ದೇಶಿ ತಳಿಯ ಜಾನುವಾರುಗಳ ಸಂರಕ್ಷಣೆಯಾಗಲಿ: ರೈತ ಮುಖಂಡ ಗಂಗಣ್ಣ ಎಲಿ

KannadaprabhaNewsNetwork | Published : Mar 4, 2025 12:30 AM

ಸಾರಾಂಶ

ನಮ್ಮ ದೇಶೀಯ ಗೋವುಗಳಿಗೆ ದೈವಿ ಶಕ್ತಿಯಿದೆ. ನಮ್ಮ ಜನರಲ್ಲಿ ಪೂಜ್ಯನೀಯ ಭಾವನೆ ಮೂಡಲಿದೆ. ದೇಶಿಯ ತಳಿಗಳಲ್ಲಿರುವ ಶಕ್ತಿಯನ್ನು ಅರಿತಂತಹ ಜಗತ್ತು ಇವುಗಳಿಂದ ಆಗುವಂತಹ ಬಹುಪಯೋಗವನ್ನು ಕಂಡು ನಿಬ್ಬೆರಗಾಗಿದ್ದು ಸುಳ್ಳಲ್ಲ.

ಬ್ಯಾಡಗಿ: ವ್ಯಾಪಾರೀಕರಣದ ಒಳಸುಳಿಗೆ ಸಿಲುಕುತ್ತಿರುವ ರೈತರು ಪರಿಸರಕ್ಕೆ ಪೂರಕವಾಗಿರುವ ದೇಶಿಯ ತಳಿಯ ಜಾನುವಾರುಗಳನ್ನು ಸಂರಕ್ಷಣೆ ಮಾಡದೆ ಹೋದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಈ ತಳಿಯ ಜಾನುವಾರುಗಳನ್ನು ಹುಡುಕಬೇಕಾಗುತ್ತದೆ ಎಂದು ರೈತ ಮುಖಂಡ ಗಂಗಣ್ಣ ಎಲಿ ಎಚ್ಚರಿಸಿದರು.ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಪಶು ಸಂಗೋಪನಾ ಇಲಾಖೆ ಸಹಯೋಗದಲ್ಲಿ ಪಟ್ಟಣದ ಸಂತೆ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ದೇಶಿಯ ತಳಿ ಜಾನುವಾರು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಹೈಬ್ರಿಡ್ (ಎಚ್‌ಎಫ್) ತಳಿಗಳು ನಮ್ಮ ದೇಶೀಯ ತಳಿಗಳಂತೆ ಆಕಾರ, ಆಹಾರ, ಹಾಲಿನಲ್ಲಿ ಪೌಷ್ಟಿಕಾಂಶ, ಗಂಜಲ, ಗಟ್ಟಿತನ ಸೇರಿದಂತೆ ಯಾವುದರಲ್ಲೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕೇವಲ ಹಣ ಮಾಡುವುದಕ್ಕಾಗಿಯೇ ವಿದೇಶಗಳಲ್ಲಿ ಹೈಬ್ರಿಡ್ ತಳಿಯನ್ನು ಸೃಷ್ಟಿಸಲಾಯಿತು. ದೇಶಿ ಜಾನುವಾರುಗಳಿಂದ ಕನಿಷ್ಠ 12 ವರ್ಷ ಕೃಷಿಯನ್ನು ನಡೆಸಬಹುದು ಹಾಗೂ ಪರಿಸರದಲ್ಲಿ ಸಿಗುವಂತಹ ಕಸಕಡ್ಡಿ, ಹುಲ್ಲು ತಿಂದು ಗುಣಮಟ್ಟದ ಹಾಲನ್ನು ನೀಡುತ್ತವೆ ಎಂದರು. ವಿಶ್ವ ಶ್ರೇಷ್ಠ ತಳಿ: ನಮ್ಮ ದೇಶೀಯ ಗೋವುಗಳಿಗೆ ದೈವಿ ಶಕ್ತಿಯಿದೆ. ನಮ್ಮ ಜನರಲ್ಲಿ ಪೂಜ್ಯನೀಯ ಭಾವನೆ ಮೂಡಲಿದೆ. ದೇಶಿಯ ತಳಿಗಳಲ್ಲಿರುವ ಶಕ್ತಿಯನ್ನು ಅರಿತಂತಹ ಜಗತ್ತು ಇವುಗಳಿಂದ ಆಗುವಂತಹ ಬಹುಪಯೋಗವನ್ನು ಕಂಡು ನಿಬ್ಬೆರಗಾಗಿದ್ದು ಸುಳ್ಳಲ್ಲ. ಭಾರತದಲ್ಲಿ ಕೇವಲ ಹಾಲಿನ ಉತ್ಪನ್ನಗಳಿಗಾಗಿ ಮಾತ್ರ ಜಾನುವಾರು ಸಾಕುತ್ತಿರಲ್ಲಿಲ್ಲ. ಬದಲಾಗಿ ಜಾನುವಾರುಗಳು ನಮ್ಮ ಮನೆಗಳ ಸದಸ್ಯರಂತೆ ಇರುತ್ತಿದ್ದವು ಎಂದರು.