ಆರೋಗ್ಯಕರ ಸಮಾಜಕ್ಕೆ ಬಲಿಷ್ಠವಾಗಲಿ ಮಾಧ್ಯಮ ಶಿಕ್ಷಣ: ಕುಲಪತಿ ಪ್ರೊ. ಬಿ.ಕೆ. ರವಿ

KannadaprabhaNewsNetwork | Published : Jul 9, 2024 12:50 AM

ಸಾರಾಂಶ

ಪ್ರಸ್ತುತ ಭಾರತೀಯ ಮಾಧ್ಯಮ ವಿಸ್ತಾರವಾಗಿದೆ. ತಂತ್ರಜ್ಞಾನದ ಭರಾಟೆಯಲ್ಲಿ ಭಾರತೀಯ ಮಾಧ್ಯಮ ತನ್ನದೇ ಸ್ಥಾನ ಪಡೆದಿದೆ. ಆದರೆ, ಮಾಧ್ಯಮ ಶಿಕ್ಷಣ ಮಾತ್ರ ಇನ್ನೂ ಹಳೆಯ ಕಾಲದ್ದಿದೆ. ಪಾಶ್ಚಾತ್ಯ ಪಠ್ಯಗಳನ್ನೇ ಬೋಧಿಸುವ ಸ್ಥಿತಿ ಇದೆ.

ಧಾರವಾಡ:

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಭಾರತೀಯ ಮಾಧ್ಯಮದ ಶಿಕ್ಷಣ ಜತೆಗೆ ಮಾಧ್ಯಮ ಕ್ಷೇತ್ರವೂ ಬಲಿಷ್ಠಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಹೊಸ ತಲೆಮಾರಿನ ಪ್ರಾಧ್ಯಾಪಕರು, ಪತ್ರಕರ್ತರ ಮೇಲೆ ಸಾಮಾಜಿಕ ಹೊಣೆಗಾರಿಕೆ ಹೆಚ್ಚಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ 40ನೇ ವರ್ಷಾಚರಣೆ ನಿಮಿತ್ತ ಕವಿವಿ ಮತ್ತು ಕರ್ನಾಟಕ ಪತ್ರಿಕೋದ್ಯಮ- ಸಂವಹನ ಅಧ್ಯಾಪಕರ ಸಂಘ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಭಾರತೀಯ ಮಾಧ್ಯಮ ವಿಸ್ತಾರವಾಗಿದೆ. ತಂತ್ರಜ್ಞಾನದ ಭರಾಟೆಯಲ್ಲಿ ಭಾರತೀಯ ಮಾಧ್ಯಮ ತನ್ನದೇ ಸ್ಥಾನ ಪಡೆದಿದೆ. ಆದರೆ, ಮಾಧ್ಯಮ ಶಿಕ್ಷಣ ಮಾತ್ರ ಇನ್ನೂ ಹಳೆಯ ಕಾಲದ್ದಿದೆ. ಪಾಶ್ಚಾತ್ಯ ಪಠ್ಯಗಳನ್ನೇ ಬೋಧಿಸುವ ಸ್ಥಿತಿ ಇದೆ. ಹೀಗಾಗಿ ಮಾಧ್ಯಮ ಶಿಕ್ಷಣ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಂದಕ ಉಂಟಾಗಿದ್ದು, ಅದನ್ನು ಸರಿದೂಗಿಸುವಂತಹ ಪಠ್ಯಕ್ರಮದ ಅಗತ್ಯವಿದೆ ಎಂದರು.

ಭಾರತ ಹಾಗೂ ಕರ್ನಾಟಕ ಮಾಧ್ಯಮ ಲೋಕಕ್ಕೆ ಕವಿವಿ ಪತ್ರಿಕೋದ್ಯಮ ವಿಭಾಗದ ಕೊಡುಗೆ ಅಪಾರ. ಇದು ನಾಲ್ಕು ದಶಕಗಳ ಸಾರ್ಥಕ ಸೇವೆ ಸಲ್ಲಿಸಿದೆ. ಇಲ್ಲಿ ಕಲಿತ ಅನೇಕರು ರಾಜ್ಯ-ರಾಷ್ಟ್ರ ಮಾಧ್ಯಮ ಹಾಗೂ ಸರ್ಕಾರಿ ಕ್ಷೇತ್ರದ ಉನ್ನತ ಹುದ್ದೆಗಳು ಅಲಂಕರಿಸಿರುವುದು ಹೆಮ್ಮೆಯ ವಿಷಯ ಎಂದು ಪ್ರೊ. ಬಿ.ಕೆ. ರವಿ ಶ್ಲಾಘಿಸಿದರು.

ಸಮ್ಮೇಳನಕ್ಕೆ ಚಾಲನೆ ನೀಡಿದ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ನಿರಂಜನ ವಾನಳ್ಳಿ, ಕೃತಕ ಬುದ್ಧಿಮತ್ತೆಯಲ್ಲಿನ ಸಕಾರಾತ್ಮಕ ಅಂಶಗಳನ್ನು ಮಾತ್ರ ಬಳಸಿಕೊಂಡು ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಮಾಧ್ಯಮ ಶಿಕ್ಷಣ ಹಾಗೂ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಸವಾಲಾಗಲಿದ್ದು, ಮಾಧ್ಯಮ ಕ್ಷೇತ್ರದ ಶಿಕ್ಷಕರು ಹಾಗೂ ಪತ್ರಕರ್ತರು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಬೇಕು ಎಂಬ ಸಲಹೆ ನೀಡಿದರು.

