ಪಟ್ಟಣದ ಪ್ರಸಿದ್ಧ ಹಾಗೂ ಭಾವೈಕ್ಯತೆಯ ಕೇಂದ್ರವಾದ ಹಜರತ್ ಸಯ್ಯದ್ ಸುಲೇಮಾನ್ ಬಾದಷಾ ಖಾದ್ರಿ (ದೂದ ನಾನಾ) ದರ್ಗಾಕ್ಕೆ ಸಚಿವ ಯು.ಟಿ. ಖಾದರ್ ಭಾನುವಾರ ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಪಟ್ಟಣದ ಪ್ರಸಿದ್ಧ ಹಾಗೂ ಭಾವೈಕ್ಯತೆಯ ಕೇಂದ್ರವಾದ ಹಜರತ್ ಸಯ್ಯದ್ ಸುಲೇಮಾನ್ ಬಾದಷಾ ಖಾದ್ರಿ (ದೂದ ನಾನಾ) ದರ್ಗಾಕ್ಕೆ ಸಚಿವ ಯು.ಟಿ. ಖಾದರ್ ಭಾನುವಾರ ಭೇಟಿ ನೀಡಿದರು. ಈ ವೇಳೆ ಸಚಿವರನ್ನು ದರ್ಗಾ ಕಮೀಟಿ ಹಾಗೂ ಅಂಜುಮನ್ ಕಮಿಟಿಯಿಂದ ಸ್ವಾಗತಿಸಲಾಯಿತು. ನಂತರ ದರ್ಗಾಕ್ಕೆ ತೆರಳಿ ವಿಶೇಷ ಪಾರ್ಥನೆ ಸಲ್ಲಿಸಿದರು.
ನಂತರ ಶಾದಿಮಹಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರನ್ನು ಸಮಿತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಭವ್ಯವಾಗಿ ಸನ್ಮಾನಿಸಲಾಯಿತು.
ಈ ವೇಳೆ ಯು.ಟಿ. ಖಾದರ್ ಮಾತನಾಡಿ, ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ದೂದನಾನಾ ದರ್ಗಾವು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೆ, ಎಲ್ಲಾ ಧರ್ಮಗಳ ಜನರನ್ನು ಒಗ್ಗೂಡಿಸುವ ಭಾವೈಕ್ಯತೆಯ ಕೇಂದ್ರವಾಗಿದೆ. ಭಾವೈಕ್ಯತೆಗೆ ಮತ್ತೊಂದು ಹೆಸರು ಹೇಳಬಹುದಾದರೆ ಅದು ಲಕ್ಷ್ಮೇಶ್ವರದ ದೂದಪೀರಾ ದರ್ಗಾ. ನಮ್ಮ ದೇಶದ ಸಂಸ್ಕೃತಿಯೇ ವೈವಿಧ್ಯತೆಯಲ್ಲಿ ಏಕತೆ ಕಾಣಬಹುದಾಗಿದೆ. ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತೆಯಿಂದ ಬಾಳಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಭಾರತದಂತಹ ಭಾತೃತ್ವ ಸಂದೇಶ ಸಾರುವ ದೇಶ ವಿಶ್ವದ ಯಾವುದೇ ಮೂಲೆಗೆ ಹೋದರೂ ಸಿಗುವುದಿಲ್ಲ, ಸಂಸ್ಕೃತಿ, ಪರಂಪರೆಯ ಭವ್ಯ ನಾಡು ಇದಾಗಿದೆ ಎಂದರು.
ಊಟ, ಬಟ್ಟೆ ಕಡಿಮೆಯಾದರೂ ಚಿಂತೆ ಇಲ್ಲ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಮುಂದಾಗಬೇಕು. ಒಳ್ಳೆಯ ಶಿಕ್ಷಣದಿಂದ ದೇಶದ ಯಾವುದೇ ಸ್ಥಾನವನ್ನು ಅಲಂಕರಿಸಬಹುದು. ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸಾರ್ವಜನಿಕ ಸೌಲಭ್ಯ ಉತ್ತಮಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ದರ್ಗಾಕಮಿಟಿ ಅಧ್ಯಕ್ಷ ಸುಲೇಮಾನ ಕಣಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಗ್ಗಾಂವಿ ಶಾಸಕ ಯಾಸೀರಅಹ್ಮದ್‌ಖಾನ ಪಠಾಣ, ಕೆಪಿಸಿಸಿ ಕಾರ್ಯದರ್ಶಿ ಟಿ.ಈಶ್ವರ, ಮಾಜಿ ಶಾಸಕ ರಾಮಣ್ಣ ಲಮಾಣಿ, ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ ಹಾಗೂ ಜಿ.ಆರ್. ಕೊಪ್ಪದ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀಲ ಸೂರಣಗಿ, ಪೀರ್ದೋಶ ಆಡೂರ, ಸಿಕಂದರ ಕಣಕೆ, ಮುಸ್ತಾಕ್‌ಅಹ್ಮದ್ ಶಿರಹಟ್ಟಿ, ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ಫಕ್ಕೀರೇಶ ಮ್ಯಾಟಣ್ಣವರ, ರಾಜಣ್ಣ ಕುಂಬಿ, ಪದ್ಮರಾಜ ಪಾಟೀಲ, ವಿ.ಜಿ. ಪಡಿಗೇರಿ, ಎಸ್.ಕೆ. ಹವಾಲ್ದಾರ, ಎಸ್.ಪಿ. ಬಳಿಗಾರ, ಬಸಣ್ಣ ಓದುನವರ, ವಿರುಪಾಕ್ಷಪ್ಪ ನಂದೆಣ್ಣವರ, ಎಂ.ಎಂ. ಗದಗ, ಜಯಕ್ಕ ಕಳ್ಳಿ ಸೇರಿದಂತೆ ಅನೇಕರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.