ವಿಶೇಷ ಗುಣ: ವರ್ತಕ ಕುಮಾರಗೌಡ್ರ ಪಾಟೀಲ ಮಾತನಾಡಿ, ಕಳೆದ ಹಲವು ದಶಕದಿಂದ ವಿದೇಶಿ ತಳಿ ಜಾನುವಾರುಗಳೇ ಶ್ರೇಷ್ಠವೆಂಬಂತೆ ಬಿಂಬಿಸಲಾಗುತ್ತಿದೆ. ದೇಶಿ ತಳಿಗಳ ಹಾಲು ಅವುಗಳ ಸಗಣಿ ಗೋಮೂತ್ರವನ್ನು ಸಹ ಕೃಷಿಯಲ್ಲಿ ಮರುಬಳಕೆ ಮಾಡುವ ಮೂಲಕ ಗುಣಮಟ್ಟದ ಬೆಳೆ ಪಡೆಯಲು ಸಾಧ್ಯ ಎಂಬುದು ವೈಜ್ಞಾನಿಕ ಪರೀಕ್ಷೆಗಳಿಂದ ಸಾಬೀತಾಗಿದೆ. ದೇಶಿ ತಳಿ ಹಸುವಿನ ಹಾಲು ವಿಶೇಷ ಗುಣವನ್ನ ಹೊಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.ವಿನಾಶದ ಅಂಚಿಗೆ ತಳಿಗಳು: ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಒಂದು ಕಾಲದಲ್ಲಿ ಭಾರತದಲ್ಲಿ 120ಕ್ಕೂ ಹೆಚ್ಚು ದೇಶೀಯ ತಳಿ ಹಸುಗಳಿದ್ದವು. ಆದರೆ ಕಾಲಕ್ರಮೇಣ ಕೇವಲ 37 ತಳಿಗಳು ಮಾತ್ರ ಉಳಿದುಕೊಂಡಿದ್ದು, ಇವುಗಳನ್ನು ಸಂರಕ್ಷಣೆ ಮಾಡಿಕೊಳ್ಳದೇ ಹೋದಲ್ಲಿ ಶೀಘ್ರದಲ್ಲಿಯೇ ಈ ತಳಿಗಳು ಕೂಡ ಮಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.ಕಾರ್ಯಕ್ರಮದಲ್ಲಿ ಗಂಗಾಧರ ಶಾಸ್ತ್ರಿಗಳು ಹಿರೇಮಠ, ಪಶುಸಂಗೋಪನಾ ಜಿಲ್ಲಾ ಉಪನಿದೇಶಕ ಡಾ. ಎಸ್.ವಿ. ಸಂಪಿ, ಪಶು ವೈದ್ಯಾಧಿಕಾರಿ ಡಾ. ಜಯಕುಮಾರ ಕಂಕನವಾಡಿ, ಸಹಾಯಕ ನಿರ್ದೇಶಕ ಡಾ. ಎನ್.ಎಚ್. ಚೌಡಾಳ, ಡಾ. ಖಾಜಾ ನಿಜಾಮುದ್ದೀನ್, ಡಾ. ರಮೇಶ ಬ್ಯಾಡಗಿ ಡಾ. ಉಮೇಶ ಹೊನ್ನತ್ತಿ, ಎನ್.ಎಸ್. ಬಣಕಾರ ಎನ್.ಎಂ. ಕಲ್ಲಶೆಟ್ಟಿ ಹಾಗೂ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಶಂಭು ಮಠದ, ಈಶ್ವರ ಮಠದ ಸೇರಿದಂತೆ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಸಾವಿರಾರು ಜನ ವೀಕ್ಷಣೆ...

ಕಿಲಾರಿ, ಗಿರ್, ಹಳ್ಳಿಕಾರ್, ಮಲೆನಾಡ ಗಿಡ್ಡ, ಶಿರೋಯಿ, ಬಿಟೆಲ್ ಸೇರಿದಂತೆ ವಿವಿಧ ಹಸುಗಳು, ಕೋಳಿಗಳು ಸೇರಿದಂತೆ ಹಲವು ಜಾನುವಾರುಗಳು ಜಾತ್ರೆಯಲ್ಲಿ ಪ್ರದರ್ಶನಗೊಂಡವು. ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಜಾನುವಾರು ಪ್ರದರ್ಶನ ವೀಕ್ಷಣೆ ಮಾಡಿದರು.

Share this article