ಪತ್ರಿಕಾಗೋಷ್ಠಿಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಒತ್ತಾಯಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಾರದು. ಕಟ್ಟಡ ನಿರ್ಮಾಣ, ಕಮಿಷನ್ ದಂಧೆ ಕಾಮಗಾರಿಗಳನ್ನು ನಡೆಸಲು ಮುಂದಾಗುತ್ತಿದೆ. ಸರ್ಕಾರದ ಕಾರ್ಯ ಯೋಜನೆಗಳಲ್ಲಿ ಜನರ ಬದುಕು ಕಾಣುತ್ತಿಲ್ಲ ಎಂದು ದೂರಿದರು.
ಗಣಿ ಬಾಧಿತ ಪ್ರದೇಶಗಳ ಜನರ ಬದುಕು ಹೇಗೆ ಜರ್ಜರಿತವಾಗಿದೆ. ಏನೆಲ್ಲ, ಹಾನಿಯಾಗಿದೆ. ಎಷ್ಟು ಹಾನಿಯಾಗಿದೆ ಎಂಬುದರ ಬಗ್ಗೆ ಸರ್ಕಾರ ಹಾಗೂ ಇಲಾಖೆಗಳು ಅಧ್ಯಯನ ನಡೆಸಿಲ್ಲ. ಕೆಲ ಪ್ರಭಾವಿ ಶಾಸಕರ ಮಾತಿಗೆ ಮಣಿದು ಕಾಮಗಾರಿ ನಡೆಸಲಾಗುತ್ತಿದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗಣಿ ಬಾಧಿತ ಪ್ರದೇಶಗಳಲ್ಲಿ ಸುಪ್ರೀಂ ಕೋರ್ಟ್ ಸಲಹೆಯಂತೆ ಸಾಮಾಜಿಕ ವಲಯಕ್ಕೆ ಆದ್ಯತೆ ನೀಡಬೇಕು. ಆರೋಗ್ಯ, ಶಿಕ್ಷಣ, ಮಹಿಳೆಯರು, ಮಕ್ಕಳ ಹಕ್ಕುಗಳು, ಕುಡಿಯುವ ನೀರು, ಕೃಷಿ ಕಾರ್ಮಿಕರಿಗೆ ಉದ್ಯೋಗಕ್ಕೆ ಆದ್ಯತೆ ದೊರೆಯಬೇಕು. ಕೆಎಂಇಆರ್‌ಸಿ ಮೊದಲು ಗಣಿ ಬಾಧಿತ ಪ್ರದೇಶದಲ್ಲಿನ ಯೋಜನೆಗಳಿಗೆ ಆದ್ಯತೆ ನೀಡಬೇಕು. ಬಳಿಕವಷ್ಟೇ ಅಪ್ರತ್ಯಕ್ಷವಾಗಿ ಬಾಧಿತವಾದ ಪ್ರದೇಶದಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದರು. ಕೆಎಂಇಆರ್‌ಸಿ ಪೌಷ್ಟಿಕತೆ ಕಾರ್ಯಕ್ರಮವನ್ನು ಆದ್ಯತಾನುಸಾರ ನಡೆಸಬೇಕು. ಗಣಿ ಬಾಧಿತ ಪ್ರದೇಶದಲ್ಲಿನ ಮಕ್ಕಳು ಅಸ್ತಮಾನದಿಂದ ಬಳಲುತ್ತಿದ್ದಾರೆ. ಸಂಡೂರು ತಾಲೂಕಿನಲ್ಲಿ ನಡೆದ ಅಧ್ಯಯನದಿಂದ ದೃಢಪಟ್ಟಿದೆ. ಹೈನುಗಾರಿಕೆಗೆ ಉತ್ತೇಜನ ನೀಡಬೇಕು. ಇದಕ್ಕೆ ಪೂರಕವಾಗಿ ಜಾನುವಾರುಗಳಿಗೆ ಮೇವು ಒದಗಿಸಲು ಕ್ರಮ ವಹಿಸಬೇಕು ಎಂದರು.
ಗಣಿ ಬಾಧಿತ ಪ್ರದೇಶದಲ್ಲಿ ದಿನಗೂಲಿ ₹600ಕ್ಕೆ ಏರಿಸಬೇಕು. ಜೊತೆಗೆ 250 ದಿನ ಕೂಲಿ ಒದಗಿಸಬೇಕು. ಕೆಎಂಇಆರ್‌ಸಿ ಹಣವನ್ನು ಬಳಕೆ ಮಾಡಬೇಕು. ಕೆಎಂಇಆರ್‌ಸಿಯಲ್ಲಿ ನೌಕರರನ್ನು ನೇಮಿಸಿ ಸಂಬಳ ನೀಡುವುದು ಸರಿಯಲ್ಲ, ಗಣಿಬಾಧಿತ ಪ್ರದೇಶದ ಶಾಲೆಗಳಲ್ಲಿ ಬಾಲಕಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವ ಕಾರ್ಯ ಆಗಬೇಕು. ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ ಮಾಡಬೇಕು. ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾಸಿಕ ಸಹಾಯಧನ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಭಾಗದಲ್ಲಿ ಈಗ ಜಿಂದಾಲ್ ಕಾರ್ಖಾನೆಯವರೇ ಹೊಸದಾಗಿ ಗಣಿ ಗುತ್ತಿಗೆಗಳನ್ನು ಪಡೆಯುತ್ತಿದ್ದಾರೆ. ನಿಯಮ ಮೀರಿ ಗುತ್ತಿಗೆ ನೀಡಲಾಗುತ್ತಿದೆ. ಈ ಕಾರ್ಖಾನೆಯಿಂದ ಹಲವು ಲೋಪಗಳಾಗಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸಿ ಹೋರಾಟ ನಡೆಸಲಾಗುವುದು ಎಂದರು.