ಮಂಗಳೂರಿನಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ನಲಿನ್ ಅತುಲ್ ಹೇಳಿಕೆ
ಕನ್ನಡಪ್ರಭ ವಾರ್ತೆ ಕುಕನೂರುಜನರ ಸೇವೆ ಮಾಡುವುದು ಪ್ರತಿಯೊಬ್ಬ ಅಧಿಕಾರಿಗಳ ಧ್ಯೇಯ ಆಗಬೇಕು. ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಲು ಜನಸ್ಪಂದನದ ಮೂಲಕ ಜಿಲ್ಲಾಡಳಿತವು ಗ್ರಾಮಸ್ಥರ ಮನೆ ಬಾಗಿಲಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ತಾಲೂಕಿನ ಮಂಗಳೂರ ಗ್ರಾಮದ ಬಾಪೂಜಿ ಡಿಇಡಿ ಕಾಲೇಜಿನ ಆವರಣದಲ್ಲಿ ಜರುಗಿದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಸಭೆ ನಡೆಸಿ ಸಾರ್ವಜನಿಕರಿಗೆ ಆಸರೆಯಾಗುವ ಪ್ರತಿಯೊಂದು ಯೋಜನೆಗಳ ಸಾಧನೆಗಳ ಬಗ್ಗೆ ಪರಿಶೀಲಿಸಿ, ಆಯಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುತ್ತಿದೆ. ಇನ್ನು ಹೆಜ್ಜೆ ಮುಂದೆ ಹೋಗಿ ಸರ್ಕಾರದ ನಿರ್ದೇಶನದಂತೆ ಗ್ರಾಮ ಮತ್ತು ಹೋಬಳಿಗೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತೆರಳಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಗ್ರಾಮಸ್ಥರ ಅಹವಾಲು ಆಲಿಸಲಾಗುತ್ತಿದೆ ಎಂದರು.ಗ್ರಾಮ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು.
ಕುಕನೂರು ತಾಲೂಕಿನಲ್ಲಿ 23,781 ಮಂಗಳೂರ ಹೋಬಳಿಯಲ್ಲಿ 8026 ಜನರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕುಕನೂರ ತಾಲೂಕಿನಲ್ಲಿ 26,626 ಜನರು ಮತ್ತು ಮಂಗಳೂರ ಹೋಬಳಿಯಲ್ಲಿ 3993 ಜನರು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯಲುಬರ್ಗಾ ಮತ್ತು ಕುಕನೂರ ತಾಲೂಕಿನಲ್ಲಿ 745 ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ಸ್ಟೈಪಂಡ್ ಪಡೆಯುತ್ತಿದ್ದಾರೆ ಎಂದರು.ಜಿಲ್ಲೆಗೆ ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಏಪ್ರಿಲ್ 2024ರವರೆಗೆ ಅರ್ಹ ಫಲಾನುಭವಿಗಳಿಗೆ ಅನುದಾನವನ್ನು ಡಿಬಿಟಿ ತಂತ್ರಾಂಶದ ಮೂಲಕ ವರ್ಗಾಯಿಸಲಾಗಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಜು. 31ರೊಳಗೆ ಖುದ್ದು ರೈತರು ಅಥವಾ ಖಾಸಗಿ ನಿವಾಸಿಗಳ ಮೂಲಕಬೆಳೆ ಸಮೀಕ್ಷೆಯನ್ನು ಕಡ್ಡಾಯವಾಗಿ ಆ್ಯಪ್ ಮೂಲಕ ಮಾಡಿಕೊಳ್ಳಬೇಕು. ಬೆಳೆ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಬ್ಯಾಂಕಿನ ಬೆಳೆ ಸಾಲ ಪಡೆಯಲು ಈ ಬೆಳೆ ಸಮೀಕ್ಷೆಯ ಡಾಟಾ ಅತೀ ಅವಶ್ಯ ಎಂದರು.
ಕುಕನೂರದಿಂದ ಮಂಗಳೂರು ಮತ್ತು ಮಂಗಳೂರಿನಿಂದ ಮುಂಡರಗಿಗೆ ಹೆಚ್ಚುವರಿ ಬಸ್ ಓಡಿಸಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿದರು. ಮುಸ್ಲಿಂ ಸಮುದಾಯಕ್ಕೆ ಖಬರಸ್ಥಾನ ಬೇಕು ಎಂದು ಅಂಜುಮನ್ ಕಮೀಟಿ ಅಧ್ಯಕ್ಷರು ಮನವಿ ಸಲ್ಲಿಸಿದರು.ಆಶ್ರಯ ಯೋಜನೆಯಡಿ ಮನೆ ನೀಡುವಂತೆ ಲಲಿತಮ್ಮ ಪೂಜಾರ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಸ್ತೆ ನಿರ್ಮಿಸಿಕೊಡುವ ಬಗ್ಗೆ ಉಮಚಗಿಯ ಗವಿಸಿದ್ದಪ್ಪ ಛಟ್ಟಿ ಮನವಿ ಸಲ್ಲಿಸಿದರು.
ದೇವಸ್ಥಾನ ನಿರ್ಮಾಣ ಮಾಡಲು ವೃದ್ಧೆ ಮನವಿ:ಗ್ರಾಮದಲ್ಲಿ ದೇವಸ್ಥಾನವೊಂದನ್ನು ನಿರ್ಮಾಣ ಮಾಡಲು ವೃದ್ಧೆಯೊಬ್ಬರು ಮನವಿ ಹಿಡಿದುಕೊಂಡು ವೇದಿಕೆಯತ್ತ ಆಗಮಿಸಿದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಸ್ವತಃ ತಾವೇ ವೇದಿಕೆಯಿಂದ ಕೆಳಗಿಳಿದು ವೃದ್ಧೆಯ ಮನವಿ ಸ್ವೀಕರಿಸಿ ಸ್ಪಂದಿಸುವುದಾಗಿ ತಿಳಿಸಿದರು.
ಹುಲಿಗಿ ಸೇರಿದಂತೆ ವಿವಿಧೆಡೆ ಅವ್ಯಾಹತವಾಗಿ ನಡೆಯುವ ಪ್ರಾಣಿವಧೆಯನ್ನು ತಡೆಯಬೇಕು ಎಂದು ಮುಖಂಡ ಎಂ.ಬಿ. ಅಳವಂಡಿ ಮನವಿ ಮಾಡಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ಪ್ರಾಣೇಶ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ, ಕುಕನೂರ ಪಿಎಸ್ಐ ಗುರುರಾಜ, ಬೇವೂರ ಪಿಎಸ್ಐ ಪ್ರಶಾಂತ ಹಾಗೂ ಇತರರು ಇದ್ದರು. ಮಂಗಳೂರ ಗ್ರಾಮದ ಪಿಡಿಒ ನೀಲಮ್ಮ ಕಾರ್ಯಕ್ರಮ ನಿರ್ವಹಿಸಿದರು.