ಕನ್ನಡ ನಮ್ಮ ಉಸಿರು, ಬದುಕಾಗಲಿ: ಸಾಹಿತಿ ಯಶವಂತ

KannadaprabhaNewsNetwork | Published : Nov 24, 2024 1:46 AM

ಸಾರಾಂಶ

ಕನ್ನಡಿಗರೆಲ್ಲರಲ್ಲಿ ಭಾಷಾಭಿಮಾನ ಜಾಗೃತಗೊಂಡು ಬಳಕೆ ಅಭಿಮಾನ ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಬಲವಾದ ಆಶಯವಿದ್ದರೆ ಮಾತ್ರ ಯಾವುದೇ ಭಾಷೆ, ಸಂಸ್ಕೃತಿ ಉಳಿಯಲು ಸಾಧ್ಯವಿದೆ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಮ್ಮ ಉಸಿರು ಮತ್ತು ಬದುಕು ಕನ್ನಡವಾದಾಗ ಮಾತ್ರ ಭಾಷೆ ಉಳಿಕೆ ಸಾಧ್ಯವಾಗುತ್ತದೆ. ಜಾಗತಿಕ ಮಟ್ಟದಲ್ಲಿನ ಜ್ಞಾನಕ್ಕಾಗಿ ಯಾವುದೇ ಭಾಷೆ ಅಭ್ಯಸಿಸಿದರೂ ನಮ್ಮ ಮನೆ ಭಾಷೆ, ವ್ಯವಹಾರಿಕ ಭಾಷೆ ಕನ್ನಡವಾಗಬೇಕು. ರಾಜ್ಯ ಸರ್ಕಾರ ಕನ್ನಡದಲ್ಲಿ ಕಲಿತವರಿಗೆ ನೌಕರಿ ಮೀಸಲಾತಿ ಕಲ್ಪಿಸಿದಲ್ಲಿ ಮಾತ್ರ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಗುತ್ತದೆಂದು ಹಾಸ್ಯ ಸಾಹಿತಿ ಯಶವಂತ ವಾಜಂತ್ರಿ ನುಡಿದರು.

ಹೊಸೂರನ ಸಿರಾಜಸಾಬ, ಮುರಾದಸಾಬ್ ದರ್ಗಾ ಬಳಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಹಜರತ್ ಟಿಪ್ಪು ಸುಲ್ತಾನ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿ, ಸರ್ಕಾರದ ಆದೇಶಗಳಿಂದ ಭಾಷೆ, ಸಂಸ್ಕೃತಿ ಬದುಕದು ಬದಲಾಗಿ ಕನ್ನಡಿಗರೆಲ್ಲರಲ್ಲಿ ಭಾಷಾಭಿಮಾನ ಜಾಗೃತಗೊಂಡು ಬಳಕೆ ಅಭಿಮಾನ ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಬಲವಾದ ಆಶಯವಿದ್ದರೆ ಮಾತ್ರ ಯಾವುದೇ ಭಾಷೆ, ಸಂಸ್ಕೃತಿ ಉಳಿಯಲು ಸಾಧ್ಯವಿದೆ. ಟಿಪ್ಪು ಸುಲ್ತಾನ ಬಗ್ಗೆ ನಮ್ಮ ಕಾಲಘಟ್ಟದಲ್ಲಿ ಓದಿದ್ದ ಇತಿಹಾಸಕ್ಕೆ ಇದೀಗ ಅಪಸ್ವರವೆದ್ದಿದೆ. ಗತಿಸಿದ ವ್ಯಕ್ತಿಯ ಶೌರ್ಯ, ಪರಾಕ್ರಮ, ದೇಶಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ಜೀವಮಾನವಿಡೀ ಬ್ರಿಟೀಷರೊಡನೆ ನಡೆಸಿದ ಕೆಚ್ಚೆದೆ ಹೋರಾಟಗಳು ಸ್ಮರಣಾರ್ಹವಾದ್ದರಿಂದ ಅಂಥ ಗುಣಗಳನ್ನು ಯುವಕರು ಬೆಳೆಸಿಕೊಳ್ಳಬೇಕೆಂದರು.

ಹಿರಿಯ ನ್ಯಾಯವಾದಿ ವೆಂಕಟೇಶ ನಿಂಗಸಾನಿ ಧಾರ್ಮಿಕ ಸಾಮರಸ್ಯದ ನೆಲೆವೀಡಾದ ಹೊಸೂರ ಗ್ರಾಮದಲ್ಲಿ ಭಾವೈಕ್ಯತೆ ಪ್ರತೀಕವಾಗಿರುವ ದರ್ಗಾಕ್ಕೆ ನಡೆದುಕೊಳ್ಳುವ ಭಕ್ತರಲ್ಲಿ ಧರ್ಮದ ಸೊಂಕಿಲ್ಲ. ಪರಸ್ಪರ ಮಾನವೀಯ ಮೌಲ್ಯಗಳ ಸಂರಕ್ಷಣೆಯತ್ತ ಎಲ್ಲ ಜನರೂ ಬದ್ಧರಾಗಿದ್ದು, ದೇಶದ ಮುಂದೆ ಧರ್ಮ, ಜಾತಿ-ಮತಗಳು ಪ್ರಧಾನವಾಗದೇ ಮಾತೃಭೂಮಿಯೇ ಮುಖ್ಯವಾಗಬೇಕು. ಅಂಥ ಸದ್ವಿಚಾರಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಕಲಿಸಬೇಕೆಂದರು. ಪತ್ರಕರ್ತ ಶಿವಾನಂದ ಮಹಾಬಲಶೆಟ್ಟಿ, ಸಿರಾಜ್ ಹೊರಟ್ಟಿ, ಫಾರುಕ ನದಾಫ, ಹಾರೂನಸಾಬ ಹೊರಟ್ಟಿ ಮಾತನಾಡಿದರು. ಪಿಎಸೈ ಆಗಿ ನೇಮಕವಾಗಿರುವ ಜಯಶ್ರೀ ಮಠಪತಿರನ್ನು ಸನ್ಮಾನಿಸಲಾಯಿತು. ಅಬ್ದುಲ್ ಹೊರಟ್ಟಿ, ಹಾಫಿಜ್ ಜಮಖಂಡಿ, ಅಕ್ರಮ ಜಮಾದಾರ ಇತರರಿದ್ದರು.

Share this article