ಮೋದಿ ಗಾಳಿ ಬಿಜೆಪಿ ಮತವಾಗಿ ಪರಿವರ್ತನೆಯಾಗಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

KannadaprabhaNewsNetwork |  
Published : Apr 05, 2024, 01:03 AM IST
ಪೊಟೋ ಪೈಲ್ : 4ಬಿಕೆಲ್5:ಮುರುಡೇಶ್ವರದ ಆರೆನ್ನೆಸ್ ಸಭಾಭವನದಲ್ಲಿ ಬಿಜೆಪಿ ಬೂತ್ ಮಟ್ಟದ ಪ್ರಮುಖರ ಸಮಾವೇಶ ನಡೆಯಿತು.  | Kannada Prabha

ಸಾರಾಂಶ

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ತಾವೆಲ್ಲರೂ ಪ್ರತಿ ಬೂತ್ ನಲ್ಲೂ ಶಕ್ತಿಮೀರಿ ಕೆಲಸ ಮಾಡಬೇಕಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಭಟ್ಕಳ: ಮೋದಿ ಗಾಳಿ ಎಲ್ಲ ಮತಗಟ್ಟೆಗಳಲ್ಲಿಯೂ ಬಿಜೆಪಿಗೆ ಹೆಚ್ಚು ಮತವಾಗಿ ಪರಿವರ್ತನೆ ಆಗಬೇಕು ಎಂದು ಉತ್ತರ ಕನ್ನಡದ ಬಿಜೆಪಿಯ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಮುರುಡೇಶ್ವರದ ಆರೆನ್ನೆಸ್ ಸಭಾಭವನದಲ್ಲಿ ಗುರುವಾರ ಸಂಜೆ ಬೂತ್ ಮಟ್ಟದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಗೆಲುವು ಶತಸಿದ್ಧ. ಆದರೆ ದಾಖಲೆಯ ಗೆಲುವು ಆಗಬೇಕು. ನಾನು ಶಾಸಕನಾಗಿ, ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದರಿಂದ ಜಿಲ್ಲೆಯ ಸಮಸ್ಯೆ ಬಗ್ಗೆ ಸ್ಪಷ್ಟ ಅರಿವು ನನ್ನಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಜನರ ಧ್ವನಿಯಾಗಿ ನಾನು ಪ್ರಾಮಾಣಿಕ ಕೆಲಸ ಮಾಡುವುದರ ಜತೆಗೆ ಜಿಲ್ಲೆಯ ಸಮಸ್ಯೆ ಬಗೆಹರಿಸುತ್ತೇನೆಂದ ಅವರು ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ತಾವೆಲ್ಲರೂ ಪ್ರತಿ ಬೂತ್ ನಲ್ಲೂ ಶಕ್ತಿಮೀರಿ ಕೆಲಸ ಮಾಡಬೇಕಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಬ್ಬ ಅನುಭವಿ ಮತ್ತು ಸಜ್ಜನ ವ್ಯಕ್ತಿಯಾಗಿದ್ದಾರೆ. ಇವರ ಗೆಲುವಿಗೆ ಎಲ್ಲರೂ ಪ್ರಯತ್ನಿಸಬೇಕು. ಗೆದ್ದೇ ಗೆಲ್ಲುತ್ತಾರೆಂದು ಬೂತ್ ಮಟ್ಟದಲ್ಲಿ ಕಾರ್ಯಕರ್ತರು, ಮುಖಂಡರು ಮೈಮರೆಯದೇ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಕಾಗೇರಿಯವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ ಮೋದಿ ಕೈ ಬಲಪಡಿಸಬೇಕು ಎಂದರು.

ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಧಮನಿಸಲು ಹೊರಟಿದೆ. ನಮ್ಮ ಕಾರ್ಯಕರ್ತರಿಗೆ ಜೈಲು, ಕೇಸು ಹೊಸದಲ್ಲ. ನಮ್ಮ ಕಾರ್ಯಕರ್ತರ ಮೇಲೆ ಗಡಿಪಾರು, ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ಕಾರ್ಯಕರ್ತನ ಮೇಲೆ ಹಾಕಿರುವ ಗಡಿಪಾರು ಕೇಸನ್ನು ಹಿಂಪಡೆಯಬೇಕು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜನರು ತಕ್ಕ ಪಾಠ ಕಲಿಸಲಿದ್ದು, ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ, ಭಟ್ಕಳ ಕ್ಷೇತ್ರದ ಪ್ರಭಾರಿ ಡಾ. ಜಿ.ಜಿ. ಹೆಗಡೆ, ಮಾಜಿ ಶಾಸಕ ಸುನೀಲ ನಾಯ್ಕ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ, ಜೆಡಿಎಸ್ ಮುಖಂಡ ಟಿ.ಟಿ. ನಾಯ್ಕ ಮಾತನಾಡಿದರು. ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಭಟ್ಕಳ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಹಿರಿಯ ಮುಖಂಡರಾದ ಸುಬ್ರಾಯ ನಾಯ್ಕ, ಜೆಡಿಎಸ್ ಮುಖಂಡ ಈಶ್ವರ ನಾಯ್ಕ, ಈಶ್ವರ ದೊಡ್ಮನೆ, ರಾಜೇಶ ನಾಯ್ಕ ಸೇರಿದಂತೆ ಹಲವು ಮುಖಂಡರಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಧನ್ಯಕುಮಾರ ಜೈನ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಧರ ನಾಯ್ಕ, ಶ್ರೀನಿವಾಸ ನಾಯ್ಕ ಮುಂತಾದವರು ಸಹಕರಿಸಿದರು. ಆರೋಗ್ಯದಲ್ಲಿ ಸುಧಾರಣೆ ಕಂಡ ಶಿವಾನಂದ ನಾಯ್ಕ

ಭಟ್ಕಳದಲ್ಲಿ ಶಾಸಕರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದ ಶಿವಾನಂದ ನಾಯ್ಕರು ಕಳೆದ ಏಳೆಂಟು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಅವರು ಇದೀಗ ಚೇತರಿಸಿಕೊಂಡಿದ್ದು, ಗುರುವಾರ ಸಂಜೆ ಮುರುಡೇಶ್ವರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹತ್ತು ನಿಮಿಷಕ್ಕೂ ಅಧಿಕ ಸಮಯ ನಿರರ್ಗಳವಾಗಿ ಹಿಂದಿನ ಪಕ್ಷ ಸಂಘಟನೆ, ಬಿಜೆಪಿ ಬೆಳೆದ ರೀತಿ ಮುಂತಾದವುಗಳ ಬಗ್ಗೆ ಮಾತನಾಡಿದರು. ಶಿವಾನಂದ ನಾಯ್ಕರು ಅನಾರೋಗ್ಯದಿಂದ ಚೇತರಿಸಿಕೊಂಡು ಇಷ್ಟೊಂದು ಮಾತನಾಡಿರುವುದಕ್ಕೆ ವೇದಿಕೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರೇ ಅಚ್ಚರಿ, ಸಂತಸ ಪಟ್ಟರು. ಶಿವಾನಂದ ನಾಯ್ಕ ಅವರು ಪಕ್ಷದಲ್ಲಿ ಮತ್ತೆ ಮಂಚೂಣಿಗೆ ಬರಲಿದ್ದಾರೆ ಎನ್ನುವ ಮಾತೂ ಕಾರ್ಯಕರ್ತರ ವಲಯದಲ್ಲಿ ಕೇಳಿ ಬಂತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