ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ತರುವ ಕಾರ್ಯವಾಗಲಿ

KannadaprabhaNewsNetwork | Published : Feb 13, 2025 12:50 AM

ಸಾರಾಂಶ

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ. ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಎಷ್ಟೇ ಅರಿವು ನೀಡಿದರೂ ಸಹಿತ, ಕೇವಲ ಒಂದು ಇಲಾಖೆಯಿಂದ ಮಾತ್ರ ಕ್ರಮಕೈಗೊಳ್ಳುತ್ತಿದೆ.

ಧಾರವಾಡ:

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ಇತರೆ ಸಂಘ-ಸಂಸ್ಥೆಗಳು ಜಂಟಿಯಾಗಿ ಕಲಘಟಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಕ್ಕಳ ರಕ್ಷಣೆಗಾಗಿ ಇರುವ ವಿವಿಧ ಕಾಯ್ದೆಗಳ ಕುರಿತು ಕಾರ್ಯಾಗಾರ ಕಲಘಟಗಿ ಗುಡ್‌ ನ್ಯೂಸ್ ಕಾಲೇಜು ಸಭಾ ಭವನದಲಿ ನಡೆಯಿತು.

ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ. ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಎಷ್ಟೇ ಅರಿವು ನೀಡಿದರೂ ಸಹಿತ, ಕೇವಲ ಒಂದು ಇಲಾಖೆಯಿಂದ ಮಾತ್ರ ಕ್ರಮಕೈಗೊಳ್ಳುತ್ತಿದ್ದು ಇನ್ನುಳಿದ ಇಲಾಖೆ ಸಹಿತ ಬಾಲ್ಯ ವಿವಾಹ ತಡೆಯುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಪ್ರಕರಣ ಹೆಚ್ಚು ದಾಖಲಾಗುತ್ತಿವೆ. ಮುಖ್ಯವಾಗಿ ಮಕ್ಕಳು ಸಹಿತ ಇದರಲ್ಲಿ ಬಲಿಯಾಗುತ್ತಿರುವುದು ವಿಷಾದನೀಯ. ಸೈಬರ್ ಅಪರಾಧಗಳ ಕುರಿತು ಜನಸಾಮಾನ್ಯರು ಹಾಗೂ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಶಾಲೆ, ವಸತಿ ನಿಲಯ ಅಥವಾ ಸಾರ್ವಜನಿಕ ಸ್ಥಳದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಕಂಡು ಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸಿ ಮಗುವಿಗೆ ನ್ಯಾಯಕೊಡಿಸುವಲ್ಲಿ ಎಲ್ಲರೂ ಭಾಗಿದಾರರಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ಮಾತನಾಡಿ, ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಎಲ್ಲರ ಕರ್ತವ್ಯ ಎಂದರು.

ಕಲಘಟಗಿ ಗುಡ್‌ ನ್ಯೂಸ್ ಶಾಲೆಯ ಬ್ರದರ್‌ ವರ್ಗಿಸ್ ಕೆ.ಜೆ., ಸಬ್ ಇನ್‌ಸ್ಪೆಕ್ಟರ್‌ ಅಭಿಜಿತ, ನೂರಜಹಾನ್ ಕಿಲ್ಲೇದಾರ, ವಿಶಾಲಾ ಕಾನಪೇಟ, ಶ್ವೇತಾ ಕಿಲ್ಲೇದಾರ, ಕರೆಪ್ಪ ಕೌಜಲಗಿ, ತಹಸೀಲ್ದಾರ್‌ ಬಸವರಾಜ ಹೆಂಕಣ್ಣವರ, ತಾಪಂ ಅಧಿಕಾರಿ ಪರಶುರಾಮ ಸಾವಂತ ಸೇರಿದಂತೆ ಇತರರು ಇದ್ದರು.

Share this article