ಕುಮಟಳ್ಳಿ ಹಕ್ಕು ಚ್ಯುತಿ ಮಂಡಿಸಲಿ: ಸವದಿ ಸವಾಲು

KannadaprabhaNewsNetwork |  
Published : Feb 07, 2024, 01:45 AM ISTUpdated : Feb 07, 2024, 04:34 PM IST
Lakshman Savadi

ಸಾರಾಂಶ

ಅಥಣಿ ಮತಕ್ಷೇತ್ರಕ್ಕೆ ಮಂಜೂರಾದ ಮಹತ್ವದ ಯೋಜನೆಯನ್ನು ಬೇರೆ ಕ್ಷೇತ್ರದಲ್ಲಿ ಭೂಮಿಪೂಜೆ ಮಾಡಲು ಸಾಧ್ಯವೆ? ಮಾಜಿ ಶಾಸಕರು ಹಕ್ಕುಚ್ಯುತಿ ಮಂಡನೆ ಮಾಡಿದರೆ ನನಗೆ ಯಾವುದೇ ಸಮಸ್ಯೆ ಇಲ್ಲ. ಅದಕ್ಕೆ  ಉತ್ತರ ನೀಡಲು ನಾನು  ಸಿದ್ಧನಿದ್ದೇನೆ ಎಂದು ಶಾಸಕ ಸವದಿ ಅವರು ಮಾಜಿ ಶಾಸಕ ಮಹೇಶ ಕುಮಠಳ್ಳಿಗೆ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಅಥಣಿ

ಅಥಣಿ ಮತಕ್ಷೇತ್ರಕ್ಕೆ ಮಂಜೂರಾದ ಮಹತ್ವದ ಯೋಜನೆಯನ್ನು ಬೇರೆ ಮತಕ್ಷೇತ್ರದಲ್ಲಿ ಭೂಮಿಪೂಜೆ ಮಾಡಲು ಸಾಧ್ಯವೆ? ಮಾಜಿ ಶಾಸಕರು ಹಕ್ಕುಚ್ಯುತಿ ಮಂಡನೆ ಮಾಡಿದರೆ ನನಗೆ ಯಾವುದೇ ಸಮಸ್ಯೆ ಇಲ್ಲ. ಅದಕ್ಕೆ ತಕ್ಕ ಉತ್ತರ ನೀಡಲು ನಾನು ಸದಾ ಸಿದ್ಧನಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಅವರು ಮಾಜಿ ಶಾಸಕ ಮಹೇಶ ಕುಮಠಳ್ಳಿಗೆ ಸವಾಲು ಹಾಕಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸರ್ಕಾರದ ಅವಧಿಯಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಎರಡು ಡಿಪಿಆರ್‌ಗಳು ಆಗಿದ್ದವು. ಕಾಮಗಾರಿ ಸ್ಥಳದಲ್ಲಿ ಯೋಜನೆಯ ಭೂಮಿ ಪೂಜೆ ಮಾಡಿರಲಿಲ್ಲ. ಸರ್ಕಾರದಿಂದ ಯಾವುದೇ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ ಸಿಕ್ಕಿರಲಿಲ್ಲ. ಗುತ್ತಿಗೆದಾರ ಯಾರು ಅಂತಾ ಗೊತ್ತಿರಲಿಲ್ಲ, ಹೀಗಿರುವಾಗ ಅಂದಿನ ಮುಖ್ಯಮಂತ್ರಿಗಳಿಗೆ ಗೊತ್ತಿತ್ತು. ಇದು ಅಪೂರ್ಣ ಮಂಜೂರಾತಿ ಇರುವುದರಿಂದ ಅವರು ಅಥಣಿಯಲ್ಲಿ ಈ ಯೋಜನೆಯನ್ನು ಶಂಕುಸ್ಥಾಪನೆ ಮಾಡಿದರೆ ಕಾನೂನು ಬದ್ಧವಾಗುವುದಿಲ್ಲ ಎಂದು. ಹೀಗಾಗಿ ಅವರು ಇಲ್ಲಿಗೆ ಬಂದಿರಲಿಲ್ಲ ಅಂತಾ ಅನಿಸುತ್ತದೆ ಎಂದು ಹೇಳಿದರು.

ಅಥಣಿ ತಾಲೂಕಿನ ಪೂರ್ವ ಭಾಗದ ವಿವಿಧ ಹಳ್ಳಿಗಳ ರೈತರ ಬಹುದಿನಗಳ ಕನಸಾದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯು ಮಹತ್ವದ ಯೋಜನೆಯಾಗಿದೆ. ಅಥಣಿ ಮತಕ್ಷೇತ್ರದ ಪೂರ್ವ ಭಾಗದ ೯೯೫೦ ಹೆಕ್ಟೇರ್ ನೀರಾವರಿ ವಂಚಿತ ಭೂಮಿಗೆ ₹೧೪೮೬.೪೧ ಕೋಟಿ ಗಳ ಕಾಮಗಾರಿಯ್ನು ಇದೇ ತಿಂಗಳು ಫೆ.೧೬ ರ ನಂತರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ ಕೆ ಶಿವಕುಮಾರ ಅವರ ನೇತೃತ್ವದಲ್ಲಿ ಕಾಮಗಾರಿ ಭೂಮಿ ಪೂಜೆ ಮಾಡಿ ಕ್ಷೇತ್ರದಲ್ಲಿ ನೀರಾವರಿಯಿಂದ ವಂಚಿತ ಪೂರ್ವಭಾಗದ ರೈತರ ಬೇಡಿಕೆಯನ್ನು ಈಡೇರಿಸುವುದು ಶತಸಿದ್ದ ಎಂದು ಶಾಸಕ ಸವದಿ ಹೇಳಿದರು.

ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ ಮಾಡುವ ದಿನ ಕಪ್ಪು ಬಟ್ಟೆ ಪ್ರದರ್ಶನ ಮಾಡಿ, ಪ್ರತಿಭಟನೆ ನಡೆಸಲಾಗುವುದು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರೈತರಿಗೆ ಅನುಕೂಲವಾಗುವ ಯೋಜನೆ ಇದಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು ವರ್ಕ್‌ ಆರ್ಡರ್ ಸಹ ನೀಡಲಾಗಿದೆ. ಭೂಮಿ ಪೂಜೆಯನ್ನು ಮಾಡಿ ಇನ್ನು ೨ ವರ್ಷ ೬ ತಿಂಗಳಲ್ಲಿ ಕೊಟ್ಟಲಗಿ ಗ್ರಾಮಕ್ಕೆ ನೀರು ಕೊಡುವ ಕಾರ್ಯವನ್ನು ಮಾಡುತ್ತೇವೆ ಎಂದರು.

ಈಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಾಜಿ ಶಾಸಕ ಕುಮಟಳ್ಳಿ ರಾಜಕೀಯ ನಾಟಕ ಶುರು ಮಾಡಿದ್ದಾರೆ. ಮತಕ್ಷೇತ್ರದ ಮತದಾರರು ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿಯೂ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!