ಕನ್ನಡ ಹೃದಯ ಭಾಷೆಯಾಗಲಿ: ಡಾ. ಪುರುಷೋತ್ತಮ ಬಿಳಿಮಲೆ

KannadaprabhaNewsNetwork |  
Published : Jan 03, 2026, 01:15 AM IST
 | Kannada Prabha

ಸಾರಾಂಶ

ಸಮಗ್ರ ಕನ್ನಡ ಅನುಷ್ಠಾನ ಅಧಿನಿಯಮ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ, ತುಮಕೂರು

ಕನ್ನಡವನ್ನು ಕೇವಲ ಸರ್ಕಾರಿ ಆದೇಶಗಳ ಮೂಲಕ ಉಳಿಸಲು ಸಾಧ್ಯವಿಲ್ಲ. ಅದು ಹೃದಯದ ಭಾಷೆಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಬಳಕೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕನ್ನಡ ಎಂದರೆ ಕೇವಲ ಭಾಷೆ ಅಲ್ಲ ಅದು ಒಂದು ಸಂಸ್ಕೃತಿ. ಕೇವಲ ಬಲವಂತವಾಗಿ ಆದೇಶ ಅಥವಾ ಅನುಷ್ಠಾನದ ಒತ್ತಾಯದಿಂದ ಉಳಿಸಬಹುದೆಂಬುದು ಸುಳ್ಳು. ಕನ್ನಡ ಹೃದಯದ ಭಾಷೆಯಾದಲ್ಲಿ ಮಾತ್ರ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಸಂವಹನ ನಡೆಸಲು ಭಾಷೆ ಅತ್ಯುತ್ತಮ ಸೇತುವೆಯಾಗಿ ಕೆಲಸ ಮಾಡಬೇಕು. ಆಡಳಿತದಲ್ಲಿ ಕನ್ನಡದ ಅನುಷ್ಠಾನವು ಕೇವಲ ಸಾಂಪ್ರದಾಯಿಕ ಕೆಲಸವಲ್ಲ, ಅದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವಾಗಿದೆ ಎಂದು ಹೇಳಿದರು.

ಸ್ವಭಾಷೆಯನ್ನು ಗೌರವಿಸುತ್ತಲೇ ಅನ್ಯ ಭಾಷೆಗಳನ್ನು ಕಲಿಯುವುದು ನಿಜವಾದ ಪ್ರಜಾಪ್ರಭುತ್ವದ ಲಕ್ಷಣ ಎಂದ ಅವರು, 1956ರ ಏಕೀಕರಣದ ನಂತರ ಕನ್ನಡ ಪರವಾಗಿ 3ಸಾವಿರಕ್ಕೂ ಹೆಚ್ಚು ಸರ್ಕಾರಿ ಆದೇಶಗಳು ಹೊರಬಿದ್ದಿವೆ. ಆದರೆ, ವಾಸ್ತವದಲ್ಲಿ ಶೇ. 10ರಷ್ಟು ಆದೇಶಗಳೂ ಸರಿಯಾಗಿ ಜಾರಿಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವರದಿಯೊಂದನ್ನು ಉಲ್ಲೇಖಿಸಿದ ಅವರು, 2001ರ ಜನಗಣತಿಯಲ್ಲಿದ್ದ ಸುಮಾರು 254 ಭಾಷೆಗಳು ಇಂದು ಅಸ್ತಿತ್ವ ಕಳೆದುಕೊಂಡಿವೆ. ಕನ್ನಡಕ್ಕೂ ಇಂತಹ ಸ್ಥಿತಿ ಬರದಂತೆ ಎಚ್ಚರವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಕನ್ನಡ ಅನುಷ್ಠಾನದಲ್ಲಿ ವಿಫಲರಾಗುವ ಅಥವಾ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದ ಅವರು, ಸಮಗ್ರ ಕನ್ನಡ ಅನುಷ್ಠಾನ ಅಧಿನಿಯಮ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಲಾಗಿದೆ. ಭಾಷಾ ಅನುಷ್ಠಾನದಲ್ಲಿ ಲೋಪವೆಸಗುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಕಾನೂನುಗಳಿಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದ್ದು ಸದ್ಯದಲ್ಲೇ ಕಾನೂನು ಜಾರಿಗೊಳ್ಳಲಿದೆ ಎಂದರು.

1994ರಲ್ಲಿ ಸ್ಥಾಪನೆಯಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯದಾದ್ಯಂತ ಕನ್ನಡ ಬಳಕೆ ಸ್ಥಿತಿಗತಿಗಳನ್ನು ಪತ್ತೆಹಚ್ಚುತ್ತಿದೆ. ಜಿಲ್ಲಾ ಪ್ರವಾಸಗಳ ಮೂಲಕ ಅನುಷ್ಠಾನದ ಹಾದಿಯಲ್ಲಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ತೊಡಕುಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುಮಾರ್ ನೀಹಾ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ತುಮಕೂರು ಉಪ ವಿಭಾಗಾಧಿಕಾರಿ ನಹೀದಾ ಜ಼ಮ್ ಜಮ್ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