ರಾಯಣ್ಣ ಜೀವನಾದರ್ಶ ಯುವಪೀಳಿಗೆಗೆ ತಿಳಿಸಿ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Aug 27, 2024, 01:34 AM IST
ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನ ಕೋಟೆ ಮತ್ತು ಕಂಚಿನ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನಾವರಣಗೊಳಿಸಿದರು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಶಾಸಕ ಬಾಲಚಂದ್ರ ಜಾರಕಿಹೊಳಿ ಇತರರು ಇದ್ದರು. | Kannada Prabha

ಸಾರಾಂಶ

ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನ ಕೋಟೆ ಮತ್ತು ಕಂಚಿನ ಪುತ್ಥಳಿ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಸಂಗೊಳ್ಳಿ ರಾಯಣ್ಣ ಹುಟ್ಟಿದ ಸ್ಥಳದಲ್ಲಿ ಮ್ಯೂಸಿಯಂ ಮತ್ತು ಸೈನಿಕ ಶಾಲೆ ತೆರೆಯಲಾಗಿದೆ. ನಂದಗಡದಲ್ಲಿರುವ ಸಮಾಧಿಯನ್ನು ಸಹ ಅಭಿವೃದ್ಧಿ ಮಾಡಲಾಗಿದೆ. ಸಂಗೊಳ್ಳಿ ಯಾತ್ರಾ ಕೇಂದ್ರವಾಗಬೇಕು. ರಾಯಣ್ಣನ ಜೀವನ ದರ್ಶನದ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸೋಮವಾರ ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನ ಕೋಟೆ ಮತ್ತು ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ರಾಯಣ್ಣನ ದೇಶಪ್ರೇಮವನ್ನು ಪ್ರತಿಯೊಬ್ಬರೂ ಕಲಿಯಬೇಕಿದೆ, ಕಿತ್ತೂರು ಸಂಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕನಾಗಿ, ಕಿತ್ತೂರು ಚೆನ್ನಮ್ಮನ ಬಲಗೈ ಬಂಟನಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿದ್ದ. ಅತ್ಯಂತ ಪರಾಕ್ರಮ ಹೋರಾಟದಿಂದ ಬ್ರಿಟಿಷರಿಗೆ ಸಿಂಹಸ್ಪಪ್ನವಾಗಿದ್ದ. ಕಿತ್ತೂರು ಸಂಸ್ಥಾನಕ್ಕೆ ಮೊದಲ ಯುದ್ಧದಲ್ಲಿ ಜಯ ಸಿಕ್ಕಿತ್ತಾದರೂ, ಎರಡನೇ ಯುದ್ಧದಲ್ಲಿ ಸೋಲನ್ನು ಅನುಭವಿಸಬೇಕಾಗುತ್ತದೆ. ಇದರಿಂದ ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮ ಬಂಧಿಯಾಗುತ್ತಾರೆ. ಆಗ ಸಂಗೊಳ್ಳಿ ರಾಯಣ್ಣ ಸೆರೆಯಾಗದೇ ಕಿತ್ತೂರನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಪಾರು ಮಾಡಲು ಸೈನ್ಯ ಕಟ್ಟಿಕೊಂಡು ಗೆರಿಲ್ಲಾ ಮಾದರಿಯಲ್ಲಿ ಯುದ್ಧ ಮಾಡುತ್ತಾನೆ. ಬ್ರಿಟಿಷರಿಗೆ ರಾಯಣ್ಣ ಚಳ್ಳೆ ಹಣ್ಣು ತಿನ್ನಿಸುತ್ತಾನೆ. ಬ್ರಿಟಿಷರ ಕೈಗೆ ಸಿಗದ ರಾಯಣ್ಣನನ್ನು ಬ್ರಿಟಿಷರು ನಮ್ಮವರನ್ನೇ ಬಳಕೆ ಮಾಡಿಕೊಂಡು ಈಜುವ ಸಮಯದಲ್ಲಿ ಹಿಡಿದು ಬ್ರಿಟಿಷರಿಗೆ ಒಪ್ಪಿಸುತ್ತಾರೆ. ಇಂತಹ ದೇಶದ್ರೋಹಿಗಳು ಈಗಲೂ ಇದ್ದಾರೆಂದು ಸಿದ್ದರಾಮಯ್ಯ ಹೇಳಿದರು.

ಕೌಜಲಗಿ, ಕಳ್ಳಿಗುದ್ದಿ, ಯಾದವಾಡ ಮತ್ತು ಕಲ್ಲೋಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣಗೊಳಿಸಲು ಕಳೆದ ಒಂದು ವರ್ಷದಿಂದ ಇಲ್ಲಿನ ಬಾಂಧವರು ಸಂಪರ್ಕ ಮಾಡುತ್ತಲೇ ಇದ್ದರು. ಆದರೆ, ತಡವಾಗಿಯಾದರೂ ಈಗ ಲೋಕಾರ್ಪಣೆ ಮಾಡುವ ಭಾಗ್ಯ ನನ್ನದಾಗಿದೆ. ಕಂಚಿನ ಪುತ್ಥಳಿ ಉದ್ಘಾಟಿಸುತ್ತಿರುವುದು ಹೆಮ್ಮೆಯಾಗಿದೆ ಎಂದು ತಿಳಿಸಿದರು.

