ಭಟ್ಕಳ: ಧರ್ಮ, ರಾಜಕಾರಣ ತನ್ನ ಚೌಕಟ್ಟಿನಲ್ಲಿಯೇ ಇರಬೇಕು ವಿನಹ ರಾಜಕಾರಣದಲ್ಲಿ ಧರ್ಮ, ಧರ್ಮದಲ್ಲಿ ರಾಜಕಾರಣ ಬರಲೇಬಾರದು ಎಂದು ಉಜಿರೆಯ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಖಾಲಿ ಜಾಗದಲ್ಲಿ ನಿರ್ಮಾಣ ಮಾಡಲಾಗಿದ್ದ ಸೀತಾರಾಮ ಸೌಧ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿ ಆಶೀರ್ವಚನ ನೀಡಿದರು. ದೇಶದಲ್ಲಿನ ಕಾನೂನು, ಸಂವಿಧಾನಕ್ಕೆ ಎಲ್ಲರೂ ಗೌರವ ಕೊಡಬೇಕು. ಯಾವುದೇ ಧರ್ಮ ಹಿಂಸೆಯನ್ನಾಗಲೀ ಅಸಮಾನತೆಯನ್ನಾಗಲೀ ಸಹಿಸುವುದಿಲ್ಲ. ನಾವು ಧರ್ಮವನ್ನು ಅನುಸರಿಸಿಕೊಂಡು ಹೋದರೆ ಎಲ್ಲರಿಗೂ ಒಳಿತಾಗುವುದು ಎಂದ ಅವರು, ವೇದ ಪುರಾಣಗಳಲ್ಲಿಯೇ ಹೇಳಿದಂತೆ ಯಾರು ಯಾವ ಉದ್ಯೋಗ, ವೃತ್ತಿ ಮಾಡುತ್ತಾರೆ ಅದರಂತೆ ಅವರ ವರ್ಣ ನಿರ್ಣಯಿಸಲಾಗುತ್ತದೆ. ಅವರವರ ವೃತ್ತಿಗನುಗುಣವಾಗಿ ವರ್ಣ ಬದಲಾಗುತ್ತದೆ. ಮೋಸ ಮಾಡಿದರೆ ನಮ್ಮ ಹಿಂದಿರುವ ಶಕ್ತಿ ಯಾರನ್ನು ಬಿಡುವುದಿಲ್ಲ ಎಂದರು.ಪ್ರಾಮಾಣಿಕತೆಗೆ ಮಾತ್ರ ಬೆಲೆ ಇದೆ.ಅತ್ಯಂತ ಶ್ರದ್ಧಾ ಭಕ್ತಿಯಿಂದ ಕರ್ತವ್ಯ ಮಾಡಿದರೆ ದೈವಾನುಗ್ರಹ ಹೊಂದಬಹುದು. ಸೀತಾರಾಮ ಸೌಧದಲ್ಲಿ ಪ್ರತಿಯೋರ್ವರಿಗೂ ಕೂಡಾ ಗುಣಮಟ್ಟದ ಸೇವೆ ನೀಡುವ ಮೂಲಕ ಮುಂದೆ ಉತ್ತಮ ಪ್ರಗತಿ ಹೊಂದಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶುಭ ಹಾರೈಸಿದರು. ವೇದಿಕೆಯಲ್ಲಿ ಅನಿವಾಸಿ ಉದ್ಯಮಿ ಯಾಸೀನ್ ಅಸ್ಕೇರಿ, ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ ಶ್ರೀನಿವಾಸ, ಉದ್ಯಮಿ ಹಾಗೂ ಎಂ.ಜಿ.ಎಂ ಪತ್ತಿನ ಸಹಕಾರಿಯ ಅಧ್ಯಕ್ಷ ಈರಪ್ಪ ಎಂ.ಗರ್ಡಿಕರ್ ಉಪಸ್ಥಿತರಿದ್ದರು. ವಿಠಲ ನಾಯ್ಕ ದಂಪತಿಗಳು ಶ್ರೀಗಳ ಪಾದ ಪೂಜೆ ನೆರವೇರಿಸಿದರು. ನಾಗರಾಜ ಮೊಗೇರ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.