ಕನ್ನಡ ಕೇವಲ ಅಭಿಮಾನವಲ್ಲ ಸ್ವಾಭಿಮಾನದ ಪ್ರತೀಕವಾಗಲಿ: ಡಾ. ಬರಗೂರು ರಾಮಚಂದ್ರಪ್ಪ

KannadaprabhaNewsNetwork |  
Published : Apr 12, 2026, 01:30 AM IST
ಪೋಟೊ11ಕೆಡಿಆರ್1(ಕಡೂರು ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್, ಸಮ್ಮೇಳನಾಧ್ಯಕ್ಷೆ ಎಂ.ಜಯಮ್ಮ, ಭಂಡಾರಿಶ್ರೀನಿವಾಸ್, ಶಿವಾನಂದಸ್ವಾಮಿ, ಸೂರಿಶ್ರೀನಿವಾಸ್ ಮತ್ತಿತರಿದ್ದರು.) | Kannada Prabha

ಸಾರಾಂಶ

ಜಗತ್ತಿನ ಎಷ್ಟೋ ಭಾಷೆಗಳು ಕನ್ನಡದ ಮೇಲೆ ಪ್ರಯೋಗ ನಡೆಸಿದರೂ ಆ ಎಲ್ಲಾ ಭಾಷೆಗಳನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡ ಭಾಷೆಗಿದೆ ಎಂದು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಕಡೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡಪ್ರಭ ವಾರ್ತೆ, ಕಡೂರು/ಬೀರೂರು

