ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೆಸರು ಪ್ರಸ್ತಾಪವಾಗಿದ್ದು, ಅವರು ತಕ್ಷಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕರೂ ಆದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಹೆಸರಿಲ್ಪಟ್ಟ ಆರೋಪಿಗಳ ಜೊತೆ ತಮಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಈ ಹಣಕಾಸು ವಹಿವಾಟು ಪ್ರಹ್ಲಾದ್ ಜೋಷಿಯವರ ಕಚೇರಿಯಲ್ಲಿ ಹೇಗೆ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದರು.
ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಸುನೀತಾ ಚೌವ್ಹಾಣ್ ಎಂಬುವವರು ದೂರು ದಾಖಲಿಸಿದ್ದು,ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಜೋಷಿಯವರ ಸಹೋದರ ಗೋಪಾಲ ಜೋಷಿಯವರು ಟಿಕೆಟ್ ಕೊಡಿಸಲು 5 ಕೋಟಿ ರು. ಬೇಡಿಕೆ ಇಟ್ಟಿದ್ದರು. ಅದರಂತೆ ₹25 ಲಕ್ಷ ಮುಂಗಡ ಹಣ ಪಡೆದಿದ್ದರು. ಆದರೆ ಬಳಿಕ ಟಿಕೆಟ್ ಕೊಡಿಸಲಿಲ್ಲ, ಕೊಟ್ಟ ಹಣವನ್ನು ಕೂಡ ವಾಪಸ್ಸು ಮಾಡದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೆಲ್ಲವುದರ ಮಾತುಕತೆ ಜೋಷಿ ಅವರ ಕಚೇರಿಯಲ್ಲಿಯೇ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ಆಯನೂರು ಮಂಜುನಾಥ್ ವಿವರಿಸಿದರು.
ಬಿಜೆಪಿಯಲ್ಲಿ ಒಂದು ಶಿಷ್ಟಾಚಾರವಿದೆ. ಈ ತರಹದ ಹಣವನ್ನು ಚೆಕ್ ಮೂಲಕ ಇಲ್ಲವೇ ನಗದಾಗಿ ಪಡೆಯುವ ಅಭ್ಯಾಸವಿದೆ. ಅದೇ ರೀತಿ ಇಲ್ಲೂ ನೇರವಾಗಿ ನಗದು ಪಡೆಯಲಾಗಿದೆ. ಇಷ್ಟೇಲ್ಲಾ ನಡೆದರೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು, ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ ಹಣಕ್ಕಾಗಿ ಟಿಕೆಟ್ ಮಾರಿಕೊಳ್ಳುವ ಸಂಸ್ಕೃತಿ ಹೊಸದಲ್ಲ. ಈ ಹಿಂದೆ ಕುಂದಾಪುರದಲ್ಲೂ ಇಂತಹದೊಂದು ಪ್ರಕರಣ ಸುದ್ದಿ ಆಗಿತ್ತು. ಇನ್ನಷ್ಟು ಪ್ರಕರಣಗಳು ಅವರದೇ ಪಕ್ಷದ ಮುಖಂಡರೇ ಬಹಿರಂಗ ಮಾಡಿದರು. ಮೊನ್ನೆಯಷ್ಟೇ ಅವರದೇ ಪಕ್ಷದ ಮುಖಂಡರಾದ ಬಸನಗೌಡ ಯತ್ನಾಳ್, ತಮ್ಮಪಕ್ಷದ ನಾಯಕರೊಬ್ಬರು ಒಂದು ಸಾವಿರ ಕೋಟಿ ರು.ಇಟ್ಟುಕೊಂಡು ಮುಖ್ಯ ಮಂತ್ರಿಯಾಗಲು ಕಾಯುತ್ತಿದ್ದಾರೆಂದು ಹೇಳಿದ್ದರು. ಇದನ್ನು ಬಿಜೆಪಿಯ ಯಾರು ಕೂಡ ಅಲ್ಲಗಳೆದಿಲ್ಲ. ಅದರರ್ಥವೇನು? ಎಂದು ಪ್ರಶ್ನಿಸಿದರು.ಜೋಷಿಯವರ ಸಹೋದರ ಗೋಪಾಲ ಜೋಷಿ ಟಿಕೆಟ್ ಕೊಡಿಸುವ ವಿಚಾರದಲ್ಲಿ ಕೇಂದ್ರ ಗೃಹ ಸಚಿವರ ಹೆಸರು ಪ್ರಸ್ತಾಪ ವಾಗಿದೆ. ಹಾಗೆಯೇ ಸಚಿವರ ಆಪ್ತ ಕಾರ್ಯದರ್ಶಿ ಹೆಸರು ಪ್ರಸ್ತಾಪಕ್ಕೆ ಬಂದಿದೆ. ಹಾಗಾಗಿ ಜೋಷಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಅವರು, ಹಣದ ಯಾವುದೇ ವಹಿವಾಟು ನಡೆಯದ ಮುಡಾ ಪ್ರಕರಣದಲ್ಲಿ ವಿನಾಕಾರಣ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುವ ಜಿಲ್ಲೆಯ ಸಂಸದರು ಕೂಡ ಈಗ ಜೋಷಿಯವರ ರಾಜೀನಾಮೆ ಕೇಳಲಿ ಎಂದು ಕಾಲೆಳೆದರು.
ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಮುನಿರತ್ನ ಪ್ರಕರಣದಲ್ಲಿ ಬಿಜೆಪಿಯವರ ಧ್ವನಿಯೇ ಇಲ್ಲ. ಹನಿಟ್ರ್ಯಾಪ್ ಮಾಡುವ ಒಬ್ಬ ರಾಜಕಾರಣಿಯ ಬಗ್ಗೆ ಇವರ ಮೌನವೇಕೆ ಎನ್ನುವುದನ್ನು ತಿಳಿಸಲಿ, ಅವರದೇ ಪಕ್ಷದ ಯತ್ನಾಳ್ ಆರೋಪಿಸುವ ವಿಚಾರದಲ್ಲಿ ಯಾಕೆ ಇಡಿ ಬರೋದಿಲ್ಲ ಎಂದು ಪ್ರಶ್ನಿದರು.ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಬಂದರೆ, ದುಡ್ಡು ದೋಚುವುದಕ್ಕಾಗಿಯೇ ಬಂದಿದ್ದಾರೆಂದು ಸಿ.ಟಿ.ರವಿ ಟೀಕಿಸುತ್ತಾರೆ. ಸಿ.ಟಿ.ರವಿ ಕೂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಆಗ ಅವರು ಕೂಡ ಬೇರೆಬೇರೆ ರಾಜ್ಯಕ್ಕೆ ಹೋಗುತ್ತಿದ್ದರು. ಹಾಗಾದರೆ ಅವರು ಕೂಡ ಇದೇ ರೀತಿ ಹಣ ದೋಚುವುದಕ್ಕೆ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದರೆ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.
ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಶಿವಾನಂದ್, ಹಾಲಪ್ಪ, ಮಧು, ಶ್ಯಾಮಸುಂದರ್, ಧೀರಾಜ್ ಹೊನ್ನವಿಲೆ, ಅಡ್ಡು, ವೈ.ಎಚ್.ನಾಗರಾಜ್, ಮುಕ್ತಿಯಾರ್, ಹಿರಣ್ಣಯ್ಯ, ಪಾಶಾ ಇದ್ದರು.