ಕುಷ್ಟಗಿ:
ಪಟ್ಟಣದ ಎಸ್‌ವಿಸಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾಗೂ ಯುವಕರಲ್ಲಿ ಮಧುಮೇಹ ಸಾಮಾನ್ಯವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಸಿಬಿಎಸ್ಇ ಶಾಲೆಗಳಲ್ಲಿ ಅತಿಯಾದ ಸಕ್ಕರೆ ಸೇವನೆ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಫಲಕಗಳನ್ನು ಶಾಲಾ ಕೊಠಡಿಗಳಲ್ಲಿ ಅಳವಡಿಸಲು ನಿರ್ದೇಶನ ನೀಡಿದೆ ಎಂದರು.
ಮಧುಮೇಹದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿ ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗುತ್ತದೆ. ಇದು ದೇಶದ ಪ್ರಗತಿಗೆ ಮಾರಕ. ಹೀಗಾಗಿ ಮಧುಮೇಹ, ಹೃದಯ ರೋಗ, ರಕ್ತದ ಒತ್ತಡ ಹಾಗೂ ಇಂತಹ ರೋಗಗಳ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ವಿಜ್ಞಾನ ವಿಷಯವನ್ನು ಪಠ್ಯದಭಾಗವಾಗಿಸುವುದು ಸೂಕ್ತ. ಇದರಿಂದ ಮಕ್ಕಳು ಆರೋಗ್ಯವಂತ ಜೀವನ ನಡೆಸಲು ನೆರವಾಗುತ್ತದೆ ಎಂದು ಹೇಳಿದರು.
ಡಾ. ಮಂಜುನಾಥ ಅನಗೌಡರ ಮಾತನಾಡಿ, ರೋಗಗಳ ಅನುಪಸ್ಥಿತಿ ಆರೋಗ್ಯವಲ್ಲ. ದೈಹಿಕ, ಮಾನಸಿಕ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸದೃಢತೆ ಮತ್ತು ಸಮ್ಮಿಲನವೇ ಆರೋಗ್ಯ. ಇತ್ತೀಚಿನ ದಿನಗಳಲ್ಲಿ ಮೂವತ್ತು ವರ್ಷದ ಒಳಗಿನ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತದೆ. ಅತಿಯಾದ ಸಕ್ಕರೆ ಸೇವನೆ ಹಾಗೂ ಅನಾರೋಗ್ಯಕರ ಜೀವನ ಶೈಲಿಯಿಂದ ಚಿಕ್ಕ ಮಕ್ಕಳಲ್ಲಿ ಮಧುಮೇಹ ಪ್ರಕರಣಗಳ ಸಂಖ್ಯೆ ತ್ವರಿತವಾಗಿ ಏರುತ್ತಿದೆ. ಇದನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಶಾಲೆಗಳಲ್ಲಿಯೇ ಆರೋಗ್ಯ ಹಾಗೂ ರೋಗಗಳ ಕುರಿತು ಹೆಚ್ಚಿನ ಒತ್ತು ಕೊಟ್ಟರೆ ಆರೋಗ್ಯವಂತ ಸಮಾಜ ಹಾಗೂ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಹೇಳಿದರು.ವಿಜ್ಞಾನ ವಿಭಾಗದ ಯೋಜನಾ ನಿರ್ದೇಶಕರ ಅರುಣ್ ಕರ್ಮಾರ್ಕರ ಮಾತನಾಡಿ, ಶುಚಿತ್ವವೇ ದೈವತ್ವ. ಸ್ವಚ್ಛತೆಯಿದ್ದಲ್ಲಿ ಆರೋಗ್ಯ ಇರುತ್ತದೆ. ಹೀಗಾಗಿ ಸ್ವಚ್ಛತೆ ಕಡೆಗೆ ಮಕ್ಕಳು ಗಮನಕೊಡಬೇಕು. ಭಾರತೀಯ ಪರಂಪರೆಯಲ್ಲಿ ವೈದ್ಯರನ್ನು ದೇವರಿಗೆ ಹೋಲಿಸಿದ್ದಾರೆ. ವೈದ್ಯರ ಸೇವೆ ಸ್ಮರಿಸುವುದು ನಮ್ಮ ಕರ್ತವ್ಯ. ನಿಸ್ವಾರ್ಥ ಸೇವೆ ನೀಡುವ ವೈದ್ಯರನ್ನು ಸೃಷ್ಟಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದರು.
ಈ ವೇಳೆ ಸಿಬಿಎಸ್‌ಸಿ ಶಾಲೆಯ ಪ್ರಾಂಶುಪಾಲ ಮಹದೇವ ಮಧಾಲೆ, ಪ್ರಾಂಶುಪಾಲ ಭೀಮಸೇನಾಚಾರ್ಯ ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.