ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಕನ್ನಡ ಅನ್ನದ ಹಾಗೂ ದುಡಿಮೆಯ ಭಾಷೆಯಾಗಬೇಕು. ಕನ್ನಡವೇ ಸಾರ್ವಭೌಮವಾಗಬೇಕು ಎಂದು ಪಟ್ಟಣದ ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಡಿಗೇರ್ ಮೌನೇಶ್ ಆಶಿಸಿದರು.
ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆಗೆ ಮತ್ತು ಯುವಕರಲ್ಲಿ ವೈಚಾರಿಕ ಜಾಗೃತಿಗೆ ದತ್ತಿ ಉಪನ್ಯಾಸಗಳು ಪೂರಕ. ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯ ಕಲಿಕೆಗೆ ಸೀಮಿತವಾಗದೇ ಸಾಹಿತ್ತಿಕ ಚಟುವಟಿಕೆ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಜೊತೆಗೆ ಕನ್ನಡ ಭಾಷೆಯ ಅರಿವಿನ ವಿಸ್ತರಣೆಗೂ ಶ್ರಮಿಸಬೇಕು ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್. ಶೇಖರ್, ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಜಾಗೃತಿ ಮೂಡಿಸುವ ಹಾಗೆಯೇ ಕನ್ನಡ ಭಾಷೆಯಲ್ಲಿ ಪ್ರೌಢಿಮೆ ಸಾಧಿಸುವ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯವಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ತಿನ ತಾಲೂಕು ಅಧ್ಯಕ್ಷ ಗೂಳಪ್ಪ ಹುಲಿಮನಿ, ಮೈಸೂರು ಸಂಸ್ಥಾನದ ಒಡೆಯರ್ ಸೇರಿದಂತೆ ಸರ್ ಎಂ. ವಿಶ್ವೇಶ್ವರಯ್ಯ, ಆಲೂರು ವೆಂಕಟರಾಯರು, ಕುವೆಂಪು ಹಾಗೂ ನಾನಾ ಸಾಹಿತಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಇವರೆಲ್ಲರ ಬದುಕು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡದಲ್ಲಿ 100ಕ್ಕೆ100 ಹಾಗೂ 125ಕ್ಕೆ 125 ಮತ್ತು ಪಿಯುಸಿ ಪರೀಕ್ಷೆಯ ಕನ್ನಡದಲ್ಲಿ 100ಕ್ಕೆ 100 ಅಂಕ ಗಳಿಸಿರುವ ತಾಲೂಕಿನ 181 ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.