ಸಂಡೂರು: ಕವಿಯಾದವನು ತನ್ನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟಾಗ ಕಾವ್ಯವಾಗುತ್ತದೆ. ಇಂತಹ ಕಾವ್ಯ ಮಾನವೀಯತೆಯ ಸೆಲೆಯಾಗಬೇಕು ಮತ್ತು ಸಮಾಜಮುಖಿಯಾಗಿರಬೇಕು ಎಂದು ಧಾರವಾಡದ ಕವಯತ್ರಿ ಹೇಮಾ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಪ್ರತಿಯೊಬ್ಬ ಕವಿ ಭಾವ, ನಾದ, ಲಯದೊಂದಿಗೆ ಕಾವ್ಯವನ್ನು ರಚಿಸಿದಾಗ ಅದು ಚಿರಕಾಲ ಉಳಿಯುತ್ತದೆ. ಧ್ಯಾನಸ್ಥ ಸ್ಥಿತಿಯಲ್ಲಿ ಕವಿತೆ ಕಟ್ಟಿದರೆ ಅದು ಓದುಗರಿಗೆ ತಟ್ಟುತ್ತದೆ ಎಂದರು.
ಟ್ರಸ್ಟ್ ಅಧ್ಯಕ್ಷರು ಹಾಗೂ ಬರಹಗಾರ್ತಿ ಡಾ. ವಸುಂಧರಾ ಭೂಪತಿ ಮಾತನಾಡಿ, ಭೂಪತಿಯವರ ಆಶಯ ಮತ್ತು ಆದರ್ಶಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಪುಸ್ತಕ ಪ್ರಕಟಣೆ, ವಿಚಾರಗೋಷ್ಠಿಗಳು, ಕವಿಗೋಷ್ಠಿಗಳ ಮೂಲಕ ಟ್ರಸ್ಟ್ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಭೂಪತಿಯವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುವ ಆಲೋಚನೆ ಇದೆ ಎಂದರು.ಸಹಾಯಕ ಪ್ರಾಧ್ಯಾಪಕ ಡಾ. ತಿಪ್ಪೇರುದ್ರ ಸಂಡೂರು ಮಾತನಾಡಿ, ಅನುಭವ ಮತ್ತು ಅಧ್ಯಯನದ ಸಮನ್ವಯತೆಯೊಂದಿಗೆ ಉತ್ತಮ ಕವಿತೆಗಳು ಹುಟ್ಟುತ್ತವೆ. ನೆಲದ ಸೊಗಡಿನೊಂದಿಗೆ ಜ್ಞಾನದ ಬೆಳಕು ಸೇರಿಕೊಂಡಾಗ ಕಾವ್ಯ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಚಲಿತ ತಲ್ಲಣಗಳನ್ನು, ನೆಲದ ಅಸ್ಮಿತೆಯನ್ನು ತಿಳಿಸುವ ಕವಿತೆಗಳನ್ನು ಬರೆಯಬೇಕೆಂದರು.
ಕವಿಗೋಷ್ಠಿಯಲ್ಲಿ ಇಪ್ಪತ್ತು ಕವಿಗಳು ವೈವಿಧ್ಯಮಯ ವಸ್ತು ವಿಷಯಗಳ ಕುರಿತು ಕವಿತೆಗಳನ್ನು ವಾಚಿಸಿದರು. ಅಭಿಮನ್ಯು ಭೂಪತಿ ಪ್ರಾರ್ಥಿಸಿದರು, ಕವಿ ಅಬ್ದುಲ್ ಹೈ ನಿರೂಪಿಸಿದರು. ಈ ಸಂದರ್ಭದಲ್ಲಿ ಆರ್.ಬಿ. ನಾಯಕ್, ಯು. ಪಂಪಾಪತಿ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಕಾವ್ಯಾಸಕ್ತರು ಉಪಸ್ಥಿತರಿದ್ದರು.