ಶಿವಮೊಗ್ಗ: ಪಾಕಿಸ್ತಾನ ಸರ್ಕಾರ ಉಗ್ರರು ಹಾಗೂ ಸಂಘಟನೆಯನ್ನು ಬೆಳೆಸುತ್ತಾ ಇದೆ ಎಂಬುದಕ್ಕೆ ಪಾಕಿಸ್ತಾನದ ಅಧಿಕಾರಿಯ ಹೇಳಿಕೆಯೇ ಸಾಕ್ಷಿಯಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಸರ್ಕಾರ ಉಗ್ರರನ್ನು ಪೋಷಿಸಿಕೊಂಡು ಬರುತ್ತಿದೆ ಎಂಬುದನ್ನು ಅನೇಕ ವರ್ಷದಿಂದ ರಾಷ್ಟ್ರಭಕ್ತ ಸಂಘಟನೆಗಳು ಹೇಳುತ್ತಲೇ ಬಂದಿವೆ. ಆದರೆ, ವಿಶ್ವ ಇದನ್ನು ನಂಬುತ್ತಿರಲಿಲ್ಲ. ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ಅಧಿಕಾರಿಯೇ ಸ್ಪಷ್ಟವಾಗಿ ಹೇಳಿದ್ದಾರೆ. 30 ವರ್ಷದಿಂದ ಉಗ್ರರನ್ನು ಬೆಳೆಸಿ, ತಪ್ಪು ಮಾಡಿದ್ದೇವೆ ಎಂದಿದ್ದಾರೆ. ಉಗ್ರರನ್ನು ಬೆಳೆಸಿದ್ದೇ ಅವರಿಗೆ ಇಂದು ಮುಳ್ಳಾಗಿದೆ ಎಂದು ಕುಟುಕಿದರು.ಇಂದು ಹಿಂದೂಗಳನ್ನು ಗುರುತಿಸಿ, ಕೊಲ್ಲಲಾಗಿದೆ. ಉಗ್ರರು ಮನುಷ್ಯರಲ್ಲ, ರಾಕ್ಷಸರ ಕೃತ್ಯ ಮಾಡಿದ್ದಾರೆ. ಭಯೋತ್ಪಾದನೆಗೆ ಪ್ರೋತ್ಸಾಹಿಸಿ, ಪಾಕಿಸ್ತಾನದ ಜನ ಅನುಭವಿಸುವಂತಾಗಿದೆ. ಇಂದು ಉಗ್ರರನ್ನು ಹುಡುಕಿ ಹುಡುಕಿ, ನಿರ್ನಾಮ ಮಾಡುವ ಕೆಲಸ ಆರಂಭವಾಗಿದೆ. ಇಡೀ ಪ್ರಪಂಚವೇ ಇಂದು ಭಾರತದ ಜೊತೆ ನಿಂತಿದೆ ಎಂದು ಹೇಳಿದರು.ಪಾಕಿಸ್ತಾನದವರು ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ಪೂರ್ತಿ ತಯಾರಿಲ್ಲ. ಪಾಕಿಸ್ತಾನ ಹಾಗೂ ಅಲ್ಲಿನ ಜನ ಉಳಿಬೇಕಾದರೆ ಆಗಿರೋ ತಪ್ಪನ್ನು ಒಪ್ಪಿಕೊಂಡು ಭಾರತಕ್ಕೆ ಸರೆಂಡರ್ ಆಗಬೇಕು. ಇಲ್ಲದಿದ್ದರೆ ವಿಶ್ವದ ಭೂಪಟದಲ್ಲೇ ಪಾಕಿಸ್ತಾನವೇ ಉಳಿಯಲ್ಲ ಎಂದು ಗುಡಗಿದರು.ಕೇಂದ್ರಕ್ಕೆ ವಿಪಕ್ಷಗಳ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಜೀವನದಲ್ಲಿ ಮೊದಲ ಬಾರಿ ಕಾಂಗ್ರೆಸ್ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಘಟನೆಯನ್ನು ಖಂಡಿಸಿ, ಇದು ರಾಜಕಾರಣ ಮಾಡುವ ಸಮಯ ಅಲ್ಲ. ಕೇಂದ್ರ ಸರ್ಕಾರದ ಜೊತೆಗಿರುತ್ತೇವೆ ಎಂದಿದ್ದಾರೆ. ಆದರೇ, ಸ್ಥಳೀಯವಾಗಿ ಅಲ್ಲೊಬ್ಬರು, ಇಲ್ಲೋಬ್ಬರು ಸಣ್ಣತನ ತೋರಿಸುತ್ತಿದ್ದಾರೆ. ಮೋದಿ ರಾಜೀನಾಮೆ ಕೇಳುತ್ತಿದ್ದಾರೆ, ಭದ್ರತಾ ವೈಫಲ್ಯ ಅಂತಾರೇ. ಇಂದಿರಾ ಗಾಂಧಿ ಸರ್ಕಾರದಲ್ಲಿ ಇಂಟೆಲಿಜೆನ್ಸ್ ವೈಫಲ್ಯ ಅಗಿಲ್ವಾ, ಕೊಲೆ ಆಗಿಲ್ವಾ, ರಾಜೀವ್ ಗಾಂಧಿ ಕೂಡ ಕೊಲೆಯಾಯ್ತು. ಯಾರು ಕೂಡ ಸಾಯಲಿ ಅಂತಾ ಇರಲ್ಲ ಎಂದು ಹೇಳಿದರು.ಸಚಿವ ಸಂತೋಷ್ ಲಾಡ್ ಅವರು ಕಾಶ್ಮೀರಕ್ಕೆ ಹೋಗಿಬಂದ ಬಳಿಕ ಅವರ ಕೆಲಸ ನೋಡಿ ನಾನೇ ಅಭಿನಂದನೆ ಸಲ್ಲಿಸಿದ್ದೆ. ಒಳ್ಳೆಯ ಕೆಲಸ ಮಾಡಿದ್ದೀಯಾ ಎಂದು ಹೇಳಿದ್ದೆ. ಆದರೆ, ನಿನ್ನೆ ವಾಪಸ್ ಬಂದು ರಾಜಕೀಯ ಶುರು ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮೋದಿ ರಾಜೀನಾಮೆ ಕೇಳಿದ್ದಾರೆ. ಮೋದಿ ರಾಜೀನಾಮೆ ಕೇಳೋಕೆ ನೀನು ಯಾವನ್ನಯ್ಯ ಎಂದು ಪ್ರಶ್ನಿಸಿದರು.ನಾನು ಸಂತೋಷ್ ಲಾಡ್ ದೊಡ್ಡ ಮನುಷ್ಯ ಅಂತಾ ಅಭಿನಂದನೆ ಸಲ್ಲಿಸಿದ್ದೆ. ತಕ್ಷಣವೇ ಲಾಡ್ ಕ್ಷಮೆ ಕೇಳಬೇಕು. ಒಳ್ಳೆ ರಾಜಕಾರಣಿ ತರ ಕೆಲಸ ಮಾಡಲಿ. ಭದ್ರತಾ ವೈಫಲ್ಯ ಎಂದು ಹೇಳಬೇಡಿ. ಪಹಲ್ಗಾಮ್ ಘಟನೆಯಿಂದ ಇಡೀ ದೇಶ ಇಂದು ಒಟ್ಟಾಗಿದೆ. ಹಿಂದೂ ಸಮಾಜ ಇಷ್ಟು ಒಟ್ಟಾಗಿದ್ದನ್ನು ನಾನು ನೋಡಿಯೇ ಇರಲಿಲ್ಲ. ಭದ್ರತಾ ವೈಫಲ್ಯ ಆಗಿದ್ದರೆ ಅವರು ತಿದ್ದುಕೊಳ್ಳುತ್ತಾರೆ. ಇಂತಹ ವೇಳೆ ಸಣ್ಣತನದ ಹೇಳಿಕೆ ಕೊಡಬೇಡಿ ಎಂದು ಹೇಳಿದರು.