ಜಗತ್ತಿನ ಎಷ್ಟೋ ಭಾಷೆಗಳು ಕನ್ನಡದ ಮೇಲೆ ಪ್ರಯೋಗ ನಡೆಸಿದರೂ ಆ ಎಲ್ಲಾ ಭಾಷೆಗಳನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡ ಭಾಷೆಗಿದೆ ಎಂದು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು. ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡದ ಬದುಕನ್ನು ಕಟ್ಟುವುದರಲ್ಲಿ ಎಲ್ಲಾ ವರ್ಗದ ಧರ್ಮಿಯರು ಕಾರಣರಾಗಿದ್ದಾರೆ. ಕನ್ನಡ ಭಾಷೆ ವಿವೇಕವಾಗಿ ನಮ್ಮಲ್ಲುಳಿಯಬೇಕು. ಕೇವಲ ಅಭಿಮಾನವಲ್ಲ ಸ್ವಾಭಿಮಾನದ ಪ್ರತೀಕವಾಗಬೇಕು. ಕನ್ನಡ ಸಂಸ್ಕೃತಕ್ಕೆ ಹುಟ್ಟಿದ ಮಗಳಲ್ಲ. ಇದನ್ನು ಭಾಷಾ ತಜ್ಞರು ಧೃಢಪಡಿಸಿದ್ದಾರೆ. ಇದರಿಂದ ಸಂಸ್ಕೃತದ ಘನತೆ ಕಡಿಮೆಯಾಗುವುದಿಲ್ಲ. ಸಂಸ್ಕೃತದ ವಿರೋಧವೂ ಅಲ್ಲ ಎಂಬುದನ್ನು ಗಮನಿಸಬೇಕು. ಜನಸಾಮಾನ್ಯರಿಂದ ಕನ್ನಡ ಉಳಿದಿದೆ. ಅದನ್ನು ಬಳಸಿದರೆ ಉಳಿಯುತ್ತದೆ. ಕನ್ನಡ ಶಾಲೆಗಳನ್ನು ಉಳಿಸಬೇಕು. ಉಳಿಸುತ್ತೇವೆಂಬುದು ಸರ್ಕಾರದ ಘೋಷಣೆ. ಆದರೆ ಕನ್ನಡ ಶಾಲೆಗಳು ಮುಚ್ಚುತ್ತಲೇ ಇದೆಯೆಂಬುದು ವಾಸ್ತವ ಎಂದರು.ಸರ್ಕಾರಗಳು ಕನ್ನಡಿಗರನ್ನು ಶೈಕ್ಷಣಿಕವಾಗಿ ಉನ್ನತಿಗೇರಿಸುವ ಜೊತೆಗೆ ಉದ್ಯೋಗ ನೀಡಿದಾಗ ಮಾತ್ರ ಕನ್ನಡಿಗರು ಬದುಕು ಕಟ್ಟಿಕೊಳ್ಳಲು ಸಾಧ್ಯ. ಕನ್ನಡವನ್ನು ಕಟ್ಟಿದವರು ಜಾತ್ಯಾತೀತರು. ಜಾತಿ ಧರ್ಮದ ಕಾರಣಕ್ಕಾಗಿ ಕನ್ನಡವನ್ನು ಒಡೆಯುವುದು ಭಾಷೆಗೆ ಮಾಡುವ ಅವಮಾನವೇ ಸರಿ. ನಿಜಾರ್ಥದಲ್ಲಿ ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಕನ್ನಡ ಸಾಹಿತ್ಯ ಸೌಹಾರ್ಧತೆಯನ್ನು ಪ್ರತಿಪಾದಿಸಿದೆಯೇ ಹೊರತು ರಕ್ತದೋಕಳಿಯನ್ನಲ್ಲಾ, ಕುವೆಂಪು ರಚಿಸಿದ ನಾಡಗೀತೆ ಅನುಸರಿಸುವವರೆ ನಿಜವಾದ ಕನ್ನಡಿಗರು, ಕರ್ನಾಟಕ ಉದ್ದಾರದಿಂದ ದೇಶ ಉದ್ದಾರವಾಗಲಿದೆ. ಇತ್ತೀಚೆಗೆ ಭಾಷಿಕ ಭ್ರಷ್ಟಾಚಾರ ಹೆಚ್ಚುತ್ತಿದೆ. ಇದೂ ಕನ್ನಡಕ್ಕೆ ಮಾಡುವ ದ್ರೋಹ. ಇವೆಲ್ಲವನ್ನೂ ಮೆಟ್ಟಿ ಕನ್ನಡ ನಿಲ್ಲಬೇಕು.ಜಗತ್ತಿನ 20 ಬಲಾಢ್ಯ ಭಾಷೆಗಳ ಪೈಕಿ ಕನ್ನಡ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದಿಂದ ಕನ್ನಡ ತನ್ನ ಜೀವಂತಿಕೆ ಉಳಿದಿದೆ. ಕೇವಲ ಶ್ರೀಗಂಧ, ತಂಬಿದ ನದಿಗಳ ವರ್ಣನೆಗೆ ಸೀಮಿತಗೊಳಿಸದೇ ಜಾಲಿ ಮರದ ಪ್ರದೇಶ, ಬತ್ತಿಹೋದ ಕೆರೆಕಟ್ಟೆಗಳನ್ನು ನೋಡಿದ್ದೇವೆ, ಇವರೆಡರ ಭೌಗೋಳಿಕ ವಾಸ್ತವ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ವಾಸ್ತವದ ಶಿಕ್ಷಣ ನೀಡಬೇಕಿದೆ ಎಂದು ಕಿವಿಮಾತು ಹೇಳಿದರು. ಪ್ರಸ್ತುತ ಎಐ ತಂತ್ರಜ್ಞಾನ ಬಳಕೆ ಮಾನವ ನಿರ್ಮಿತ ತಂತ್ರಜ್ಞಾನ. ತಂತ್ರಜ್ಞಾನ ಬಳಕೆಯಿಂದ ಆಧುನಿಕತೆ ಬೆಳೆಯುತ್ತಿದೆ. ಇವುಗಳ ಸದ್ಬಳಕೆ ಮಾಡಲು ಮುಂದಾಗಬೇಕಿದೆ ವಿನಃ ದುರುಪಯೋಗಪಡಿಸಿಕೊಳ್ಳುವ ಕೆಲಸವಾಗಬಾರದು. ಕನ್ನಡದ ವಿವೇಕವನ್ನು ಸರಿಯಾಗಿ ಅರ್ಥೈಸಿಕೊಳ್ಳುವವರೇ ನಿಜ ಕನ್ನಡಿಗರು ಎಂದರು. ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಸಾಹಿತ್ಯ ಸಮ್ಮೇಳನ ಕೇವಲ ಸಾಹಿತ್ಯವಷ್ಟೆ ಅಲ್ಲ ಈ ನೆಲದ ಅವಲೋಕನದ ವೇದಿಕೆಯೂ ಆಗಬೇಕು. ಡಾ.