ಗದಗ: ಮಾಜಿ ಶಾಸಕ ರಾಮಣ್ಣ ಲಮಾಣಿ ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿ ಗೆಲವು ಸಾಧಿಸಿದ್ದಾರೆ. ಆದರೆ ಈಗ ಟಿಕೆಟ್ ಸಿಗದೇ ಬೇರೆ ಪಕ್ಷಕ್ಕೆ ಹೋಗಿ ಟಿಕೆಟ್ ಮಾರಾಟವಾಗಿದೆ ಎಂದು ಹೇಳುತ್ತಿರುವುದು ಖಂಡನೀಯ. ಅವರು ಬಿಜೆಪಿ ಬಗ್ಗೆ ಮಾತನಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ವಿಧಾನಸಭಾ ಚುನಾವಣೆ ಸಮಯದಲ್ಲಿ ಮೊದಲ ಪಟ್ಟಿಯಲ್ಲೇ ಶಿರಹಟ್ಟಿ ಮತಕ್ಷೇತ್ರದಲ್ಲಿ ನನ್ನ ಹೆಸರೇ ಘೋಷಣೆಯಾಗಿತ್ತು. ಇದರಲ್ಲಿ ಬಸವರಾಜ ಬೊಮ್ಮಾಯಿ ಅವರ ಪಾತ್ರ ಇಲ್ಲ. ಅಷ್ಟಕ್ಕೂ ಹಣ ಪಡೆದಿದ್ದರ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಶಿರಹಟ್ಟಿ ಮತಕ್ಷೇತ್ರ ಹಿಂದುಳಿಯಲು ಮಾಜಿ ಶಾಸಕ ರಾಮಣ್ಣ ಲಮಾಣಿ ಅವರೇ ಕಾರಣರಾಗಿದ್ದಾರೆ. ಬಿಜೆಪಿಯಿಂದ ಶಾಸಕರಾಗಿ, ಇದೀಗ ಕಾಂಗ್ರೆಸ್‌ನಲ್ಲಿರುವ ರಾಮಣ್ಣ ಲಮಾಣಿ ಅವರಿಗೆ ಆ ಪಕ್ಷದಲ್ಲಿ ಸಿಗದಿರುವ ಸ್ಥಾನಮಾನದ ಹತಾಶೆಯಿಂದ ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ರಾಮಣ್ಣ ಲಮಾಣಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ರಾಮಣ್ಣ ಲಮಾಣಿ ಅವರಿಗೂ ಸಹ ಬಿಜೆಪಿ ಮೂರು ಬಾರಿ ವಿಧಾನಸಭಾ ಟಿಕೆಟ್ ನೀಡಿತ್ತು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಒಂದು ಬಾರಿ ಜಿಪಂ ಟಿಕೆಟ್ ಕೂಡ ನೀಡಿತ್ತು. ಬಿಜೆಪಿಯಲ್ಲಿ ದುಡ್ಡು ಪಡೆದು ಟಿಕೆಟ್ ನೀಡುವ ಅವಕಾಶ ಇಲ್ಲ. ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಹತಾಶೆಗೊಂಡು ಇಲ್ಲಸಲ್ಲದ ಹೇಳಿಕೆ ನೀಡಿ, ಸುಳ್ಳು ಆರೋಪ ಮಾಡಿರುವುದು ಖಂಡನೀಯ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾ ಮಾಧ್ಯಮ ವಕ್ತಾರ ಎಂ.ಎಂ.ಹಿರೇಮಠ, ಜಗನ್ನಾಥಸಾ ಬಾಂಡಗೆ, ಅಶೋಕ ಸಂಕಣ್ಣವರ, ದತ್ತಣ್ಣ ಜೋಶಿ, ಬಸವರಾಜ ಪಲ್ಲೇದ, ವಿನಾಯಕ ಹಬೀಬ ಸೇರಿ ಅನೇಕರು ಇದ್ದರು.
ನರಗುಂದ ಶಾಸಕ ಸಿ.ಸಿ.ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ ಸೇರಿದಂತೆ ಹಲವು ನಾಯಕರು ಈ ಹಿಂದೆಯೂ ಜಿಪಂ, ನಗರಸಭೆ ಚುನಾವಣೆಗಳಲ್ಲೂ ಗದಗನಲ್ಲಿ ಪ್ರಚಾರ ಮಾಡಿ, ಪಕ್ಷಕ್ಕೆ ಅಧಿಕಾರ ತಂದುಕೊಟ್ಟಿದ್ದಾರೆ. ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಅನಿಲ ಮೆಣಸಿನಕಾಯಿ ಅವರು ಸಹ ಶೀಘ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಹೇಳಿದರು.