ವಕ್ಫ್‌ ಕಾಯ್ದೆ ಬದಲಾವಣೆ ತರಲು ಕಾಂಗ್ರೆಸ್‌ ಬೆಂಬಲ ಕುರಿತು ಸ್ಪಷ್ಟಪಡಿಸಲಿ - ಸಚಿವ ಜೋಶಿ

KannadaprabhaNewsNetwork | Updated : Nov 12 2024, 01:04 PM IST

ಸಾರಾಂಶ

ಸರ್ಕಾರ ವಕ್ಫ್ ನೋಟಿಸ್ ವಾಪಸ್ ಪಡೆಯುವುದಾಗಿ ಹೇಳುತ್ತಿದೆ. ನೋಟಿಸ್ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಕೇಂದ್ರದಲ್ಲಿ ವಕ್ಫ್ ಕಾಯ್ದೆಗೆ ಬದಲಾವಣೆ ತರಲು ಕಾಂಗ್ರೆಸ್ ಬೆಂಬಲ ನೀಡುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರಶ್ನಿಸಿದರು.

ಹಾವೇರಿ (ಶಿಗ್ಗಾಂವಿ): ಸರ್ಕಾರ ವಕ್ಫ್ ನೋಟಿಸ್ ವಾಪಸ್ ಪಡೆಯುವುದಾಗಿ ಹೇಳುತ್ತಿದೆ. ನೋಟಿಸ್ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಕೇಂದ್ರದಲ್ಲಿ ವಕ್ಫ್ ಕಾಯ್ದೆಗೆ ಬದಲಾವಣೆ ತರಲು ಕಾಂಗ್ರೆಸ್ ಬೆಂಬಲ ನೀಡುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರಶ್ನಿಸಿದರು.ಶಿಗ್ಗಾಂವಿ ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಕ್ಪ್‌ನಿಂದ ತೊಂದರೆ ಅನುಭವಿಸುತ್ತಿರುವವರ ಒಂದು ಸಮಾವೇಶ ಮಾಡಿ ಜನರಿಂದ ಅಹವಾಲು ಸ್ವೀಕರಿಸುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದೇನೆ. ಶಿಗ್ಗಾಂವಿ ಸಂತೆ ಬೈಲಿನಲ್ಲಿ ಪುರಸಭೆ ಆಸ್ತಿ ಎಂದು ಸ್ಪಷ್ಟವಾಗಿದೆ. ಆದರೂ ಅಲ್ಲಿ ಹಸಿರು ಜಂಡಾ ಹಾಕಿದ್ದಾರೆ. ಎಸ್‌ಪಿಗೆ ಹೇಳಿ ತೆಗೆಸಿ ಅಂತಾ. ಮತ್ತೊಬ್ಬರು ಹಾಕಿದರೆ ಕೋಮುಗಲಭೆ ಆಗುತ್ತವೆ ಎಂದರೂ ತೆಗೆಸಿಲ್ಲ. ಅದಕ್ಕೂ ಗಂಭೀರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಎ1 ಆಡಳಿತ: ರಾಜ್ಯದಲ್ಲಿ ಎ1 ಆಡಳಿತ ನಡೆದಿದೆ ಅಂದರೆ ಆರೋಪಿ ನಂಬರ್ ಒನ್ ಆಡಳಿತ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಶಃ ಇದು ತಮ್ಮ ಕೊನೆಯ ಅವಧಿ ಎಂದು ತಿಳಿದು ಅತ್ಯಂತ ನಿರ್ಲಜ್ಯತನದಿಂದ ವರ್ತಿಸಲು ತೀರ್ಮಾನಿಸಿದಂತೆ ಕಾಣುತ್ತದೆ. ಅಬಕಾರಿ ಇಲಾಖೆಯಲ್ಲಿ ₹700 ಕೋಟಿ ಅವ್ಯವಹಾರ ಸಾಬೀತುಪಡಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಇಲ್ಲದಿದ್ದರೆ ನೀವು ರಾಜೀನಾಮೆ ಕೊಡಿ ಎಂದು ಪ್ರಧಾನಿಗೆ ಸವಾಲು ಹಾಕಿದ್ದಾರೆ. ಈ ಆರೋಪವನ್ನು ನಾವು ಮಾಡಿದ್ದಲ್ಲ. ಮದ್ಯ ಮಾರಾಟಗಾರರೇ ಆರೋಪಿಸಿದ್ದಾರೆ. ಅವರನ್ನು ಕರೆದು ಕೇಳಿದ್ದೀರಾ ಎಂದು ಪ್ರಶ್ನಿಸಿದರು.

ಕಳೆದ 25 ವರ್ಷದಲ್ಲಿ ನರೇಂದ್ರ ಮೋದಿ ಒಮ್ಮೆಯೂ ಸೋತಿಲ್ಲ. ಗುಜರಾತ್‌ನಲ್ಲಿ ಬಿಜೆಪಿ ಸೋತಿಲ್ಲ. ನಿಮ್ಮ ತುಷ್ಟೀಕರಣದ ಪರಾಕಾಷ್ಠೆಯಿಂದ ಐದು ವರ್ಷ ಸಿಎಂ ಇದ್ದ ನಿಮ್ಮನ್ನು ನಿಮ್ಮ ಕ್ಷೇತ್ರದ ಜನತೆ ಸೋಲಿಸಿದ್ದಾರೆ. ಅರ್ಕಾವತಿ ರೀಡು ಆರೋಪ, ವಾಚ್ ಉಡುಗೊರೆ ಆರೋಪ, ಈಗ ಮುಡಾ, ಅಬಕಾರಿ, ಕಾರ್ಮಿಕ ಇಲಾಖೆ ಹಗರಣಗಳು ನಿಮ್ಮ ಸುತ್ತಮುತ್ತ ಅಂಟಿಕೊಂಡಿವೆ.

