ಕವಿತೆಗಳು ಸಾಮರಸ್ಯ ಕಟ್ಟುವ ಕೆಲಸ ಮಾಡಲಿ: ಎಲ್.ಎನ್. ಮುಕುಂದರಾಜ್

KannadaprabhaNewsNetwork | Published : Feb 8, 2025 12:35 AM

ಸಾರಾಂಶ

ಕಾವ್ಯಗಳ ಒಟ್ಟು ಮೌಲ್ಯ ಕಾವ್ಯದ ಆಶಯವೂ ಆಗಿರಬೇಕು. ಈ ನಿಟ್ಟಿನಲ್ಲಿ ಸದ್ಯ ಕಾವ್ಯ ಜಗತ್ತು ವೈಚಾರಿಕತೆಗೆ ತೆರೆದುಕೊಳ್ಳುವ ಮೂಲಕ ಸಾಮಾಜಿಕ ವೈರುಧ್ಯಗಳನ್ನು ಮೀರಿ ಸಾಮರಸ್ಯದ ನೆಲೆಗಳನ್ನು ಬಿತ್ತುವ ಕೆಲಸ ಮಾಡಬೇಕಿದೆ.

ಸಿದ್ದಾಪುರ: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿನೂತನ ಯೋಜನೆಯಾದ ಜಿಲ್ಲೆಯ ಚಕೋರ ಸಾಹಿತ್ಯ ವಿಚಾರ ವೇದಿಕೆ ಉದ್ಘಾಟನಾ ಸಮಾರಂಭ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಗೂಗಲ್ ಮೀಟ್ ಆನ್‌ಲೈನ್ ವೇದಿಕೆಯಲ್ಲಿ ಜರುಗಿತು.ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೊಸ ನಾಮಾಂಕಿತರ ನಿರಂಕುಶ ಗೀತ ಎಂಬ ಕವನವನ್ನು ವಾಚನ ಮಾಡುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾವ್ಯಗಳ ಒಟ್ಟು ಮೌಲ್ಯ ಕಾವ್ಯದ ಆಶಯವೂ ಆಗಿರಬೇಕು. ಈ ನಿಟ್ಟಿನಲ್ಲಿ ಸದ್ಯ ಕಾವ್ಯ ಜಗತ್ತು ವೈಚಾರಿಕತೆಗೆ ತೆರೆದುಕೊಳ್ಳುವ ಮೂಲಕ ಸಾಮಾಜಿಕ ವೈರುಧ್ಯಗಳನ್ನು ಮೀರಿ ಸಾಮರಸ್ಯದ ನೆಲೆಗಳನ್ನು ಬಿತ್ತುವ ಕೆಲಸ ಮಾಡಬೇಕಿದೆ ಎಂದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉತ್ತರ ಕನ್ನಡದ ಸದಸ್ಯ ಸಂಚಾಲಕರಾದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಚೀನ ಕನ್ನಡ ಕಾವ್ಯದ ಸಾಮರಸ್ಯದ ನೆಲೆಗಳನ್ನು ಅಧುನಿಕೋತ್ತರ ಕಾಲಘಟ್ಟದಲ್ಲಿಯೂ ಮರುಚಿಂತನೆಗೆ ಒಳಪಡಿಸಿ ತಲಸ್ಪರ್ಶಿಯಾಗಿ ಗ್ರಹಿಸಿಕೊಳ್ಳುವ ಅಗತ್ಯವಿದೆ ಎಂದರು.ಕಾವ್ಯಾನುಸಂಧಾನ ವಿಷಯ ಕುರಿತಾಗಿ ಶಿಕ್ಷಕ, ವಿಮರ್ಶಕ ಕೆ.ಬಿ. ವೀರಲಿಂಗನಗೌಡ್ರ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಹಾಗೂ ಕೂಲಿ ಕಾರ್ಮಿಕರ ಬದುಕು ಚಿಂತಾಜನಕವಾಗಿದ್ದು, ಸಾಹಿತಿಗಳಾದವರು ತಮ್ಮ ಸಶಕ್ತ ಕಾವ್ಯಗಳ ಮೂಲಕ ಆಳುವ ವರ್ಗವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದರು.ಕವಿ, ಅಂಕಣಕಾರ ಮಹದೇವ ಬಸರಕೋಡ ಅವರು, ಕಾವ್ಯವೆಂದರೆ ಏನು? ಅದು ಹೇಗಿರಬೇಕು? ಕವಿ ಮತ್ತು ಕವಿತತ್ವ ಕವಿತ್ವಗಳು ಹೇಗೆ ಅನುಸಂಧಾನಕ್ಕೆ ಒಳಗಾಗುತ್ತವೆ? ಎಂಬುದನ್ನು ಕವನ ವಾಚನಗಳ ಮುಖಾಂತರ ವಿವರಿಸಿದರು. ಜಿಲ್ಲೆಯ ಚಕೋರ ಸಂಚಾಲಕರಾದ ಕವಯಿತ್ರಿ ಶ್ರೀದೇವಿ ಕೆರೆಮನೆ ಸ್ವಾಗತಿಸಿದರು. ಕಾರ್ಯಕ್ರಮದ ತಾಂತ್ರಿಕ ನಿರ್ವಹಣೆ ಮತ್ತು ಸಂಯೋಜನೆಯನ್ನು ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕರಾದ ಡಾ. ವಿಜಯಲಕ್ಷ್ಮಿ ದಾನರಡ್ಡಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಡಾ. ಸಿದ್ದರಾಮ ಹೊನ್ಕಲ್, ಪ್ರೊ. ಜಾಜಿ ದೇವೇಂದ್ರಪ್ಪ, ರಂಗಮ್ಮ ಹೊದೆಕಲ್, ಲೀಲಾ ಕಲಕೋಟಿ, ಡಾ. ಕೆ.ಆರ್. ಸಿದ್ದಗಂಗಮ್ಮ, ಡಾ. ಸಿದ್ದೇಶ್ವರಿ, ಜ್ಯೋತಿ ಬದಾಮಿ, ಹಮೀದಾ ಬೇಗಂ ದೇಸಾಯಿ, ವಿಜಯಕುಮಾರ ಇಟಗಿ, ಗಂಗಾಧರ ಕೊಳಗಿ, ಪ್ರೇಮಾ ತಾಸೀಲದಾರ್, ನೀಲಕಂಠ ಮಲಕಣ್ಣನವರ, ಪುಷ್ಪಾ ಮುರಗೋಡ ಮುಂತಾದವರು ಪಾಲ್ಗೊಂಡಿದ್ದರು. ಇಂದಿನಿಂದ ಸಿದ್ದಾಪುರ ಉತ್ಸವ