ಇದೇ ವೇಳೆ ದಿಕ್ಸೂಚಿ ಭಾಷಣ ಮಾಡಿದ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಹಾಗೂ ಅವರ ಪತ್ನಿ ಭಾವನಾ ಹೆಗಡೆ ಅವರನ್ನು ಪತ್ರಿಕೋದ್ಯಮ ವಿಭಾಗದ ಪರವಾಗಿ ಗೌರವಿಸಲಾಯಿತು. ಕವಿವಿ ಪತ್ರಿಕೋದ್ಯಮ ವಿಭಾಗ 40 ವರ್ಷಗಳು ನಡೆದು ಬಂದ ಹಾದಿಯ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನಗೊಂಡಿತು. ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ.ಎಸ್‌. ಬಾಲಸುಬ್ರಹ್ಮಣ್ಯ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ, ಪ್ರತಿ ಕ್ಷಣಕ್ಕೂ ಬದಲಾಗುವ ತಂತ್ರಜ್ಞಾನ ಅರಿವಿನ ಜತೆ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ಆವಾಂತರಗಳ ಬಗ್ಗೆ ಜ್ಞಾನ ಹೊಂದಬೇಕು ಎಂದರು.

ಇದೇ ವೇಳೆ ಪತ್ರಿಕೋದ್ಯಮ ಪಲ್ಲಟಗಳು, ಮಾಧ್ಯಮ ಕ್ಷಿತಿಜ ಕೃತಿ ಬಿಡುಗಡೆ ಮಾಡಲಾಯಿತು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜೆ.ಎಂ. ಚಂದುನವರ, ಪ್ರಾಧ್ಯಾಪಕ ಡಾ. ಸಂಜಯ ಮಾಲಗತ್ತಿ, ಡಾ. ಪ್ರಶಾಂತ ವೇಣುಗೋಪಾಲ ಇದ್ದರು.

ಮಧ್ಯಾಹ್ನದ ನಂತರ ಪ್ರಮುಖ ದಿನಪತ್ರಿಕೆಗಳ ಸಂಪಾದಕರು ಹಾಗೂ ವಿದ್ಯುನ್ಮಾನ ಹಾಗೂ ಅಂತರ್ಜಾಲ ಮಾಧ್ಯಮದ ಪ್ರಮುಖರೊಂದಿಗೆ ಮುಖಾಮುಖಿ ಚರ್ಚೆ ನಡೆಯಿತು. ತದನಂತರ ಹಳೆಯ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಹಾಗೂ ಕವಿಪವಿ ನೂತನ ವೆಬ್‌ಸೈಟ್‌ ಉದ್ಘಾಟನೆ ಜರುಗಿತು. ಹಿರಿಯ ಪತ್ರಕರ್ತರಾದ ಆನಂದ ಯಮನೂರ, ರಾಮು ಪಾಟೀಲ, ಶಂಕರ ಪಾಗೋಜಿ, ಸಯ್ಯದ ಸನದಿ, ಪ್ರವೀಣ ಶಿರಿಯಣ್ಣವರ, ಹರ್ಷವರ್ಧನ ಶೀಲವಂತ, ಡಾ. ಶಿವಕುಮಾರ ಕಣಸೋಗಿ, ನಯನಾ ಗಂಗಾಧರಪ್ಪ ಇದ್ದರು. ವಿದ್ಯಾರ್ಥಿಗಳ ಜ್ಞಾನ ಕ್ಷಿತಿಜ ಹೆಚ್ಚಿಸಿ:

ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಅವರ ಕೃತಕ ಬುದ್ಧಿಮತ್ತೆ ಕುರಿತು ಸಂಗ್ರಹ ಯೋಗ್ಯ ಪಿಪಿಟಿ ಪ್ರದರ್ಶನ ನಂತರ ಪ್ರಭಾವಿತರಾಗಿ ಮಾತನಾಡಿದ ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ, ವಿವಿಯಲ್ಲಿ ಪ್ರೊಫೆಸರ್ ಆಫ್‌ ಪ್ರ್ಯಾಕ್ಟಿಸ್‌ ಎಂಬ ಯೋಜನೆ ಅಡಿ ಈಗಾಗಲೇ ಕ್ಷೇತ್ರದಲ್ಲಿರುವ ಆಸಕ್ತರು ವಿಭಾಗದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಜ್ಞಾನ ಕ್ಷಿತಿಜವನ್ನು ಹೆಚ್ಚಿಸಲು ಮನವಿ ಮಾಡಿದರು. ಜತೆಗೆ ಕನ್ನಡಪ್ರಭ ಮೂರು ವರ್ಷಗಳ ಕಾಲ ಪತ್ರಿಕೋದ್ಯಮ ವಿಭಾಗದಲ್ಲಿ ಸಂದರ್ಶನದ ಮೂಲಕ ವಿಭಾಗದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಂಸ್ಥೆಯಲ್ಲಿ ನೌಕರಿ ನೀಡಿರುವುದನ್ನು ಸಮಾರಂಭದಲ್ಲಿ ಗುಡಸಿ ಸ್ಮರಿಸಿದರು.

Share this article