ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ವಿರುದ್ಧ ಕಾನೂನು ಹೋರಾಟ ನಡೆಸಿ ಗೆಲ್ಲಲು ಬೇಕಾದ ಎಲ್ಲ ಅಂಕಿ ಅಂಶಗಳು ಇವೆ. ರಾಜ್ಯ ಸರ್ಕಾರವನ್ನು ಕಾನೂನು ಮಾತ್ರವಲ್ಲದೆ ರೈತ ಚಳವಳಿಯನ್ನು ಮತ್ತಷ್ಟು ಗಟ್ಟಿಗೊಳಿಸಿ ಆ ಮೂಲಕವೂ ಮಣಿಸಲು ಅಣಿಯಾಗಬೇಕಿದೆ ಎಂದು ಬೈರಮಂಗಲ ಕಂಚುಗಾರನಹಳ್ಳಿ ಗ್ರಾಪಂ ರೈತರ ಭೂ ಹಿತರಕ್ಷಣಾ ಸಂಘ ನಿರ್ದೇಶಕ ಪ್ರಕಾಶ್ ಕರೆ ನೀಡಿದರು.
ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನಾ, ಸಣ್ಣ ನೀರಾವರಿ ಇಲಾಖೆಯಿಂದ ಬೇಕಾದ ಅಂಕಿ ಅಂಶಗಳನ್ನು ಪಡೆದು ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದೇವೆ. ಇದರ ಜೊತೆಗೆ ರೈತರು ಬಿಸಿಲು ಮಳೆಯನ್ನು ಲೆಕ್ಕಿಸದೆ ಭೂಮಿ ಉಳಿಸಿಕೊಳ್ಳಲು ಹೋರಾಟದಲ್ಲಿ ಭಾಗಿಯಾಗುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ರೈತರಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಲಿ:ಎರಡು ರಾಷ್ಟ್ರೀಯ ಹೆದ್ದಾರಿ ಮತ್ತು ಎರಡು ಕೈಗಾರಿಕಾ ಪ್ರದೇಶಗಳ ಮಧ್ಯೆ ಫಲವತ್ತಾದ ಕೃಷಿ ಭೂಮಿ ಇದ್ದು, ಹತ್ತಾರು ಕೋಟಿ ಬೆಲೆ ಬಾಳುತ್ತದೆ. ಮನೆ ಬಳಿಯಿರುವ ಭೂಮಿ ಕಳೆದುಕೊಂಡು ಬೇರೆ ಕಡೆ ಭೂಮಿ ಖರೀದಿಸಿ ಕೃಷಿ ಮಾಡುತ್ತೇವೆ ಎಂಬುದು ಮೂರ್ಖತನ. ಈಗ 6/1 ಮುಂದೂಡಿದ್ದಾರೆ ಎಂದಾಕ್ಷಣ ನಾವು ಹೋರಾಟದಲ್ಲಿ ಗೆದ್ದಿದೆ ಅಂತ ಯಾರೂ ಭಾವಿಸಬಾರದು. ಆ 6/1 ಜಾರಿಯಾಗದಂತೆ ತಡೆಯಲು ಹೋರಾಟವನ್ನು ತೀವ್ರಗೊಳಿಸಬೇಕಿದೆ. ರೈತರಲ್ಲಿ ಹೋರಾಟದ ಕಿಚ್ಚು ಹೆಚ್ಚಾದಾಗ ಮಾತ್ರ ಸರ್ಕಾರ ಈ ಯೋಜನೆಯನ್ನು ಕೈಬಿಡಲಿದೆ ಎಂದು ತಿಳಿಸಿದರು.
ರೈತರ ಬದುಕು ಸರ್ವನಾಶದತ್ತ:
ಒಂದು ವರ್ಷದಿಂದ ಹೋರಾಟ ನಡೆಯುತ್ತಿದ್ದರು ವಿಧಾನಸೌಧಕ್ಕೆ ಕೇಳಿಸದಿರುವುದು ವಿಪರ್ಯಾಸ ಎಂದರು.
