ನಾಮಧಾರಿ ಸಮಾಜ ಒಗ್ಗಟ್ಟಿನಿಂದ ಬೆಳೆಯಲಿ: ಸುಬ್ರಾಯ ನಾಯ್ಕ

KannadaprabhaNewsNetwork | Published : May 27, 2024 1:01 AM

ಸಾರಾಂಶ

ಕಷ್ಟದಿಂದ ಬೆಳೆದು ಬಂದ ನಾಮಧಾರಿ ಸಮಾಜ ಪರಸ್ಪರ ಒಗ್ಗಟ್ಟಿನಿಂದ ತನ್ನ ಅಸ್ತಿತ್ವ ಉಳಿಸಿಕೊಂಡು ಮುಂದೆ ಬೆಳೆಯಬೇಕಾಗಿದೆ.

ಭಟ್ಕಳ: ಶಿರಾಲಿಯ ಸಾರದಹೊಳೆಯ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ ನಾಮಧಾರಿ ಪ್ರತಿಷ್ಠಾನವನ್ನು ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕಷ್ಟದಿಂದ ಬೆಳೆದು ಬಂದ ನಾಮಧಾರಿ ಸಮಾಜ ಪರಸ್ಪರ ಒಗ್ಗಟ್ಟಿನಿಂದ ತನ್ನ ಅಸ್ತಿತ್ವ ಉಳಿಸಿಕೊಂಡು ಮುಂದೆ ಬೆಳೆಯಬೇಕಾಗಿದೆ. ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಸಮಾಜದ ಇತಿಹಾಸ, ಗಣ್ಯರ, ಸಾಧಕರ ಪರಿಚಯ ಬಿಂಬಿಸುವ ನಾಮಧಾರಿ ಸಂಚಿಕೆ ಸಮಾಜವನ್ನು ಬೆಸೆಯುವ ಸೇತುವೆಯಾಗಲಿ ಎಂದರು.

ನಾಮಧಾರಿ ಸಮಾಜದ ಸಾರದಹೊಳೆ ಕೂಟದ ಅಧ್ಯಕ್ಷ ಆರ್.ಕೆ. ನಾಯ್ಕ ಮಾತನಾಡಿ ಹಿಂದೆ ಇದ್ದಂತೆ ಜಿಲ್ಲೆಯ ರಾಜಕೀಯ ಪ್ರಾತಿನಿಧ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕೆಲಸ ಆಗಬೇಕಿದೆ ಎಂದರು.

ತಾಲೂಕಿನ ಆಸರಕೇರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ನಮ್ಮ ಸಮಾಜದ ಮಹತ್ವದ ಕಾರ‍್ಯಕ್ರಮಗಳಲ್ಲಿ ನಾವೇ ಪಾಲ್ಗೊಳ್ಳದಿದ್ದರೆ ಸಮಾಜ ಗಟ್ಟಿಗೊಳಿಸುವುದು ಕಷ್ಟ ಸಾಧ್ಯ ಎಂದರು.

ರಾಜ್ಯ ಯುವ ನಾಮಧಾರಿ ವೇದಿಕೆ ಅಧ್ಯಕ್ಷ ಗಜಾನನ ನಾಯ್ಕ, ಸಮಾಜದ ಸಂಸ್ಕೃತಿ, ಒಗ್ಗಟ್ಟು, ಇತಿಹಾಸ, ಸಾಧನೆ ಬಿಂಬಿಸುವ ನಾಮಧಾರಿ ಸಂಚಿಕೆ ಅಸ್ಮಿತೆಯ ಸಂಕೇತ ಎಂದರು.

ಸಮಾಜದ ಪುಸ್ತಕ ಬ್ಯಾಂಕ್ ಬಿಡುಗಡೆ ಮಾಡಿದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಅರ್ಚನಾ ನಾಯ್ಕ, `ಸಮಾಜದ ಮಹಿಳೆಯರು ಶೈಕ್ಷಣಿಕ, ಆರ್ಥಿಕ, ಸ್ವಾವಲಂನಬನೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದರು. `ನಾಮಧಾರಿ'''' ಸಂಚಿಕೆಯ ಸಂಪಾದಕ ಹಾಗೂ ಸಾಹಿತಿ ಸುಮುಖಾನಂದ ಜಲವಳ್ಳಿ, ಅದ್ಭುತ ಜನಪದ ಸಾಹಿತ್ಯದ ಇತಿಹಾಸವುಳ್ಳ ನಾಮಧಾರಿ ಸಮಾಜದ ಹಿನ್ನೆಲೆಯನ್ನು ಅರಿಯುವ ಆಸಕ್ತಿ ಸಮಾಜ ಬಾಂಧವರಿಗೆ ಇಲ್ಲದಿರುವುದು ನೋವಿನ ಸಂಗತಿ ಎಂದರು.

ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ನಾಯ್ಕ, ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಮರೆತು ನಾಮಧಾರಿ ಸಮಾಜದವರು ಏಕ ಮನಸ್ಸಿನಿಂದ ಹೊರಟರೆ ಉನ್ನತ ಸಾಧನೆ ಸಾಧ್ಯ ಎಂದರು.

ಮಾಜಿ ಶಾಸಕ ಜೆ.ಡಿ. ನಾಯ್ಕ, ನಾಮಧಾರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ವಿದ್ಯಾ ಸ್ಪಂದನಾ ಕಾರ್ಯಕ್ರಮ ಅತ್ಯಂತ ಮಹತ್ವದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಡಾ. ಪ್ರಭಾಕರ ನಾಯ್ಕ, ನಾಮಧಾರಿ ಪ್ರತಿಷ್ಠಾನ ಜಿಲ್ಲೆಯ ಸೀಮೆ ದಾಟಿ ಬೆಳೆಯಲಿದೆ.

ಸಮಾಜದ ನಡುವೆ ನಿರಂತರ ಸಂವಹನಕ್ಕೆ ಸಾಧ್ಯವಾಗುವ, ಸಮಾಜದ ಚರಿತ್ರೆಯನ್ನು ಪರಿಚಯಿಸುವ ಒಂದು ಪ್ರಬಲ ಮಾಧ್ಯಮ ಇಂದಿನ ಅಗತ್ಯವಾಗಿದೆ ಎಂದರು.

ಪ್ರತಿಷ್ಠಾನದ ಕಾರ್ಯಾಧಯಕ್ಷ ರಾಮಚಂದ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯದರ್ಶಿ ಬಿ.ಡಿ. ನಾಯ್ಕ ವಂದಿಸಿದರು. ಮುಖಂಡರಾದ ಗಣೇಶ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯ ವೆಂಕಟೇಶ ನಾಯ್ಕ, ಸುಬ್ರಾಯ ನಾಯ್ಕ, ಎಂ.ಜಿ.ಎಂ. ಸಹಕಾರಿ ಸಂಘದ ಅಧ್ಯಕ್ಷ ಈರಪ್ಪ ಗರಡಿಕರ್, ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮನಮೋಹನ ನಾಯ್ಕ, ಕುಮಟಾದ ಎಚ್.ಆರ್. ನಾಯ್ಕ, ಪ್ರಮೋದ ನಾಯ್ಕ, ಮಂಜುನಾಥ ನಾಯ್ಕ, ರಾಘವೇಂದ್ರ ನಾಯ್ಕ ಇದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Share this article