ಮೈಕ್ರೋ ಫೈನಾನ್ಸ್, ಸಾಲ ಏಜೆನ್ಸಿ, ಗಿರವಿದಾರರ ಜತೆ ಸಭೆ । ಹಣ ಹಿಂಪಡೆಯುವಲ್ಲಿ ಒತ್ತಡ ಸಲ್ಲ
ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ಯಾವುದೇ ವ್ಯಕ್ತಿಗೆ ಸಾಲ ನೀಡುವ ಮುನ್ನ ಅವರಿಗೆ ಈ ಮುಂಚೆ ಇರುವ ಸಾಲಗಳ ಬಗ್ಗೆ ಪರಿಶೀಲಿಸಿ ನೀಡಬೇಕು. ಸಾಲ ನೀಡಿದ ಬಳಿಕ ಕಾನೂನುಬದ್ದವಾಗಿ ಸಾಲ ವಸೂಲಾತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಣಕಾಸು ಮತ್ತು ಮೈಕ್ರೋ ಫೈನಾನ್ಸ್, ಸಾಲ ನೀಡುವ ಏಜೆನ್ಸಿ ಮತ್ತು ಗಿರವಿ, ಲೇವಾದೇವಿಗಾರರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಸಾಮಾನ್ಯ ಜನರಿಗೆ ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ತುರ್ತು ಪರಿಸ್ಥಿತಿಯಲ್ಲಿ ಸುಲಭವಾಗಿ ಸಾಲ ನೀಡುತ್ತ ಸಹಕರಿಸುತ್ತ ಬಂದಿದ್ದಾರೆ. ನಾವು ನಿಮ್ಮ ವಿರುದ್ದ ಇಲ್ಲ. ಆದರೆ, ಒಬ್ಬ ಮಧ್ಯಮ ವರ್ಗದ ವ್ಯಕ್ತಿಗೆ 4 ಕ್ಕಿಂತ ಹೆಚ್ಚು ಬಾರಿ ಸಾಲ ನೀಡುವಂತಿಲ್ಲ. ಒಬ್ಬ ವ್ಯಕ್ತಿಗೆ ಸಾಲ ನೀಡುವ ಮುನ್ನ ಅವನ ಹಿಂದಿನ ಸಾಲಗಳ ಬಗ್ಗೆ ಮಾಹಿತಿ ಪಡೆದು ನೀಡಬೇಕು. ಹೆಚ್ಚು ಬಾರಿ ಸಾಲ ನೀಡಿ ಆತನಿಗೆ ಹೊರೆಯಾಗಿ, ಏನಾದರೂ ಹೆಚ್ಚು ಕಮ್ಮಿ ಆದರೆ ನಿಮಗೇ ಸಮಸ್ಯೆಯಾಗುತ್ತದೆ. ಆದ್ದರಿಂದ ಅನವಶ್ಯಕ ಸಮಸ್ಯೆ ತಂದುಕೊಳ್ಳದೇ, ಸಾಲ ಕುರಿತಾದ ಪೂರ್ವಾಪರ ಪರಿಶೀಲಿಸಿ ಸಾಲ ನೀಡಬೇಕು ಎಂದು ಸಲಹೆ ನೀಡಿದರು.ಶಿವಮೊಗ್ಗದಲ್ಲಿ ಮೈಕ್ರೋ ಫೈನಾನ್ಸ್, ಇತರೆ ಹಣಕಾಸು ಸಂಸ್ಥೆಗಳ ವಿಷಯದಲ್ಲಿ ಅಂತಹ ಘಟನೆಗಳು, ಸಮಸ್ಯೆಗಳು ಇದುವರೆಗೆ ವರದಿಯಾಗಿಲ್ಲ. ಸಾಲ ನೀಡುವಾಗ ಮತ್ತು ವಸೂಲು ಮಾಡುವಾಗ ನಿಯಮಾವಳಿಗಳನ್ನು ಪಾಲಿಸಬೇಕು. ಜಿಲ್ಲೆಯಲ್ಲಿ ಇನ್ನೂ ಸಹಕಾರ ಸಂಘಕ್ಕೆ ನೋಂದಣಿಯಾಗದ ಗಿರವಿದಾರರು ತಕ್ಷಣ ನೋಂದಣಿಯಾಗಬೇಕು. ಸಹಕಾರ ಸಂಘಗಳ ಉಪ ನಿಬಂಧಕರು ಈ ಕುರಿತು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಕ್ರಿಮಿನಲ್ ಹಿನ್ನೆಲೆ ಇರುವಂತಹ ವ್ಯಕ್ತಿಗಳನ್ನು ಸಾಲ ವಸೂಲಾತಿಗೆ ನೇಮಿಸಿಕೊಳ್ಳಬಾರದು. ನಿಯಮಾನುಸಾರ, ಕಾನೂನುಬದ್ದವಾಗಿ ಸಾಲ ವಸೂಲಾತಿ ಮಾಡಬೇಕೆಂದು ಸೂಚಿಸಿದ ಅವರು ಸಾಲ ವಸೂಲಾತಿಗೆ ಪೊಲೀಸರು ಬೆಂಬಲ ಕೂಡ ಇದ್ದು, ಕಾನೂನು ರೀತಿಯಲ್ಲಿ ನಮ್ಮ ಸಹಾಯ ಪಡೆಯಬಹುದು ಎಂದು ತಿಳಿಸಿದರು.