ಗಡಿನಾಡಿನ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲಿ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಗಡಿನಾಡು ಉಮರಾಣಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಗ್ರಂಥಗಳನ್ನು ಸಮ್ಮೇಳನ ಅಧ್ಯಕ್ಷರು ಬಿಡುಗಡೆಗೊಳಿಸಿದರು. ಗಡಿನಾಡು ಕನ್ನಡಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಗಡಿನಾಡು ತಾಲೂಕುಗಳನ್ನು ಕರ್ನಾಟಕ ಸರ್ಕಾರ ಅಧಿಕೃತವಾಗಿ ತನ್ನ ಕಾರ್ಯ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಹಾಗೂ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶ್ರೀಶೈಲ ಅವಟಿ ಬೇಸರಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಗಡಿನಾಡು ಕನ್ನಡಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಗಡಿನಾಡು ತಾಲೂಕುಗಳನ್ನು ಕರ್ನಾಟಕ ಸರ್ಕಾರ ಅಧಿಕೃತವಾಗಿ ತನ್ನ ಕಾರ್ಯ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಹಾಗೂ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶ್ರೀಶೈಲ ಅವಟಿ ಹೇಳಿದರು.

ಮಹಾರಾಷ್ಟ್ರದ ಜತ್ತ ತಾಲೂಕಿನ ಉಮರಾಣಿ ಗ್ರಾಮದ ಮಾತಾಜಿ ಅಕ್ಕಮಹಾದೇವಿ ಜ್ಞಾನ ಯೋಗಾಶ್ರಮದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಿ ಭಾಗದ ಜನತೆಗೆ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ರಸ್ತೆ ಸುಧಾರಣೆ, ರೈತರ ಜಮೀನುಗಳಿಗೆ ನೀರಾವರಿ ವ್ಯವಸ್ಥೆ, ರೈತರ ಮಕ್ಕಳಿಗೆ ಕನ್ನಡ ಶಾಲೆಗಳ ಸುಧಾರಣೆ, ಶಿಕ್ಷಕರ ಕೊರತೆ ನೀಗಿಸುವಲ್ಲಿ ಸರ್ಕಾರ ಹೆಚ್ಚಿನ ಅನುದಾನ ಒದಗಿಸದೇ ಗಡಿನಾಡಿನ ಕನ್ನಡಿಗರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಆದ್ದರಿಂದ ಕರ್ನಾಟಕ ಸರ್ಕಾರ ಗಡಿನಾಡಿನ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ಒದಗಿಸಬೇಕು. ಗಡಿನಾಡು ಕನ್ನಡಿಗರ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಡಿಭಾಗದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಬೇಕು. ಈ ಭಾಗದ ದೇವಸ್ಥಾನಗಳನ್ನ ಜೀರ್ಣೋದ್ಧಾರಗೊಳಿಸುವ ಮೂಲಕ ಓದುಗರಿಗೆ ಗ್ರಂಥಾಲಯಗಳನ್ನು ಸ್ಥಾಪಿಸಿ ಉಚಿತ ಪುಸ್ತಕ ಹಾಗೂ ಪತ್ರಿಕೆಗಳನ್ನು ಒದಗಿಸಬೇಕು. ಗಡಿ ಭಾಗದ ಪ್ರತಿ ತಾಲೂಕಿನಲ್ಲಿಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿನಿಧಿಗಳನ್ನು ನಿಯೋಜಿಸಬೇಕು. ಗಡಿಭಾಗದ ರೈತರಿಗೆ ಕೃಷಿ ಸಾಲ ಮತ್ತು ಇನ್ನಿತರ ಸೌಲಭ್ಯಗಳು ದೊರಕಬೇಕು. ಇದಲ್ಲದೆ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಡಿ ಭಾಗದ ಕನ್ನಡ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಕೊರತೆ ಇರುವ ಶಿಕ್ಷಕರನ್ನ ಕೂಡಲೇ ನೇಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಉಮರಾಣಿ ಶ್ರೀಮಠದ ಅಕ್ಕಮಹಾದೇವಿ ಮಾತಾಜಿ ನಾಡದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜಿಸಲ್ಲಿಸಿ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಕನ್ನಡ ಕೇವಲ ಒಂದು ಭಾಷೆಯಲ್ಲ. ಅದೊಂದು ಭವ್ಯ ಪರಂಪರೆ ಮತ್ತು ಸಂಸ್ಕೃತಿಯಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಕನ್ನಡಿಗರಿಗಾಗಿ ಶ್ರೀಮಠದಿಂದ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲರೂ ತನು-ಮನ ದನದಿಂದ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಸದ್ಭಕ್ತರ ಕಾರ್ಯವನ್ನು ಸ್ಮರಿಸಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಗಡಿನಾಡ ಕನ್ನಡ ಸಾಹಿತಿಗಳು ರಚಿಸಿದ ವಿವಿಧ ಪುಸ್ತಕಗಳನ್ನು ಸಮ್ಮೇಳನ ಅಧ್ಯಕ್ಷರು ಮತ್ತು ಗಣ್ಯರು ಬಿಡುಗಡೆಗೊಳಿಸಿದರು. ಸಾನ್ನಿಧ್ಯ ವಹಿಸಿದ್ದ ಗದಗದ ಅಕ್ಕ ಮಹಾದೇವಿತಾಯಿ, ಚಿಕ್ಕಪಡಸಲಗಿ ಅಕ್ಕಮಹಾದೇವಿತಾಯಿ, ಸಾಹಿತಿ ಮಲಿಕಜಾನ ಶೇಖ, ಬಾಬುರಾವ ದೇವನಾಯಿಕ, ಧರೇಪ್ಪ ಕಟ್ಟಿಮನಿ, ಅಶೋಕ ಸಾವಳಗಿ, ಚನ್ನಪ್ಪ ಸುತ್ತಾರ, ಮಾಣಿಕಪ್ರಭು ಬಡಿಗೇರ, ಕಾಡಪ್ಪ ನಾಗರಾಳ, ಚಿಕ್ಕಯ್ಯ ನಂದಿಕೊಲ, ಚನ್ನಪ್ಪ ಮಾಳಿ, ಪರಶುರಾಮ ಭೋರಾಡೆ, ಬಾಬು ಕೋಳಿ, ಮಹಾದೇವ ಪಾಚೋಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕಿ ಮೀನಾಕ್ಷಿ ಹತ್ತಿ ಸ್ವಾಗತಿಸಿ, ಪ್ರಸ್ತಾಪಿಕವಾಗಿ ಮಾತನಾಡಿದರು. ಜಯಾನಂದ ತುಂಗಳ ನಿರೂಪಿಸಿದರು. ಭಾಗ್ಯಶ್ರೀ ವಂದಿಸಿದರು.