ವೆಂಕಟಲಕ್ಷ್ಮಮ್ಮ ಅವರ ಸಮಾಧಿ ದುಸ್ಥಿತಿ ಕಂಡು ಶಾಸಕರ ಅನುದಾನದಿಂದ 5 ಲಕ್ಷ ಅನುದಾನ ನೀಡದ್ದು ರಕ್ಷಣೆ ಕಾರ್ಯ ಮಾಡುವುದು ನಿಶ್ಚಿತ. ಜಿಲ್ಲೆಯಲ್ಲಿ ಹುಟ್ಟುವ ನದಿಗಳಿಂದ ಬೇರೆ ಜಿಲ್ಲೆಗಳಿಗೆ ಅನುಕೂಲ ವಾಗಿದೆಯೇ ವಿನಃ ಮಲೆನಾಡು ಮತ್ತು ಬಯಲುಸೀಮೆ ಭಾಗದ ರೈತರಿಗೆ ಯಾವುದೇ ಪ್ರಯೋಜನವಾಗದಿರುವುದು ನೋವಿನ ಸಂಗತಿ. ಬರಗಾಲ ಪೀಡಿತ ಪ್ರದೇಶ ಕಡೂರಿಗೆ ಶಾಶ್ವತ ನೀರಾವರಿ ಕಲ್ಪಿಸಲು ದೊರೆತದ್ದು ಭದ್ರಾ ಉಪಕಣಿವೆ ಯೋಜನೆ. ಇದಕ್ಕೆ ₹1281 ಕೋಟಿ ಮಂಜೂರಾದರೂ ಸಮರ್ಪಕ ಕಾರ್ಯಾರಂಭವಾಗಲಿಲ್ಲ. ₹5400 ಕೋಟಿ ಕೊಡುತ್ತೇ ವೆಂಬ ಕೇಂದ್ರದ ಮಾತು ಮಾತಾಗಿಯೇ ಉಳಿಯಿತು. ಶಾಸಕನಾದ ನಂತರ ಈ ಯೋಜನೆಗೆ ವೇಗ ದೊರಕಿಸುವಲ್ಲಿ ಭಗೀರಥ ಪ್ರಯತ್ನ ಮಾಡಿ ಕಳೆದ ಮಾರ್ಚ್ ನಲ್ಲಿ ನಬಾರ್ಡ್ ಮೂಲಕ ₹455 ಕೋಟಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಕಡೂರು ಕ್ಷೇತ್ರಕ್ಕಾಗುತ್ತಿದ್ದ ಅನ್ಯಾಯ ಸರಿಪಡಿಸಿದೆಯೆಂಬ ತೃಪ್ತಿ ಇದೆ. ಮದಗದಕೆರೆ ಅಭಿವೃದ್ದಿಗೆ ಈಗಾಗಲೇ ₹50 ಕೋಟಿ ಮಂಜೂರಾಗಿ ಕೆರೆ ವ್ಯಾಪ್ತಿಯ 14 ಕಿಮೀ ಚಾನೆಲ್‌ಗಳು, ಮಡಬಾಯಿ, ತಡೆಗೋಡೆ ಕಾಮಗಾರಿ ಗಳ ಜೊತೆ ಪ್ರವಾಸಿತಾಣವಾಗಿ ಅಭಿವೃದ್ದಿಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ₹50 ಕೋಟಿ ಹೆಚ್ಚುವರಿ ಅನುದಾನ ನೀಡಿದರೆ, 5 ಸಾವಿರ ಹೆಕ್ಟರ್ ನೀರಾವರಿ ಪ್ರದೇಶಕ್ಕೆ ಅನುಕೂಲ. ಈ ನಿಟ್ಟಿನಲ್ಲಿ 2028 ರೊಳಗೆ ಶ್ವಾಶ್ವತ ನೀರಾವರಿ ಯೋಜನೆ ಪೂರ್ಣಗೊಳಿಸುವ ಧ್ಯೇಯವಿದೆ ಎಂದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸಾಹಿತ್ಯ ಪರಿಷತ್ ಕಲೆ, ಸಾಹಿತ್ಯಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿದಂತೆ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಪ್ರಯತ್ನಗಳಾಗಬೇಕಿದೆ ಇದು ರಾಜ್ಯಾದ್ಯಂತ ಕಸಾಪ ಘಟಕಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿಪಡಿಸಲು ಮುಂದಾದರೆ ಶಾಲೆಗಳ ಉಳಿವಿನ ಜೊತೆಗೆ ಕನ್ನಡ ಭಾಷೆ ಉಳಿವಿಗೂ ಪ್ರೋತ್ಸಾಹಿಸಿದಂತಾಗಲಿದೆ. ಜಿಲ್ಲೆಯ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಶ್ರೀಮಂತಿಕೆ ಅನಾವರಣದ ಜೊತೆ ನಮ್ಮ ಜಿಲ್ಲೆ ಹಾಗೂ ತಾಲೂಕಿನ ಹಲವಾರು ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವ ವೇದಿಕೆಯೂ ಆಗಬೇಕೆಂಬ ಆಶಯದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ಮಾತನಾಡಿ, ಕಳೆದ 20 ಜಿಲ್ಲಾ ಸಮ್ಮೇಳನಗಳಲ್ಲಿ ಪುರುಷರಿಗೆ ಪ್ರಾಧಾನ್ಯತೆ ನೀಡಿ ಅವರೇ ಸಮ್ಮೇಳನಾಧ್ಯಕ್ಷರಾಗುತ್ತಿದ್ದರು. ಈ ಬಾರಿ ಕಸಾಪ ಜಿಲ್ಲಾ ಘಟಕ ಎಲೆಮರೆಕಾಯಿಯಂತಹ ದಲಿತ ಮಹಿಳೆಯನ್ನು ಗುರುತಿಸಿ ಸಮ್ಮೇಳನಾಧ್ಯಕ್ಷರಾಗಿಸಿರುವುದು ಹೆಮ್ಮೆ ತಂದಿದೆ. ಪರಿಷತ್ ಮಹಿಳಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾಗಿದೆ ಎಂದರು. -- ಬಾಕ್ಸ್ --

