ಬಳ್ಳಾರಿ: ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಹಾಗೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಅಂದು ಎಲ್ಲ ಮನೆಗಳಲ್ಲಿ ದೀಪಾವಳಿ ಹಬ್ಬದಂತೆ ಸಡಗರ, ಸಂಭ್ರಮದಿಂದ ಆಚರಿಸಬೇಕು ಎಂದು ಅಧ್ಯಾತ್ಮ ಮತ್ತು ಯೋಗಗುರು ಡಾ. ಎ. ಮಹೇಶ್ ಶರ್ಮ ತಿಳಿಸಿದರು.
ಬಿಜೆಪಿ ಹಿರಿಯ ಮುಖಂಡ ಗಣಪಾಲ ಐನಾಥ ರೆಡ್ಡಿ ಮಾತನಾಡಿ, ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಉದ್ಘಾಟನೆ ಕ್ಷಣವನ್ನು ಇಡೀ ಜಗತ್ತೇ ಎದುರು ನೋಡುತ್ತಿದೆ. ಕರ್ನಾಟಕದ ಶಿಲ್ಪಿಯೊಬ್ಬರು ಶ್ರೀರಾಮಚಂದ್ರನ ಮೂರ್ತಿಯನ್ನು ನಿರ್ಮಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ಕೆ ಜಗತ್ತಿನ ನಾನಾ ದೇಶಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದು, ಜ. 22ರಂದು ಇಡೀ ದೇಶವೇ ಸಡಗರ, ಸಂಭ್ರಮದಲ್ಲಿರಲಿದೆ. ಆ ಸುದಿನಕ್ಕಾಗಿ ದೇಶದ ಕೋಟ್ಯಂತರ ಜನರು ಎದುರು ನೋಡುತ್ತಿದ್ದಾರೆ ಎಂದರಲ್ಲದೆ, ಅಯೋಧ್ಯೆಯಲ್ಲಿ ಇರುವ ಸಂಭ್ರಮ ಎಲ್ಲ ಕಡೆಯೂ ಇರಬೇಕು. ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಬೇಕು. ವಿಶೇಷ ಪೂಜಾ ವಿಧಿ ವಿಧಾನಗಳ ಮೂಲಕ ಶ್ರೀರಾಮನ ಭಜನೆ ಮಾಡಬೇಕು ಎಂದರು.ವಿಶ್ವ ಹಿಂದೂ ಪರಿಷತ್ ಅಶೋಕ, ಹಿಂದೂ ಜಾಗರಣ ವೇದಿಕೆ ಶ್ರೀರಾಮುಲು, ಯೋಗಗುರು ರಾಮಕೃಷ್ಣ, ಯೋಗ ಶಿಬಿರಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.