಗ್ದಾನ ಮಾಡಿದರು.
ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ಪ್ರಶಾಂತ ತುರಕಾಣಿ, ಸಂತೋಷಕುಮಾರ ತಳಕಲ್, ಸಿಪಿಐ ಸಮೀರ ಮುಲ್ಲಾ, ಬೆಣಚಿ ಗ್ರಾಪಂ ಅಧ್ಯಕ್ಷೆ ಗಂಗವ್ವ ಮುಷ್ಟಗಿ, ಅಲ್ಲಾಭಕ್ಷ ಬಡಗಿ, ಕಡಬಗಟ್ಟಿಯಲ್ಲಿ ರಾಜಶೇಖರ ಬೇಕ್ವಾಡಕರ, ಮಹಾದೇವಿ ಹಬ್ಬಣ್ಣವರ, ದಸ್ತಗೀರ ಹುಣಸಿಕಟ್ಟಿ, ಅರವಟಗಿಯಲ್ಲಿ ಅಶೋಕ ಜೊಡಟ್ಟಿ, ಉಮೇಶ ಬೂಮಣ್ಣವರ, ಸುರೇಶಗೌಡ ಕರಿಗೌಡರ, ಶ್ರೀಕಾಂತ ಗಾಯಕವಾಡ, ಲೋಕೋಪಯೋಗಿ ಇಲಾಖೆಯ ಉತ್ತಮ ಗದಗಕರ, ನೀರಾವರಿ ಇಲಾಖೆಯ ಆರ್.ಎಸ್. ಪಾಟೀಲ, ಕಾರ್ಮಿಕ ಇಲಾಖೆಯ ಭುವನೇಶ್ವರಿ ಕೋಟಿಮಠ, ಪಿಡಿಒಗಳಾದ ನಾಗರಾಜ ಪುಡಕಲಕಟ್ಟಿ, ಷಣ್ಮುಖ ಸುಳಗೇಕರ, ಮಹಾಂತೇಶ ಕುರಾಡಿ ಸಚಿವರಿಗೆ ಮಾಹಿತಿ ನೀಡಿದರು. ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.