 ಮೋದಿ ಅವರ ವಿರುದ್ಧ ಒಂದೇ ಒಂದು ಆರೋಪವಿಲ್ಲ. ದುರುದ್ದೇಶಪೂರಕವಾಗಿ ಪ್ರಶ್ನಿಸುತ್ತೀರಿ ಎಂದರು.ಬಿಜೆಪಿಯ 2014ರ ಪ್ರಣಾಳಿಕೆಯಲ್ಲಿ ವಕ್ಫ್ ಪರವಾಗಿ ಸೇರಿಸಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಶಿ, ವಕ್ಫ್ ಒಬ್ಬರ ಆಸ್ತಿ ಆಗಬಾರದು. ಜಿಲ್ಲೆ ಓಡಾಡಿ ಡಿಸಿ, ತಹಸೀಲ್ದಾರ್‌ರಿಗೆ ಧಮ್ಕಿ ಹಾಕಿ ಅಮಾಯಕರ ಭೂಮಿ ವಶಪಡಿಸಿಕೊಳ್ಳಿ ಎಂದು ನಾವು ಹೇಳಿಲ್ಲ. ಕಾನೂನು ಬದ್ಧವಾಗಿ ಇದ್ದರೆ ಮಾತ್ರ ಮಾಡಿ ಎಂದಿದ್ದೇವೆ. ಯಾವುದಕ್ಕೆ ಬೇಕು ಅದಕ್ಕೆ ಬಳಸಿಕೊಳ್ಳಿ ಎಂದಿದ್ದೇವೆ. ಮುಂದೆಯೂ ಹೇಳುತ್ತೇವೆ ಎಂದರು.

ಒಳಮೀಸಲಾತಿ ಮೋಸ: ಸಂಸದ ಗೋವಿಂದ ಕಾರಜೋಳ ಮಾತನಾಡಿ, ಬೊಮ್ಮಾಯಿ ಸಿಎಂ ಇದ್ದಾಗ ಒಳಮೀಸಲಾತಿ ವರ್ಗೀಕರಣ ಮಾಡಿ ಕಳುಹಿಸಿದ್ದನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿದೆ. ಆದರೆ, ಸಿಎಂ, ಡಿಸಿಎಂ, ಖರ್ಗೆ ಎಲ್ಲ ಸೇರಿ ದಲಿತರಿಗೆ ಮೋಸ ಮಾಡುತ್ತಿದ್ದಾರೆ. ಮೊದಲ ಕ್ಯಾಬಿನೆಟ್‌ನಲ್ಲೇ ಒಳಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿದ್ದ ಸರ್ಕಾರ ಈಗ ಮರೆತಿದೆ. ದಲಿತರ ಓಟು ಕೇಳಲು ನಿಮಗೆ ನೈತಿಕತೆ ಇಲ್ಲ ಎಂದರು.ಕಾಂಗ್ರೆಸ್ ಸತ್ತ ಸರ್ಕಾರ, ಸಚಿವರು ಶಾಸಕರು ರಣಹದ್ದಿನಂತೆ ಹರಿದುಕೊಂಡು ತಿನ್ನುತ್ತಿದ್ದಾರೆ. ಜನ ಇವರನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಶೀಘ್ರದಲ್ಲೇ ಶಿಕ್ಷೆ ಪ್ರಮಾಣ ಘೋಷಣೆಯಾಗುತ್ತದೆ. ಚುನಾವಣೆ ನಂತರ ಡಿಸೆಂಬರ್ 1ರ ವೇಳೆಗೆ ರಾಜ್ಯ ಸರ್ಕಾರ ಪತನವಾಗುತ್ತದೆ.ಶಾಸಕರಾದ ಎಸ್.ಟಿ. ಶ್ರೀವತ್ಸ, ಎಸ್.ವಿ. ಸಂಕನೂರ, ಸುರಭಿ ಬಡಿಗೇರ, ರಾಜಣ್ಣ ಕೊರವಿ, ಬಿ. ನರಸಪ್ಪ, ಶಿವಾನಂದ ಮ್ಯಾಗೇರಿ, ಇತರರಿದ್ದರು.

ಕುನ್ನಾ ಅವರಿಗೆ ವಿಷಾದ ವ್ಯಕ್ತಪಡಿಸುವೆ: ನ್ಯಾಯಮೂರ್ತಿ ಕುನ್ನಾ ಅವರ ಬಗ್ಗೆ ಗೌರವವಿದೆ. ಅವರು ಸರ್ಕಾರದ ಏಜೆಂಟರು ಎಂದಿಲ್ಲ. ಅವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಸರ್ಕಾರ ತರಾತುರಿಯಲ್ಲಿ ಯಡಿಯೂರಪ್ಪ ಅವರಿಗೆ ನೋಟಿಸ್ ಕೊಟ್ಟಿದೆ. ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಎಂದಿದ್ದೇನೆ. ಯಡಿಯೂರಪ್ಪ ಅವರಂಥ ಹಿರಿಯರಿಗೆ ಮಾಹಿತಿ ನೀಡದೇ ಪ್ರಾಸಿಕ್ಯೂಶನ್‌ಗೆ ಕೊಡುತ್ತಾರೆ ಎಂದರೆ ಹೇಗೆ? ಏಕಪಕ್ಷೀಯವಾಗಿ ಮಾಡಿದ್ದಾರೆ. ಇದು ನಮ್ಮ ಪ್ರಶ್ನೆಯಾಗಿದೆ. ಆದರೂ ನ್ಯಾಯಮೂರ್ತಿ ಕುನ್ನಾ ಅವರಿಗೆ ಬೇಸರವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಜೋಶಿ ಹೇಳಿದರು.

Share this article