---------------

ಬಾಕ್ಸ್...

ನಾಡದೇವಿ ಭುವನೇಶ್ವರಿ ಭಾವಚಿತ್ರ, ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಗಡಿನಾಡು ಉಮರಾಣಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗ್ರಾಮದಲ್ಲಿ ಕನ್ನಡದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಾಡದಿವಿ ಭುವನೇಶ್ವರಿಯ ಭಾವಚಿತ್ರಕ್ಕೆ ಪ್ರಗತಿಪರ ರೈತ ಮುಖಂಡ ದುಂಡಪ್ಪ ಬಿರಾದಾರ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಗಡಿನಾಡಿನ ವಿವಿಧ ಗ್ರಾಮಗಳ ಕನ್ನಡಿಗರು, ಶಾಲಾ ಮಕ್ಕಳು, ಶಿಕ್ಷಕ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನದ ಮೆರವು ಹೆಚ್ಚಿಸಿದರು.

---------

ಕೋಟ್‌...

ಜಗತ್ತಿನ 2700 ಭಾಷೆಗಳಿವೆ. ನಮ್ಮ ಭಾರತದಲ್ಲಿ 27 ಭಾಷೆಗಳಿದ್ದು, ಅದರಲ್ಲಿ ಕನ್ನಡ ಭಾಷೆ ಮೂರನೇ ಸ್ಥಾನದಲ್ಲಿದೆ. ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ನಾವು ನಮ್ಮ ಮಕ್ಕಳಿಗೆ ಕನ್ನಡ ಕಲಿಸಬೇಕು. 12ನೇ ಶತಮಾನದಲ್ಲಿ ಶಿವಶರಣರು ನೀಡಿದ ವಚನ ಸಾಹಿತ್ಯವನ್ನು ಮಕ್ಕಳಿಗೆ ಕಲಿಸಿಕೊಡುವುದರ ಜೊತೆಗೆ ನಮ್ಮ ಮಾತೃಭಾಷೆ ಕನ್ನಡ ಉಳಿಸಿ ಬೆಳಿಸಬೇಕು.

-ಶ್ರೀಶೈಲ ಅವಟಿ, ಸಮ್ಮೇಳನಾಧ್ಯಕ್ಷರು.

Share this article