ನಮ್ಮ ಓದು ಜೀವನವನ್ನು ಪರಿಪೂರ್ಣಗೊಳಿಸುವಂತಾಗಲಿ: ಎಂ.ಎ. ರಡ್ಡೇರ

KannadaprabhaNewsNetwork |  
Published : Jun 24, 2024, 01:39 AM IST
ಮುಂಡರಗಿ ಪಟ್ಟಣದ ಕೆ.ಆರ್.ಬೆಲ್ಲದ ಮಹಾ ವಿದ್ಯಾಲಯದಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ.ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸತತ ಪರಿಶ್ರಮ ಮತ್ತು ಓದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಶ್ಯವಾಗಿ ಬೇಕು. ನಾವು ದಿನನಿತ್ಯ ದಿನಪತ್ರಿಕೆಗಳನ್ನು ಚಿತ್ತ ಕೊಟ್ಟು ಓದಿದರೆ ಐಎಎಸ್, ಐಪಿಎಸ್, ಐಎಫ್ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಲಭವಾಗಿ ತೇರ್ಗಡೆಯಾಗಬಹುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.

ಮುಂಡರಗಿ: ನಮ್ಮ ಓದು ನಮ್ಮ ಜೀವನವನ್ನು ಪರಿಪೂರ್ಣಗೊಳಿಸುವಂತಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.

ಪಟ್ಟಣದ ಶ್ರೀ ಜ.ಅ.ವಿ. ಸಮಿತಿಯ ಶತಮಾನೋತ್ಸವ ಸಂಭ್ರಮದ ಅಡಿಯಲ್ಲಿ ಶ್ರೀ ಜ.ಅ.ವಿ. ಸಮಿತಿ ಮತ್ತು ಕೆ.ಆರ್. ಬೆಲ್ಲದ ಕಾಲೇಜು ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ ಸಂಯುಕ್ತವಾಗಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಸಿದ್ಧತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸತತ ಪರಿಶ್ರಮ ಮತ್ತು ಓದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಶ್ಯವಾಗಿ ಬೇಕು. ನಾವು ದಿನನಿತ್ಯ ದಿನಪತ್ರಿಕೆಗಳನ್ನು ಚಿತ್ತ ಕೊಟ್ಟು ಓದಿದರೆ ಐಎಎಸ್, ಐಪಿಎಸ್, ಐಎಫ್ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಲಭವಾಗಿ ತೇರ್ಗಡೆಯಾಗಬಹುದು ಎಂದು ಹೇಳಿದರು.

ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಅನೇಕ ಹಳ್ಳಿಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಮಕ್ಕಳನ್ನು ಮುಖ್ಯವಾಹಿನಿಗೆ ತರುತ್ತಿರುವುದು ಶ್ಲಾಘನೀಯ ಎಂದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಗಳಿಸಿದ ಸೌಭಾಗ್ಯಾ ಬೀಳಗಿಮಠ ಅವರು ಮಕ್ಕಳೊಂದಿಗೆ ಪರೀಕ್ಷೆ ತಯಾರಿ ಕುರಿತು ಅನುಭವ ಹಂಚಿಕೊಂಡರು. ಪ್ರತಿವರ್ಷ ನಿಯಮಿತವಾಗಿ ಇಂತಹ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದು, ಅದರಲ್ಲಿ ಮೆರಿಟ್‌ಗೆ ಬೆಲೆ ಇದೆ. ಪುಸ್ತಕಗಳನ್ನು ಆಯ್ಕೆ ಮಾಡಿ ಓದುತ್ತಾ ಹೋಗುವುದರೊಂದಿಗೆ, ಅಲ್ಲಿಯ ಸಂಗತಿಗಳ ಕುರಿತು ವಿಶ್ಲೇಷಣ ಮಾಡುವ ಸಾಮರ್ಥ್ಯ ಹೊಂದಬೇಕು. ಪರೀಕ್ಷೆಗೆ ನಿಗದಿಪಡಿಸಿದ್ದ ಪಠ್ಯಕ್ರಮವನ್ನು ತಿಳಿದುಕೊಂಡು, ಅದರಂತೆ ಅಭ್ಯಾಸ ಪ್ರಾರಂಭಿಸಿದರೆ ಯಾವ ಸ್ಪರ್ಧಾತ್ಮಕ ಪರೀಕ್ಷೆಯೂ ಕಠಿಣ ಎನ್ನಿಸುವುದಿಲ್ಲ. ಇಂಗ್ಲಿಷ್ ವಿಷಯದ ಪರಿಪೂರ್ಣ ಜ್ಞಾನ ಅವಶ್ಯಕವಾಗಿ ಬೇಕು ಎಂದ ಅವರು, ವಿದ್ಯಾರ್ಥಿಗಳು ಕೇಳಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.

ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮುಂಡರಗಿ ನಾಡಿನಲ್ಲಿ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಲಾಗಿದೆ. ಇಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದರಿಂದಾಗಿ ಮುಂಡರಗಿ, ಕೊಪ್ಪಳ, ಹೂವಿನಹಡಗಲಿ, ಶಿರಹಟ್ಟಿ ಮುಂತಾದ ತಾಲೂಕಿನ ಎಲ್ಲ ಬಡಮಕ್ಕಳಿಗೆ ಅನುಕೂಲವಾಯಿತು ಎಂದರು.

ಮಾರ್ಚ್‌, ಏಪ್ರೀಲ್‌ನಲ್ಲಿ ನಡೆದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕ ಗಳಿಸಿದ 30 ವಿದ್ಯಾರ್ಥಿಗಳಿಗೆ ತಲಾ ₹1 ಸಾವಿರ ಪ್ರೋತ್ಸಾಹಧನ ನೀಡಿ, ಶ್ರೀಗಳು ಸತ್ಕರಿಸಿದರು.

ಮಠದ ಉತ್ತರಾಧಿಕಾರಿ ಜ.ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಿಇಒ ಎಚ್.ಎಂ. ಪಡ್ನೇಶಿ, ಆರ್.ಎಲ್. ಪೊಲೀಸ್‌ಪಾಟೀಲ, ಎಂ.ಎಸ್. ಶಿವಶೆಟ್ಟಿ, ಡಾ. ಡಿ.ಸಿ. ಮಠ ಉಪಸ್ಥಿತರಿದ್ದರು. ಡಾ. ಬಿ.ಜಿ. ಜವಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂತೋಷ ಹಿರೇಮಠ ಮತ್ತು ಡಾ. ಆರ್.ಎಚ್. ಜಂಗಣವಾರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಸಚಿನ್ ಉಪ್ಪಾರ ವಂದಿಸಿದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?