ಎಂ.ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿ
ಆನೆಗೊಂದಿಯ ಕಲೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ಇರುವ ಶ್ರೀಮಂತಿಕೆ ಕಾವ್ಯಕ್ಕೂ ಸಿಕ್ಕಾಗ ಮಾತ್ರ ಈ ನಾಡು ಸಮೃದ್ಧವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ ಹೇಳಿದರು.2024ರ ಆನೆಗೊಂದಿ ಉತ್ಸವ ಅಂಗವಾಗಿ ಆನೆಗೊಂದಿಯ ಗಗನ್ ಮಹಲ್ ಬಳಿಯ ಶಬರಿ ವೇದಿಕೆಯಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಎಲ್ಲರೂ ಕವಿಗಳಾಗಲೂ ಅಸಾಧ್ಯ. ಕಾವ್ಯದ ಬಗ್ಗೆ ನಿರಂತರ ಅಧ್ಯಯನ, ಜ್ಞಾನ ಸಂಪಾದಿಸುವವನು ಮಾತ್ರ ಕವಿಯಾಗುತ್ತಾನೆ. ಕಾವ್ಯ ರಚನೆ ಸುಮ್ಮನೆ ಬರುವುದಿಲ್ಲ. ಭಯಗ್ರಸ್ಥನಾಗಿಯೂ ಅಥವಾ ಜಾತಿಯ ಮೇಲಿನ ಅಭಿಮಾನ ಇರುವವರು ಕವಿಗಳಾಗಬಾರದು. ಕವಿಯಾದವ ನಿರ್ಭಿತಿಯಿಂದ ಇದ್ದುಕೊಂಡು ಸಾಮಾಜಿಕ ಪರಿವರ್ತನೆ ಹಾಗೂ ಸರ್ಕಾರದ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಕೆಲಸ ಕವಿತೆ ಬರೆಯುವ ಮೂಲಕ ಆದಾಗ ಮಾತ್ರ ಕವಿ ಮತ್ತು ಕಾವ್ಯಕ್ಕೆ ಒಂದು ಬೆಲೆ ಸಿಗಲಿದೆ ಎಂದರು.
ಯುವ ಸಾಹಿತಿ ಜಾಜಿ ದೇವೇಂದ್ರಪ್ಪ ಆಶಯ ನುಡಿಗಳನ್ನಾಡಿ, ಸಾಮಾಜಿಕ ಜಾಲತಾಣಗಳಿಂದ ಕಾವ್ಯಲೋಕ ಹದಗೆಟ್ಟು ಹೋಗಿದೆ. ಆನೆಗೊಂದಿಯಂತಹ ಸಾಂಸ್ಕೃತಿಕ ವೈಭವದ ನಾಡಲ್ಲಿ ಕಾವ್ಯ ರಚನೆಗೇನೂ ಕೊರತೆಯಿಲ್ಲ. ಈ ಭಾಗದ ಕವಿಗಳ ಬರಹಗಳು ನಿರಂತರ ಜ್ಯೋತಿಯಂತೆ ಬೆಳಗುತ್ತಿವೆ. ಮೊಗದಷ್ಟು ಕಾವ್ಯಕ್ಕೆ ರೂಪಕೊಟ್ಟು ಹೊಸ ಜಗತ್ತು ಕಟ್ಟುವಂತಾಗಬೇಕು. ಅಭಿವ್ಯಕ್ತಿ ಹಾಗೂ ಸೃಜನಶೀಲತೆ ಕವಿತೆಯಲ್ಲಿದ್ದಾಗ ಸಮಾಜ ಅಷ್ಟೇ ಅಲ್ಲ, ನಾಡು ಕಟ್ಟುವ ಶಕ್ತಿ ಅದಕ್ಕಿರುತ್ತದೆ. ಕವಿಗಳು ನಿರಾಂತಕದಿಂದ ಕವಿತೆ ರಚಿಸುವಂತೆ ಸಲಹೆ ನೀಡಿದರು.
ಕಾರಟಗಿ ತಾಲೂಕಿನ ಸಿದ್ದಾಪುರ, ಶ್ರೀರಾಮನಗರದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ತಾವು ರಚಿಸಿದ ಕವಿತೆ ವಾಚಿಸಿದರು. ಕನ್ನಡ ಅಭಿಮಾನ, ಆನೆಗೊಂದಿ ಉತ್ಸವ, ಶಾಲಾ ವಿದ್ಯಾರ್ಥಿಗಳ ಬಾಲ್ಯಾವಸ್ಥೆ ಕುರಿತಂತೆ ಕವಿತೆಗಳು ಮಕ್ಕಳಿಂದ ವಾಚನಗೊಂಡವು. ನೆರದಿದ್ದ ಸಾಹಿತ್ಯಾಸಕ್ತರು ತಮ್ಮ ಕರತಾಡನದ ಮೂಲಕ ಪ್ರೋತ್ಸಾಹಿಸಿದರು.