ಹುಬ್ಬಳ್ಳಿ: ಬಿಜೆಪಿ ನೂರು ಸೀಟ್ ಗೆಲ್ಲಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕಳೆದ ಬಾರಿ ಕಾಂಗ್ರೆಸ್ ಎಷ್ಟು ಗೆದ್ದಿತ್ತೋ ಅಷ್ಟನ್ನು ಉಳಿಸಿಕೊಂಡು ಹೋದರೆ ಸಾಕು ಎಂದು ತಿರುಗೇಟು ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಡಿಯಾ ಒಕ್ಕೂಟದ ನಾಯಕತ್ವವನ್ನು ಕಾಂಗ್ರೆಸ್ ತೆಗೆದುಕೊಂಡಿದೆ. ಖರ್ಗೆ ಅವರ ಮಾತಿಗೆ ಇಂಡಿಯಾ ಒಕ್ಕೂಟದಲ್ಲಿ ಯಾವುದೇ ಕಿಮ್ಮತ್ತಿಲ್ಲ. ಇನ್ನು ಬಿಜೆಪಿ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ನೂರು ಸೀಟ್ ಗೆಲ್ಲುವುದು ಒತ್ತಟ್ಟಿಗಿರಲಿ, ಕಳೆದ ಬಾರಿ ಎಷ್ಟು ಸೀಟ್ ಗೆದ್ದಿದ್ದಾರೆ ಅಷ್ಟನ್ನು ಉಳಿಸಿಕೊಂಡು ಹೋಗಲಿ ಸಾಕು ಎಂದರು.ಸುದೀರ್ಘ ಎಪ್ಪತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶಕ್ಕೆ ಏನು ಕೊಡುಗೆ ನೀಡಿದೆ ಎಂಬುದನ್ನು ಸಚಿವ ಸಂತೋಷ ಲಾಡ್ ಅವರೇ ಹೇಳಬೇಕು ಎಂದು ಸವಾಲು ಹಾಕಿದ ಅವರು, ಬ್ರಿಟಿಷರಿಂದ ಸ್ವಾತಂತ್ರ್ಯ ತಂದು ಕೊಟ್ಟಿದ್ದೇವೆ ಎಂದು ಹೇಳಿ 70 ವರ್ಷ ಅಧಿಕಾರ ನಡೆಸಿದರೆ, ಗರೀಬಿ ಹಠಾವೋ ಎಂದು ಹೇಳಿ ಇಂದಿರಾ ಗಾಂಧಿಯವರು 10-15 ವರ್ಷ ಅಧಿಕಾರ ನಡೆಸಿದ್ದಾರೆ. ಕೇವಲ ಅಧಿಕಾರ ಅನುಭವಿಸಿದ್ದು ಬಿಟ್ಟರೆ ದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.
ನಮ್ಮ ಅವಧಿಯಲ್ಲಿ ಬಿಎಂಟಿಸಿಗೆ 1,311 ಮತ್ತು ಕೆಎಸ್‌ಆರ್‌ಟಿಸಿಗೆ 50 ಪವರ್ ಪ್ಲಸ್ ಬಸ್‌ಗಳು ಹಾಗೂ 20 ವೋಲ್ವೋ ಬಸ್‌ಗಳನ್ನು ಖರೀದಿಸಿದ್ದು, ಅವು ಕಾರ್ಯಾಚರಣೆ ಆರಂಭಿಸಿದ್ದವು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ ಮೀಸಲಿಟ್ಟು, ಈಗಾಗಲೇ 5,468 ಕಾಮಗಾರಿಗಳಿಗೆ ಕ್ರಿಯಾಯೋಜನೆ ಮಂಜೂರಿಗೊಳಿಸಿ ನವೆಂಬರ್ ಹೊತ್ತಿಗೆ 1,287 ಕಾಮಗಾರಿ ಪೂರ್ಣಗೊಂಡಿವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ನಮ್ಮ ಕಾಲದಲ್ಲಿ ಅನುಮೋದನೆಗೊಂಡ ಯೋಜನೆಗಳನ್ನು ತಮ್ಮ ಸಾಧನೆ ಅಂಥ ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದರು.ಎಲ್ಲವೂ ಸರಿಯಾಗುತ್ತದೆ
ನಮ್ಮಲ್ಲಿ ಯಾವುದೇ ಮುಸುಕಿನ ಗುದ್ದಾಟ ಇಲ್ಲ, 5-6 ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಇರುವ ಕಾರಣಕ್ಕೆ ನಾನು ದಿಲ್ಲಿಗೆ ಹೋಗಿದ್ದೆ. ನಿಗದಿತ ಯಾವುದೇ ಕ್ಷೇತ್ರದಲ್ಲಿ ನಾನು ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿಲ್ಲ. ಆದರೆ ನಮ್ಮ ಪಕ್ಷದ ವರಿಷ್ಠರು ನಿಲ್ಲಲು ಹೇಳಿದರೆ, ಅಲ್ಲಿ ನಾನು ಸ್ಪರ್ಧಿಸುತ್ತೇನೆ. ಅವರು ಬೇಡ ಅಂದರೆ ಸ್ಪರ್ಧಿಸಲ್ಲ, ಕೇವಲ ಪಕ್ಷದ ಸೇವೆ ಮಾಡಿ ಅಂದರೂ ನಾನು ಅದಕ್ಕೆ ಸಿದ್ಧನಿದ್ದೇನೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಶೆಟ್ಟರ್ ಹೇಳಿದರು.