ಮಾತೃಭಾಷೆಯಿಂದ ಕಲಿತ ವಿದ್ಯೆ ನಿಜವಾದ ವಿದ್ಯೆಯಾಗಿದೆ. ತಾನು ಕಲಿತ ವಿದ್ಯೆಯನ್ನು ಬೇರಾವುದೇ ಭಾಷೆಗೆ ಅನುವಾದಿಸಲು ಶಕ್ತನಾಗಿರುತ್ತೆ. ಆದ್ದರಿಂದಲೇ ಕನಿಷ್ಠ ಮಕ್ಕಳ ವ್ಯಾಸಂಗದಲ್ಲಿ 5ನೇ ತರಗತಿವರೆಗಾದರೂ ಕನ್ನಡ ಮಾಧ್ಯಮ ಅವಶ್ಯಕತೆ ಇದೆ ಎಂದು ಸಮ್ಮೇಳನಾಧ್ಯಕ್ಷೆ ಎಂ. ಜಯಮ್ಮ ಹಕ್ಕೋತ್ತಾಯಿಸಿದರು.ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆಗೂ-ಬದುಕಿಗೂ ಬಿಡಿಸಲಾರದ ನಂಟಿದೆ. ಹಿಂದೆ ಇಂಗ್ಲೀಷ್ ಕಲಿತರೆ ಇಂಗ್ಲೆಂಡ್ ಕಾಣ್ತಾರೆ, ಕನ್ನಡ ಕಲಿತರೆ ಮನ್ಯುಷ್ಯರಾಗ್ತಾರೆ ಅಂದರೆ ಇಂದು "ಇಂಗ್ಲೀಷ್ ನಮ್ಮನ್ನು ಶ್ರೀಮಂತಗೊಳಿಸಿದರೆ ಕನ್ನಡ ಕಡು ಬಡವನನ್ನಾಗಿಸುತ್ತದೆ " ಅನ್ನುವ ಭಾವನೆ ಜನರಲ್ಲಿ ಬೇರೂರಿದೆ. ಕೇಂದ್ರ, ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ, ನಿಗಮಮಂಡಳಿ ಪ್ರಾಧಿಕಾರಗಳಲ್ಲಾಗಲೀ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಾಗಲೀ ಕನ್ನಡಿಗರಿಗೆ ಉದ್ಯೋಗ ದೊರೆಯುತ್ತಿಲ್ಲ, ಪೋಷಕರು ತಮ್ಮ ಮಕ್ಕಳು ಆಂಗ್ಲಮಾಧ್ಯಮದ ವ್ಯಾಮೋಹಕ್ಕೆ ಒಲವು ತೋರಿದ ಪರಿಣಾಮ ಕನ್ನಡ ಭಾಷೆ ಶಿಕ್ಷಣಕ್ಕೆ ಕುತ್ತು ಬರುತ್ತಿದೆ. ಈ ನಿಟ್ಟಿನಲ್ಲಿ ಬಾಲ್ಯದ ಆರಂಭಿಕ ಶಿಕ್ಷಣ ಕನ್ನಡದಲ್ಲೇ ಕೊಡಿಸಬೇಕೆಂಬ ಪರಿಪಾಠ ಬೆಳೆಸಿಕೊಳ್ಳಬೇಕಿದೆ ಪ್ರತಿಪಾದಿಸಿದರು.ಈ ಸಂದರ್ಭದಲ್ಲಿ ಪ್ರಿಯದರ್ಶಿನಿ, ಸಿಂಗಟಗೆರೆ ಸಿದ್ದಪ್ಪ, ರಮೇಶ್ ಬೊಂಗಾಳೆ, ಲಕ್ಷ್ಮಣ್ ಗೌಡ ಅವರಿಗೆ ಜಿಲ್ಲಾ ಕಸಾಪ ದಿಂದ ಸಾಹಿತ್ಯ ಸಿರಿಪ್ರಶಸ್ತಿ ಪ್ರಧಾನ ಮಾಡಲಾಯಿತು. ಹಿರೇನಲ್ಲೂರು ಶ್ರೀನಿವಾಸ್ ತಂಡದಿಂದ ಗೀತಗಾಯನ ನಡೆಸಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಾನಂದಸ್ವಾಮಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಚ್.ಎಂ. ಮರುಳಸಿದ್ದಯ್ಯ ಪಟೇಲ್, ಎಸ್ .ಎಸ್. ವೆಂಕಟೇಶ್, ಆಸಂಧಿಕಲ್ಲೇಶ್, ನಿರ್ಮಲ ಮಂಚೇಗೌಡ, ಎಚ್.ಎಂ.ಲೋಕೇಶ್, ಬಿ.ಶಿವಕುಮಾರ್, ಕೆ.ಮೂರ್ತಿರಾವ್, ಯರದಕೆರೆ ರಾಜಪ್ಪ, ಎಚ್.ಸಿ.ಲೋಕೇಶ್, ಎಚ್.ವಿ. ಗಿರೀಶ್, ಕೊಪ್ಪ ಹರ್ಷ, ಲತಾರಾಜಶೇಖರ್, ಡಿ.ಕೆ. ಲಕ್ಷ್ಮಣ್ ಗೌಡ, ಕಸಾಪ ಘಟಕದ ಪದಾಧಿಕಾರಿಗಳು, ಕನ್ನಾಡಭಿಮಾನಿಗಳು ಇದ್ದರು. -- ಬಾಕ್ಸ್ --