ರೈತ ಹೋರಾಟಗಳು ಸೋತ ಉದಾಹರಣೆ ಇಲ್ಲ :
ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಒತ್ತು ನೀಡಬೇಕೆ ಹೊರತು ಕೈಗಾರಿಕೆಗಳಿಗೆ ಅಲ್ಲ. ನಗರೀಕರಣ ಬೆಳೆದಂತೆ ಹಳ್ಳಿಗಳು ನಾಶವಾಗುತ್ತಿವೆ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಇಲ್ಲಿವರೆಗೆ ಯಾವ ರೈತ ಹೋರಾಟಗಳು ಸೋತ ಉದಾಹರಣೆಯೇ ಇಲ್ಲ. ರೈತರು ತಾತ್ಸಾರ ಮನೋಭಾವನೆ ಬಿಟ್ಟು ಚಳವಳಿಯನ್ನು ಗಟ್ಟಿಗೊಳಿಸಬೇಕು. ಆಗ ಮಾತ್ರ ವಿಧಾನಸೌಧದ ಬಾಗಿಲು ತಟ್ಟುತ್ತದೆ. ಆದ್ದರಿಂದ ಚಳವಳಿ ದಿಕ್ಕನ್ನು ಬದಲಿಸಿ ಸರ್ಕಾರದ ಗಮನ ಸಳೆಯಬೇಕು ಎಂದು ಹೇಳಿದರು.
ರೈತಸಂಘ ಜಿಲ್ಲಾಧ್ಯಕ್ಷ ಕೃಷ್ಣಯ್ಯ, ತಾಲೂಕು ಅಧ್ಯಕ್ಷ ಶಿವರಾಜು, ಸಂಘದ ಕಾರ್ಯದರ್ಶಿ ಶ್ರೀನಿವಾಸ್, ಮುಖಂಡರಾದ ಚಂದ್ರಶೇಖರ್, ರಾಜಶೇಖರ್, ಮುತ್ತಣ್ಣ, ಪ್ರಕಾಶ್, ಜಯಮ್ಮ, ಭಾಗ್ಯಮ್ಮ, ಸುಮಾ, ಚೈತ್ರ ಮತ್ತಿತರರು ಹಾಜರಿದ್ದರು.
ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟ ಜೀವಂತವಾಗಿರಲು ಕನ್ನಡ, ದಲಿತ, ಕಾರ್ಮಿಕ, ಮಹಿಳಾ ಸಂಘಟನೆಗಳ ಬೆಂಬಲ ಕಾರಣ. ರೈತರಿಗೆ ತಮ್ಮ ಭೂಮಿ ಮೇಲೆ ಹಕ್ಕು ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಅವರಪ್ಪನ ಆಸ್ತಿಯಂತೆ ದರ ನಿಗದಿ ಮಾಡುತ್ತಿದ್ದಾರೆ. ರೈತರ ಮನೆ ಹಾಳು ಮಾಡಿ ರಾಜಕಾರಣಿಗಳು ತಮ್ಮ ಮನೆ ಉದ್ಧಾರ ಮಾಡಿಕೊಳ್ಳುತ್ತಿದ್ದಾರೆ.
- ಎಂ.ಆರ್.ನಾಗರಾಜು, ಖಜಾಂಚಿ, ಬೈರಮಂಗಲ ಕಂಚುಗಾರನಹಳ್ಳಿ ಗ್ರಾಪಂಗಳ ರೖತರ ಭೂ ಹಿತರಕ್ಷಣಾ ಸಂಘ11ಕೆಆರ್ ಎಂಎನ್ 1.ಜೆಪಿಜಿ
ಬೈರಮಂಗಲ ಕ್ರಾಸ್ ನಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಮುಂಭಾಗದಲ್ಲಿ ನಡೆದ ಭೂ ಸ್ವಾಧೀನ ವಿರುದ್ಧ ಐತಿಹಾಸಿಕ ಹೋರಾಟದ ನೆನಪು - ರೈತರ ಹೋರಾಟದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಕಾಶ್ ಮಾತನಾಡಿದರು.-----------------------------