ಕನ್ನಡಪ್ರಭ ವಾರ್ತೆ ಗುಡಿಬಂಡೆ
ಮನೆಯ ಆರ್ಥಿಕ ಪರಿಸ್ಥಿತಿ ಸೇರಿದಂತೆ ಕೆಲ ಸಮಸ್ಯೆಗಳ ಕಾರಣದಿಂದ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲ ಕಾರ್ಮಿಕರಾಗುತ್ತಾರೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಜೆ.ಎಂ.ಎಫ್.ಸಿ ನ್ಯಾಯಾಧೀಶ ಕೆ.ಎಂ. ಹರೀಶ್ ತಿಳಿಸಿದರು. ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆಗಳ ಸಹಯೋಗದಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬಾಲಕಾರ್ಮಿಕ ಪದ್ಧತಿ ಅಪರಾಧ
ಬಾಲ ಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿದೆ. ಇಂದು ವಿವಿಧ ಸಮಸ್ಯೆಗಳಿಂದ ಅನೇಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದಿಲ್ಲ. ಇದು ಶಿಕ್ಷಾರ್ಹ ಅಪರಾಧವಾಗಿದೆ. ಜೊತೆಗೆ ಅಪ್ರಾಪ್ತರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಸಹ ಅಪರಾಧವಾಗಿದೆ. ಈ ಕುರಿತು ಪ್ರತಿಯೊಬ್ಬರು ಅರಿವು ಪಡೆದುಕೊಳ್ಳಬೇಕು ಎಂದು ಹೇಳಿದರು.ಈ ಹಿಂದೆ ಶಿಕ್ಷಣ ಪಡೆದುಕೊಳ್ಳುವುದು ಕಷ್ಟಕರವಾಗಿತ್ತು. ಆದರೆ ಇದೀಗ ಸರ್ಕಾರಗಳು ಉಚಿತ ಶಿಕ್ಷಣದ ಜೊತೆಗೆ ಅನೇಕ ಸೌಲಭ್ಯಗಳನ್ನು ಸಹ ನೀಡುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲೂ ಶಿಕ್ಷಣ ಕೊಡಲಾಗುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳು ಕೆಲಸ ಮಾಡುತ್ತಿದ್ದರೆ ಅಂತಹವರನ್ನು ಗುರ್ತಿಸಿ ಮಗುವನ್ನು ಶಾಲೆಗೆ ಸೇರಿಸಬೇಕು. ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದಾಗಿದೆ ಎಂದರು.
ಕಾರ್ಮಿಕರ ಮಕ್ಕಳಿಗೆ ಸೌಲಭ್ಯಕಾರ್ಮಿಕ ನಿರೀಕ್ಷಕ ಸತೀಶ್ ಮಾತನಾಡಿ, ಬಾಲಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು, ಅವರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಅನೇಕ ಪೋಷಕರು ತಮ್ಮ ಆರ್ಥಿಕ ಸಮಸ್ಯೆಗಳ ಕಾರಣದಿಂದ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಾರೆ. ಆದರೆ ಇದು ಕಾನೂನು ರೀತ್ಯ ಅಪರಾಧವಾಗಿದೆ. ನೇಮಿಸಿಕೊಂಡ ವ್ಯಕ್ತಿಗಳನ್ನು ಸಹ ಕಾನೂನಿನಂತೆ ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಕಾರ್ಮಿಕ ಇಲಾಖೆ ವತಿಯಿಂದಲೂ ನೋಂದಣಿಯಾದಂತಹ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಜಿಲ್ಲಾ ಬಾಲಕಾರ್ಮಿಕ ಪದ್ಧತಿ ನಿರ್ಮೂಲನ ಸಂಘದ ಯೋಜನಾ ನಿರ್ದೇಶಕ ರಮೇಶ್, ವಕೀಲರಾದ ಮಹೇಶ, ಚೇತನ್, ಅಭಿಷೇಕ್, ನ್ಯಾಯಾಲಯದ ಸಿಬ್ಬಂದಿ, ಕಾರ್ಮಿಕ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕ ಹಾಜರಿದ್ದರು.