ಪ್ಲಾಸ್ಟಿಕ್ ಬಳಸದಿರಲು ಪಣ ತೊಡೋಣ

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗಜೇಂದ್ರಗಡದಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.

ಗಜೇಂದ್ರಗಡ: ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಪಟ್ಟಣ ನಿರ್ಮಾಣಕ್ಕೆ ಪಣ ತೊಡಬೇಕಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಚೇರ್‌ಮನ್‌ ಕನಕಪ್ಪ ಅರಳಿಗಿಡದ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಮತ್ತು ಸ್ವಚ್ಛ ಭಾರತ್ ಅಭಿಯಾನ ಅಡಿಯಲ್ಲಿ ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ನಡೆದ ಬೀದಿ ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು. ಪ್ಲಾಸ್ಟಿಕ್ ಬಳಕೆ ಮಾಡಬೇಡಿ ಎನ್ನುವ ಬದಲು ಪ್ಲಾಸ್ಟಿಕ್ ಉತ್ಪಾದನೆ ನಿಲ್ಲಿಸಬೇಕು ಎಂಬ ಹೇಳಿಕೆಗಳು ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಎಲ್ಲವನ್ನು ಸರ್ಕಾರವೇ ಮಾಡಬೇಕು ಎಂಬ ಮನೋಭಾವನೆ ಬದಲು ಸರ್ಕಾರಕ್ಕೆ ಸಹಕಾರ ನೀಡುವುದು ಸಹ ನಮ್ಮ ಕರ್ತವ್ಯ ಎಂಬುದನ್ನು ನಾವು ಮರೆಯಬಾರದು. ಸರ್ಕಾರವು ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದ್ದು, ಪ್ಲಾಸ್ಟಿಕ್ ಬಳಸದಂತೆ ಈಗಾಗಲೇ ಅಧಿಕಾರಿಗಳು ಜಾಗೃತಿ ಜತೆಗೆ ಮಾರಾಟ ಮಾಡುವ ಮಳಿಗೆಗಳ ಮೇಲೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಆದರೆ ಸಾರ್ವಜನಿಕರಿಂದ ಪ್ಲಾಸ್ಟಿಕ್‌ಗೆ ಬೇಡಿಕೆ ಹೆಚ್ಚಾದಂತೆ ವಾಮಮಾರ್ಗದಲ್ಲಿ ಮಾರಾಟವು ಸಹ ನಡೆಯುತ್ತಿದೆ. ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದು ನಮ್ಮೆಲ್ಲರ ಮೊದಲ ಜವಾಬ್ದಾರಿಯಾಗಿದೆ ಎಂದರು.

ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜತೆಗೆ ಸ್ವಚ್ಛತೆ ಕಾಪಾಡಲು ಹಸಿ ಹಾಗೂ ಒಣ ಕಸ ಬೇರ್ಪಡಿಸಲು ಪುರಸಭೆಯಿಂದ ಕಸ ಸಂಗ್ರಹ ಬುಟ್ಟಿಗಳನ್ನು ನೀಡಲಾಗಿದೆ. ಆದರೆ ಯೋಜನೆ ಉದ್ದೇಶವು ಪಟ್ಟಣದಲ್ಲಿ ಯಶಸ್ವಿಯಾಗಿ ಜಾರಿಯಾಗುತ್ತಿಲ್ಲ. ಪರಿಣಾಮ ಕಸದ ಜತೆಗೆ ಇನ್ನಿತರ ತ್ಯಾಜ್ಯವನ್ನು ಕೂಡಿಸಿ ಪುರಸಭೆ ವಾಹನದಲ್ಲಿ ಜನತೆ ಹಾಕುತ್ತಿದ್ದು, ಪೌರ ಕಾರ್ಮಿಕರು ಕಸವನ್ನು ಬೇರ್ಪಡಿಸಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ. ಯುವ ಪೀಳಿಗೆಯು ಭವಿಷ್ಯದಲ್ಲಿ ನೆಮ್ಮದಿ ಜೀವನ ನಡೆಸಬೇಕಾದರೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಅಣಿಯಾಗೋಣ ಎಂದರು.ಮುಖಂಡರಾದ ಬಸವರಾಜ ಬಂಕದ, ಗುಲಾಂಅಹ್ಮದ ಹುನಗುಂದ ಮಾತನಾಡಿದರು. ಪುರಸಭೆ ಹಂಗಾಮಿ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಸದಸ್ಯ ರೂಪೇಶ ರಾಠೋಡ, ಸಿದ್ದಣ್ಣ ಚೋಳಿನ, ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಅಧಿಕಾರಿಗಳಾದ ರಾಘವೇಂದ್ರ ಮಂತಾ, ಶಿವಕುಮಾರ ಇಲಾಳ ಸೇರಿ ಇತರರು ಇದ್ದರು.

Share this article