ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಪಟ್ಟಣದ ಮಹದೇಶ್ವರ ನಗರದ ಕೆಎಚ್‌ಬಿ ಬಡಾವಣೆಯ ದೇ.ಜ.ಗೌ ಉದ್ಯಾನವನದಲ್ಲಿ ನಿಸರ್ಗ ನಾಗರೀಕರ ಸೇವಾ ಸಮಿತಿ, ಕಾಲ್ನಡಿಗೆ ಸ್ನೇಹಕೂಟ, ಬಲಮುರಿ ಗಣಪತಿ ದೇವಸ್ಥಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಕನ್ನಡ ಮತ್ತು ಕನ್ನಡತನದ ಅಸ್ತಿತ್ವಕ್ಕೆ ಎದುರಾಗುತ್ತಿರುವ ಸವಾಲುಗಳನ್ನು ಉಲ್ಲೇಖಿಸಿದ ಅವರು, ಅನ್ಯಭಾಷೆಗಳ ಪ್ರಭಾವ ಹೆಚ್ಚುತ್ತಿದ್ದು, ಕನ್ನಡದ ಹಿತಕ್ಕಾಗಿ ಪ್ರತಿಯೊಬ್ಬ ಕನ್ನಡಿಗರೂ ಕಂಕಣಬದ್ಧರಾಗಬೇಕು. ರಾಜ್ಯೋತ್ಸವ ಬಂದಾಗ ಮಾತ್ರ ಜಾಗೃತಿಯಾಗಬಾರದು. ಪ್ರತಿದಿನವೂ ಮಾತೃಭಾಷೆಯ ಪರ ಕಾಳಜಿ ಇರಬೇಕು,ಕನ್ನಡವನ್ನು ಗಾಳಿಯಂತೆ, ನೀರಿನಂತೆ ಬಳಕೆಯಲ್ಲಿ ಬೆಳೆಸಿದಾಗ ಮಾತ್ರ ಮುಂದಿನ ತಲೆಮಾರಿಗೆ ಅದು ಬಲದಾಯಕವಾಗುತ್ತದೆ ಎಂದು ಹೇಳಿದರು.ನಗರಸಭೆಯ ಮಾಜಿ ಉಪಾಧ್ಯಕ್ಷ ಕೆ.ಎಲ್.ಕುಮಾರ್ ಮಾತನಾಡಿ, ಕನ್ನಡದಲ್ಲೇ ವ್ಯವಹಾರ ನಡೆಸುವ ಅಭ್ಯಾಸ ರೂಢಿಯಾದಾಗ ಮಾತ್ರ ಭಾಷೆ ಉಳಿಯುತ್ತದೆ, ಪರಭಾಷೆಗಳ ಪ್ರಭಾವ ಇದ್ದರೂ ಮಾತೃಭಾಷೆಯನ್ನು ಮರೆತರೆ ನಾವು ನಮ್ಮ ಅಸ್ತಿತ್ವವೇ ಕಳೆದುಕೊಳ್ಳುತ್ತೇವೆ ಎಂದು ಹೇಳಿದರು.
ಕಾಲ್ನಡಿಗೆ ಸ್ನೇಹಕೂಟದ ಅಧ್ಯಕ್ಷ ರೈಲ್ವೆ ಬಾಬು ಮಾತನಾಡಿ, ಕನ್ನಡ ಮಾಧ್ಯಮ, ಕನ್ನಡ ಪುಸ್ತಕ, ಕನ್ನಡ ಪತ್ರಿಕೆ ಓದುವ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ಮಕ್ಕಳಲ್ಲಿ ಕನ್ನಡಾಭಿಮಾನ ಮೂಡಿಸುವುದು ನಮ್ಮ ಮೊದಲ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ನಿಸರ್ಗ ನಾಗರೀಕರ ಸೇವಾ ಸಮಿತಿಯ ಪದಾಧಿಕಾರಿಗಳಾದ ಶಿವಪ್ಪ, ರಾಮಕೃಷ್ಣೇಗೌಡ, ಮದನ್, ಬಸವರಾಜು, ವಿರುಪಾಕ್ಷಿಪುರ ಉಮೇಶ್, ಹನಿಯೂರು ಮದ್ದೂರೇಗೌಡ, ಶಿವಸ್ವಾಮಿ, ಸಿದ್ದಪ್ಪ, ನಾಗರಾಜು, ವೆಂಕಟೇಶ್, ಹನುಮಂತೇಗೌಡ ಇತರರು ಇದ್ದರು.