ಹೊನ್ನಾವರ: ಈ ಲೋಕಕ್ಕೆ ಬಂದ ಮೇಲೆ ಇಲ್ಲಿಂದ ಹೋಗುವ ತನಕವೂ ಇಡಿಯ ಬದುಕು ವರ್ತಮಾನವೇ ಆಗಿರುತ್ತದೆ. ಈ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದು ನಮ್ಮ ಗುರಿಯಾಗಬೇಕು. ಭಾಗೀರತಿ ಕೃತಿ ಅಂಥ ಒಬ್ಬ ಸಾರ್ಥಕ ಗೃಹಿಣಿಯ ಚಿತ್ರಣವನ್ನು ಕಟ್ಟಿಕೊಟ್ಟಿದೆ ಎಂದು ಅಂಕಣಕಾರ ಮತ್ತು ಅರ್ಥಧಾರಿ ನಾರಾಯಣ ಯಾಜಿ, ಸಾಲೆಬೈಲು ನುಡಿದರು.
ನಿವೃತ್ತ ಪ್ರಾಧ್ಯಾಪಕ, ಅರ್ಥಧಾರಿ ಎನ್.ಎಂ. ಹೆಗಡೆ ಹಿಂಡ್ಮನೆ ಬಿಡುಗಡೆಯಾದ ಇನ್ನೊಂದು ಕೃತಿ ಯಕ್ಷರಂಗದ ದಕ್ಷ ಪರಿಚಯಿಸಿದರು. ಶ್ರೀಪಾದ ಹೆಗಡೆ ಅವರ ಬದುಕಿನ ಕುರಿತು ಬರೆದ ಜೀವನಯಾನವು ಉತ್ತಮ ಶೈಲಿಯಲ್ಲಿ ಮೂಡಿ ಬಂದಿದೆ. ಜತೆಗೆ ಹಲವರ ಲೇಖನದಲ್ಲಿ ಅವರ ಕಲಾ ಬದುಕು ಅನಾವರಣಗೊಂಡಿದೆ ಎಂದರು.
ಯಕ್ಷಗಾನ ಕಲಾವಿದ ಗಣೇಶ್ ನಾಯ್ಕ, ಮುಗ್ವಾ ಮಾತನಾಡಿ, ಶ್ರೀಪಾದ ಹೆಗಡೆ ಅವರು ಯಕ್ಷರಂಗದ ಸತ್ವ, ತತ್ವಗಳನ್ನು ಉಳಿಸಿದ ಯಕ್ಷಶಿಲ್ಪ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಹಾಗೂ ಅರ್ಥಧಾರಿ ಡಾ. ಜಿ.ಎಲ್. ಹೆಗಡೆ ಮಾತನಾಡಿ, ಬುದುಕಿನಲ್ಲಿ ಆದರ್ಶಗಳನ್ನು ರೂಢಿಸಿಕೊಂಡ ಕಲಾವಿದ ಶ್ರೀಪಾದ ಹೆಗಡೆ ಅವರ ಹಲವು ಪಾತ್ರ ಹಾಗೂ ಜೀವನದ ಘಟನೆಗಳನ್ನು ಕೃತಿಯ ಮೂಲಕ ಅಮರವಾಗಿರಿಸಿದ್ದಾರೆ. ನಾವು ದಾಖಲೆಗಳಲ್ಲಿ ಹಿಂದುಳಿದಿದ್ದೇವೆ. ಇಂತಹ ಹಲವು ಕಲಾವಿದರ ಬದುಕನ್ನು ದಾಖಲಿಸಿ ಮುಂದಿನ ಪೀಳಿಗೆಗೆ ನೀಡುವ ಕೆಲಸ ಆಗಬೇಕಿದೆ ಎಂದರು.