ಸಾಮಾಜಿಕ ಪರಿವರ್ತನೆಗೆ ಪ್ರೇರಕ ಬರಹಗಳು ಬರಲಿ: ಕವಿ ಗಣಪತಿ

KannadaprabhaNewsNetwork | Published : Feb 28, 2024 2:30 AM

ಸಾರಾಂಶ

ಚಳ್ಳಕೆರೆ ನಗರದ ರೋಟರಿ ಬಾಲಭವನದಲ್ಲಿ ತನುಶ್ರೀ ಪ್ರಕಾಶನ ಸಂಸ್ಥೆ, ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯ ಸಮ್ಮೇಳನ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವನ ಸಂಕಲ್ಪಗಳನ್ನು ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಮನೆ ಕೆಲಸ ಕಾರ್ಯಗಳಿಗೆ ಸೀಮಿತವಾಗದೆ ಸಾಮಾಜಿಕ ಜಾಗೃತಿಯತ್ತ ದೃಷ್ಠಿಹಾಯಿಸಬೇಕಿದೆ. ಇಂದಿಗೂ ಸಹ ಮಹಿಳೆಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಸಾಮಾಜಿಕ ಜಾಗೃತಿಗಾಗಿ ಮಹಿಳೆಯರು ಸಂಘಟಿತರಾಗಬೇಕೆಂದು ಕವಿ ಗಣಪತಿ ಗೋ ಛಲವಾದಿ ತಿಳಿಸಿದರು.

ನಗರದ ರೋಟರಿ ಬಾಲಭವನದಲ್ಲಿ ತನುಶ್ರೀ ಪ್ರಕಾಶನ ಸಂಸ್ಥೆ, ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯ ಸಮ್ಮೇಳನ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ದೇಶದ ಇತಿಹಾಸದಲ್ಲಿ ೧೨ನೇ ಶತಮಾನ ಧಾರ್ಮಿಕ ಪರಿವರ್ತನೆ ಕಾಲವಾಗಿತ್ತು. ಜಗಜ್ಯೋತಿ ಬಸವಣ್ಣನವರೂ ಸೇರಿ ಅನೇಕ ದಾರ್ಶನಿಕರು ಸಾಮಾಜಿಕ ಜಾಗೃತಿ ಹಾಗೂ ಪರಿವರ್ತಣೆಗಾಗಿ ಶ್ರಮಿಸಿದರು ಎಂದರು.

ಪತ್ರಕರ್ತ ಹಾಗೂ ಸಾಹಿತಿ ಕರ‍್ಲಕುಂಟೆ ತಿಪ್ಪೇಸ್ವಾಮಿ, ಎಸ್.ರಾಜುರವರ ಪ್ರೇಮಸ್ಪರ್ಶ, ಸಿಂಚನರವರು ಬರೆದ ಭಾವನೆಗಳ ಬೆನ್ನೇರಿ, ರಮಾ ಪಣಿಭಟ್‌ ಗೋಪಿಯವರ ಆಕಾಶಬುಟ್ಟಿ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿ, ಮೂರು ವಿಭಿನ್ನ ವಿಚಾರಗಳನ್ನು ಹೊತ್ತ ಕವನ ಸಂಕಲಗಳು ಇಂದು ಬಿಡುಗಡೆಯಾಗಿವೆ. ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇಯಾದ ವಿಶೇಷತೆ ಇದೆ. ಯುವ ಕವಿಗಳು ಹಾಗೂ ಲೇಖಕರು ಇನ್ನೂ ಹೆಚ್ಚು ಬರವಣಿಗೆಯನ್ನು ಮುಂದುವರೆಸಿಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಚ್. ವಾಣಿಶ್ರೀ ಮಾತನಾಡಿ, ಹಿಂದೆ ಎಲ್ಲಾ ಕವಿಗಳು ನೈಜ್ಯ ಬದುಕಿನ ಚಿತ್ರಣ ನೀಡುವ ಜೊತೆಗೆ ಸಾಮಾಜಿಕ ಬದಲಾವಣೆಯತ್ತ ದೃಷ್ಟಿ ಇಟ್ಟು ಬರೆಯುತ್ತಿದ್ದರು. ಇಂದಿಗೂ ಅದೇ ಪರಂಪರೆ ಮುಂದುವರಿಯಬೇಕಿದೆ. ನಿಮ್ಮೆಲ್ಲಾ ಬರವಣಿಗೆಗಳು ಕನ್ನಡ ಸಾಹಿತ್ಯದ ಪರಂಪರೆಯನ್ನು ಎತ್ತಿ ಹಿಡಿಯುವಂತಾಗಬೇಕು. ಅಧ್ಯಯನ ಶೀಲ, ಸಾಹಿತ್ಯ ಕೃತಿಗಳು ಹೆಚ್ಚು ಹೊರಹೊಮ್ಮಬೇಕು ಎಂದರು.

ತನುಶ್ರೀ ಪ್ರಕಾಶನ ಸಂಸ್ಥಾಪಕ ಎಸ್. ರಾಜು ಸೂಲೇನಹಳ್ಳಿ, ಡಾ.ಶಫೀವುಲ್ಲಾ, ಅಂಜನ್‌ಕುಮಾರ್, ಶಿವಮೂರ್ತಿ, ಚಂದ್ರು, ಟಿ.ಹೊನ್ನೂರುಸ್ವಾಮಿ, ಶಾರದಮ್ಮ, ಎ.ಎಂ.ಜಗದೀಶ್ವರಿ, ರಾಧಾಮಣಿ, ಎಚ್.ಎಸ್.ಗೌಡರ, ಮುನಾವರ್, ಚಿದಾನಂದ, ಬಸವರಾಜ, ಬಿ.ವಿ.ಹರ್ಷ ಮುಂತಾದವರು ಭಾಗವಹಿಸಿದ್ದರು.

Share this article