ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇಶದ ಎಲ್ಲ ನದಿಗಳ ಶುದ್ಧತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮದಾಗಬೇಕು ಎಂದು ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಶಿವಮೊಗ್ಗ ನಿರ್ಮಲ ತುಂಗಭದ್ರಾ ಅಭಿಯಾನ ತಂಡವು ಹಿರೇಕಲ್ಮಠಕ್ಕೆ ಶನಿವಾರ ಭೇಟಿ ನೀಡಿ, ಶ್ರೀಗಳ ಸಹಕಾರ ಕೋರಿದ ಸಂದರ್ಭದಲ್ಲಿ ಅವರು ಮಾತನಾಡಿದರು. ನಮ್ಮ ಸಂಪನ್ಮೂಲಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಬಹುಮುಖ್ಯ ಕರ್ತವ್ಯ ಮಾನವರದ್ದಾಗಿದೆ. ಈ ನಿಟ್ಟಿನಲ್ಲಿ ಜೀವ, ಜಲ, ನೀರು ಅಮೂಲ್ಯವಾದುದು. ಇದನ್ನು ಮನಗಂಡು ನದಿಯ ಶುದ್ಧತೆ ಮತ್ತು ಪಾವಿತ್ಯತೆ ಕಾಪಾಡಲು ಮುಂದಾಗಬೇಕು ಎಂದು ಹೇಳಿದರು.
ಮಾನವನ ಚಟುವಟಿಕೆಯಿಂದ ಶುದ್ಧ ನೀರು, ಮಣ್ಣು ಕಲುಷಿತಗೊಂಡಿದೆ. ಮುಂದಿನ ದಿನಗಳಲ್ಲಿ ಹರಿಯುವ ನೀರು, ಆಹಾರ ಕೊಡುವ ಮಣ್ಣನ್ನು ಸಂರಕ್ಷಣೆ ಮಾಡದೇ ಹೋದರೆ ಮನುಕುಲಕ್ಕೆ ಆಪತ್ತು ತಪ್ಪಿದ್ದಲ್ಲ ಎಂದರು.ಶಿವಮೊಗ್ಗ ನಿರ್ಮಲ ತುಂಗಭದ್ರಾ ಅಭಿಯಾನ ತಂಡವು ಮೊದಲ ಹಂತವಾಗಿ ತುಂಗಾ, ಭದ್ರಾ ನದಿಗಳ ಮೂಲದಿಂದ ಕಿಷ್ಕಿಂದಿವರೆಗೆ ನದಿ ಶುದ್ಧತೆ ಕಾಪಾಡಲು ಮುಂಬರುವ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಬೃಹತ್ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆ ಹಮ್ಮಿಕೊಂಡಿರುವುದು ಶ್ಲಾಘನೀಯ ಹಾಗೂ ಪುಣ್ಯದ ಕೈಂಕರ್ಯ. ಪಾದಯಾತ್ರೆಯಲ್ಲಿ ನಮ್ಮ ಸಂಸ್ಥೆ ವತಿಯಿಂದ ನಡೆಯುವ ಎಲ್ಲಾ ಶಾಲಾ, ಕಾಲೇಜುಗಳ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಎಂದರು.ಶಿವಮೊಗ್ಗ ನಿರ್ಮಲ ತುಂಗಭದ್ರಾ ಅಭಿಯಾನ ತಂಡದ ಪ್ರಮುಖರಾದ ನಿವೃತ್ತ ಉಪನ್ಯಾಸಕ ಡಾ. ವರದರಾಜ್ ಪಾದಯಾತ್ರೆ ಮುಖ್ಯ ಉದ್ದೇಶಗಳ ಬಗ್ಗೆ ಮಾತನಾಡಿ, ಅಕ್ರಮ ಹಾಗೂ ಅವೈಜ್ಞಾನಿಕ ನದಿ ಮರಳು ಗಣಿಗಾರಿಕೆಯಿಂದ ನದಿ ದಂಡೆ ಕೊರತದಿಂದ ಜಲಚರ ಸಂತತಿಗಳು ನಾಶವಾಗುತ್ತಿದ್ದು ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ವಿವರಿಸಿದರು.ಶಿವಮೊಗ್ಗ ನಿರ್ಮಲ ತುಂಗಭದ್ರಾ ಅಭಿಯಾನ ತಂಡ ಪ್ರಮುಖರಾದ ನಿವೃತ್ತ ಪ್ರಾಂಶುಪಾಲ ಡಾ. ಬಿ.ಎಂ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಧಾರವಾಡ ಐಐಟಿ ಪ್ರಾಧ್ಯಾಪಕ ಶ್ರೀಪತಿ, ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್, ಬಾಲಕೃಷ್ಣ ಹೆಗ್ಡೆ, ಹಾಲೇಶಪ್ಪ, ಶಿವಪ್ಪ ಹಾಗೂ ಇತರರು ಇದ್ದರು.