ಕಳ್ಳಿಗುದ್ದಿ, ಯಾದವಾಡ, ಕಲ್ಲೋಳ್ಳಿ ಗ್ರಾಮಗಳಲ್ಲಿಯೂ ಸಹ ಸಿ.ಎಂ. ಸಿದ್ದರಾಮಯ್ಯನವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗಳ ಅನಾವರಣ ಮಾಡಿದರು. ಅರಬಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಸಾನ್ನಿಧ್ಯವನ್ನು ಭಾಗೋಜಿಕೊಪ್ಪದ ಸ್ವಾಮೀಜಿ ವಹಿಸಿದ್ದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿಧಾನಸಭೆಯ ಮುಖ್ಯಸಚೇತಕ ಅಶೋಕ ಪಟ್ಟಣ, ಸ್ಥಳೀಯ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ಮೃಣಾಲ್‌ ಹೆಬ್ಬಾಳಕರ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಅರವಿಂದ ದಳವಾಯಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ದೇಶದ್ರೋಹಿಗಳು ಈಗಲೂ ಇಲ್ಲೇ ಇದ್ದಾರೆ: ಸಿಎಂ

ಬೆಳಗಾವಿ: ಎಲ್ಲ ಕಾಲದಲ್ಲೂ ದೇಶದ್ರೋಹಿಗಳು ಇದ್ದಾರೆ. ಬ್ರಿಟೀಷರ ಕಾಲದಲ್ಲೂ ದೇಶದ್ರೋಹಿಗಳು ಇದ್ದರು. ಈಗಲೂ ಇದ್ದಾರೆ, ಈ ದೇಶದ್ರೋಹಿಗಳು ನನ್ನನ್ನು ಅಧಿಕಾರದಿಂದ ಅಲ್ಲಾಡಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷ ಬಿಜೆಪಿಯವರನ್ನು ದೇಶದ್ರೋಹಿಗಳು ಎಂದು ನೇರವಾಗಿ ಆರೋಪಿಸಿದರು.

ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ರಾಯಣ್ಣ ಕೋಟೆಯನ್ನು ಉದ್ಘಾಟಿಸಿ ಅವರು ಮಾತನಾಡಿದ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಈ ನಾಡಿನ ಸ್ವಾತಂತ್ರ್ಯಕ್ಕೋಸ್ಕರ ಬ್ರಿಟಿಷರ ವಿರುದ್ಧ ಹೋರಾಡಿದರು. ರಾಣಿ ಚನ್ನಮ್ಮ ಸೆರೆಯಾದ ಬಳಿಕ ಸಂಗೊಳ್ಳಿ ರಾಯಣ್ಣ ಸಣ್ಣ ಸೇನೆ ಕಟ್ಟಿಕೊಂಡು ಗೆರಿಲ್ಲಾ ಮಾದರಿಯ ಯುದ್ಧ ಮಾಡಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ್ದರು. ಆದರೆ, ನಮ್ಮವರೇ ಕೆಲವರು ಬ್ರಿಟಿಷರೊಂದಿಗೆ ಕೈಜೋಡಿಸಿ ಅವರನ್ನು ಹಿಡಿದುಕೊಟ್ಟರು ಎಂದರು.

ಈ ಬಿಜೆಪಿಯರು ದೇಶದ್ರೋಹಿಗಳು. ಬಿಜೆಪಿಯವರೂ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರೊಂದಿಗೆ ಕೈಜೋಡಿಸಿದ್ದರು. ಈಗಲೂ ಅದೇ ಕೆಲಸ ಮಾಡುತ್ತಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅಧಿಕಾರದಿಂದ ಇಳಿಸಲು ಷಡ್ಯಂತ್ರ ನಡೆಸಿದ್ದಾರೆ. ಯಾರು ಏನೇ ಷಡ್ಯಂತ್ರ ನಡೆಸಿದರೂ ನಿಮ್ಮ ಆಶೀರ್ವಾದ ಇರುವವರೆಗೂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ಸಾಧ್ಯವಿಲ್ಲ ಎಂದರು.

ಹಿಂದುಳಿದ ಸಮುದಾಯದವರು ಸಿಎಂ ಆಗಬಾರದು, ಅಧಿಕಾರದಲ್ಲಿರಬಾರದು ಎನ್ನುವುದು ಬಿಜೆಪಿಯ ಪುರಾತನ ಸಿದ್ಧಾಂತ. ಯಾವುದೇ ತಪ್ಪಿಲ್ಲದಿದ್ದರೂ ನನ್ನ ವಿರುದ್ಧ ಬಿಜೆಪಿಯವರು ಭಯಾನಕ ಷಡ್ಯಂತ್ರ ರಚಿಸಿದ್ದಾರೆ. ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಷಡ್ಯಂತ್ರ ಗೆಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಾಲಚಂದ್ರ ಜಾರಕಿಹೊಳಿ ನಮ್ಮ ಪರ:

ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಶಾಸಕರಾಗಿದ್ದರೂ ನಮ್ಮ ಪರವಾಗಿದ್ದಾರೆ. ಆದರೆ, ಅವರ ಮಿತ್ರರು ಮಾತ್ರ ನಮ್ಮನ್ನು ವಿರೋಧಿಸಿಕೊಂಡು ಬರುತ್ತಿದ್ದಾರೆಂದು ಬಾಲಚಂದ್ರರ ಮುಖ ನೋಡಿ ಸಿಎಂ ಸಿದ್ದರಾಮಯ್ಯ ಮುಗುಳ್ನಗೆ ಬೀರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!