ಸಿದ್ದಾಪುರ: ಪ್ರತಿವರ್ಷದಂತೆ ಈ ಬಾರಿಯೂ ಸಿದ್ದಾಪುರ ಉತ್ಸವ ಫೆ. ೮ ಹಾಗೂ ೯ರಂದು ಎರಡು ದಿನಗಳ ಕಾಲ ಪಟ್ಟಣದ ನೆಹರು ಮೈದಾನದಲ್ಲಿ ನಡೆಯಲಿದೆ ಎಂದು ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಉತ್ಸವದ ಅಂಗವಾಗಿ ಬೆಳಗ್ಗೆ ೯ ಗಂಟೆಯಿಂದ ಕ್ರೀಡಾಸ್ಪರ್ಧೆ ನಡೆಯಲಿದೆ. ರಸ್ತೆ ಓಟ, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಗೋಣಿಚೀಲ ಓಟದ ಸ್ಪರ್ಧೆ ಹಾಗೂ ಮಧ್ಯಾಹ್ನ ೩.೩೦ರಿಂದ ರಂಗೋಲಿ ಸ್ಪರ್ಧೆ ಜರುಗಲಿದೆ. ಸಂಜೆ ೬ರಿಂದ ೭.೩೦ರವರೆಗೆ ಸ್ಥಳೀಯ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ರಾತ್ರಿ ೭.೩೦ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಪೀಠಾಧೀಶರಾದ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಭೀಮಣ್ಣ ಟಿ. ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಹಾಗೂ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಭಾಗವಹಿಸಲಿದ್ದಾರೆ. ರಾತ್ರಿ ೯ರಿಂದ ಚಲನಚಿತ್ರ ಹಾಗೂ ಧಾರಾವಾಹಿ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ಇರಲಿದೆ.

ಫೆ. ೯ರಂದು ಸಂಜೆ ೬ರಿಂದ ಸ್ಥಳೀಯ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ರಾತ್ರಿ ೭.೩೦ರಿಂದ ಸಮಾರೋಪ ಸಮಾರಂಭ, ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಜರುಗಲಿದೆ. ಶಾಸಕ ಭೀಮಣ್ಣ ಟಿ. ನಾಯ್ಕ, ಮಾಜಿ ಸಚಿವ ಹರತಾಳು ಹಾಲಪ್ಪ ಭಾಗವಹಿಸಲಿದ್ದಾರೆ.ಸಿದ್ದಾಪುರ ಉತ್ಸವ ಸಮಿತಿ ಗೌರವಾಧ್ಯಕ್ಷ ಉಪೇಂದ್ರ ಪೈ, ಬಾಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಕೆ. ಶ್ರೀಧರ, ಶಿಕ್ಷಣ ಪ್ರಸಾರಕ ಸಮಿತಿ ಕಾರ್ಯಾಧ್ಯಕ್ಷ ಡಾ. ಶಶಿಭೂಷಣ ವಿನಾಯಕರಾವ್ ಹೆಗಡೆ ಭಾಗವಹಿಸಲಿದ್ದಾರೆ. ರಾತ್ರಿ ೯ರಿಂದ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ಇರಲಿದೆ ಎಂದು ಕೆ.ಜಿ. ನಾಯ್ಕ ತಿಳಿಸಿದ್ದಾರೆ.

Share this article