ಬಿಸಿಲಿಗೆ ಬಸವಳಿದ ಜನಸಮ್ಮೇಳನ ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ಬಳಿಕ ಸಮ್ಮೇಳನ ವೀಕ್ಷಿಸಲು ಆಗಮಿಸಿದ್ದ ಕನ್ನಾಡಭಿಮಾನಿಗಳು ಮಧ್ಯಾಹ್ನದ ಬಿರು ಬಿಸಿಲಿಗೆ ಬಸವಳಿದರು. ಸಮ್ಮೇಳನದ ಆವರಣದಲ್ಲಿ ಹಾಕಲಾಗಿದ್ದ ವಸ್ತುಪ್ರದರ್ಶನ ಮಳಿಗೆಗಳ ಬಳಿ ಬಿಸಿಲಿನ ತಾಪಕ್ಕೆ ಜನರಿಲ್ಲದೇ ಬೀಕೋ ಎಂದರೆ, ಪುಸ್ತಕ ಮಳಿಗೆಗಳಲ್ಲಿ ಉತ್ತಮ ಸಾಹಿತ್ಯಕ ಬರಹದ ಪುಸ್ತಕಗಳು ಸಿಗದಿರುವ ಬಗ್ಗೆ ಸಾಹಿತ್ಯಾಭಿಮಾನಿಗಳಿಗೆ ನಿರಾಸೆ ಮೂಡಿಸಿತು.-- ಬಾಕ್ಸ್:

ವರನಟ ರಾಜ್ ಗೆ ಹೋಲಿಸದರು ಚಪ್ಪಾಳೆ ತಟ್ಟಲಿಲ್ಲ:ಸಮ್ಮೇಳನದ ಆರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷರು ನನ್ನನ್ನು ಡಾ.ರಾಜಕುಮಾರ್ ಗೆ ಹೋಲಿಸಿದರೂ ಸಭಿಕರು ಯಾರು ಚಪ್ಪಾಳೆ ತಟ್ಟಲಿಲ್ಲ. ನನ್ನನ್ನು ವೈಭವಿಕರಿಸುವ ನಿಟ್ಟಿನಲ್ಲಿ ಸಭಿಕರನ್ನು ಉತ್ಪ್ರೇಕ್ಷೆಗೆ ಒಳಪಡಿಸುವುದು ಸಮಂಜಸವಲ್ಲ. ಡಾ, ರಾಜಕುಮಾರ್ 3ನೇ ತರಗತಿ ಓದಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸಬಲರಾದವರಲ್ಲ ಆದರೆ ಕಲೆಯ ಮೂಲಕ ಸಾಧನೆ ಮಾಡಿ ಜನಮನ್ನಣೆ ಗಳಿಸಿದವರು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

11ಕೆಡಿಆರ್1

(ಕಡೂರು ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್, ಸಮ್ಮೇಳನಾಧ್ಯಕ್ಷೆ ಎಂ.ಜಯಮ್ಮ, ಭಂಡಾರಿಶ್ರೀನಿವಾಸ್, ಶಿವಾನಂದಸ್ವಾಮಿ, ಸೂರಿಶ್ರೀನಿವಾಸ್ ಮತ್ತಿತರಿದ್ದರು.)11ಕೆಡಿಆರ್2

(ಜಿಲ್ಲಾ ಸಮ್ಮೇಳನದಲ್ಲಿ ಮದಗ ವೈಭವದ ಸ್ಮರಣ ಸಂಚಿಕೆಯನ್ನು ಶಾಸಕ ಕೆ.ಎಸ್.ಆನಂದ್ ಬಿಡುಗಡೆಗೊಳಿಸಿದರು. ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತಿತರಿದ್ದರು. 11ಕೆಡಿಆರ್3

ಸಮ್ಮೇಳನದಲ್ಲಿ ಭಾಗವಹಿಸಿದ್ದ ಕನ್ನಡಾಭಿಮಾನಿಗಳು

11ಕೆಡಿಆರ್4(ಸಮ್ಮೇಳನದಲ್ಲಿ ಮಧ್ಯಾಹ್ನದ ಭೋಜನಕ್ಕೆ ಕನ್ನಡಾಭಿಮಾನಿಗಳ ಸರತಿ ಸಾಲು11ಕೆಡಿಆರ್5

ಸಮ್ಮೇಳನದ ಆವರಣದಲ್ಲಿ ವಸ್ತುಪ್ರದರ್ಶನದ ಮಳಿಗೆಗಳನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

16ಕ್ಕೆ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ರ್‍ಯಾಲಿ
ಏ.14ರಿಂದ ವಿಶೇಷ ಸುದರ್ಶನ ಕ್ರಿಯಾ ಶಿಬಿರ