ಭೋವಿ ಸಮಾಜದ ಜನಗಣತಿ ಭೋವಿಗಳೇ ಮಾಡಿಕೊಳ್ಳೋಣ

KannadaprabhaNewsNetwork | Published : Aug 13, 2024 1:00 AM

ಸಾರಾಂಶ

ಇಮ್ಮಡಿ ಶ್ರೀಗಳ ಧೀಕ್ಷಾ ರಜತ ಮಹೋತ್ಸವದ ಕಾರ್ಯಕ್ರಮಕ್ಕೆ ಶ್ರಮಿಸಿದವರಿಗೆ ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದಲ್ಲಿ ಭೋವಿ ಸಮಾಜದ ಜನಸಂಖ್ಯೆ ಅಧಿಕವಾಗಿದ್ದರೂ ಸಹ ಸರಿಯಾದ ರೀತಿಯಲ್ಲಿ ಜಾತಿ ನಮೂದಿಸದ ಕಾರಣ ನಿಖರವಾದ ಸಂಖ್ಯೆ ಲಭ್ಯವಾಗುತ್ತಿಲ್ಲ. ಹಾಗಾಗಿ ನಾವುಗಳೇ ನಮ್ಮ ಜನಗಣತಿ ಮಾಡಿಕೊಳ್ಳೋಣ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಇಮ್ಮಡಿ ಶ್ರೀಗಳ ಧೀಕ್ಷಾ ರಜತ ಮಹೋತ್ಸವದ ಕಾರ್ಯಕ್ರಮಕ್ಕೆ ಶ್ರಮಿಸಿದವರಿಗೆ ಭೋವಿ ಗುರುಪೀಠದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಾವು ಭೋವಿಗಳು ಎಂದು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ಬೇಡ. ನಮ್ಮ ಜಾತಿ ಬಗ್ಗೆ ಗರ್ವ ಪಡೋಣ, ಎದುರಾಗುವ ಸವಾಲುಗಳನ್ನು ಸಮನಾಗಿ ಸ್ವೀಕರಿಸಿ ಸಮಾಜ ಮುನ್ನಡೆಸೋಣ ಎಂದು ತಿಳಿಸಿದರು.

ಸಮಾಜ ಕಟ್ಟುವಾಗ ಅನೇಕ ರೀತಿಯ ವಿಘಟಕ ಮಾತುಗಳ ಕೇಳಿ ಬರುತ್ತವೆ. ಇಂತಹ ಮಾತುಗಳಿಗೆ ಕಿವಿಗೊಡದೆ ಮುನ್ನಡೆಯಬೇಕು. ಒಂದು ಕಾಲದಲ್ಲಿ ಏನು ಇಲ್ಲದೆ ಗುಡಿಸಲಿನಲ್ಲಿ ಇದ್ದ ನಿಮ್ಮ ಗುರುಗಳು ಉತ್ತಮ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಓಡಾಡಲು ಉತ್ತಮ ಕಾರು ಇದೆ. ಇದು ಸಮಾಜದ ಜನತೆ ನಮಗೆ ನೀಡಿದ ಕೊಡುಗೆಯಾಗಿದ್ದು ಮರಳಿ ಸಮಾಜಕ್ಕೆ ಕೊಡುಗೆ ನೀಡಲು ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯದ ಕಷ್ಟ-ಸುಖ ಆಲಿಸುತ್ತಿರುವುದಾಗಿ ಶ್ರೀಗಳು ಹೇಳಿದರು.

ಅಂಬೇಡ್ಕರ್‌ ಅವರ ಮಾತಿನಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚಿನ ಆಧ್ಯತೆ ನೀಡುವುದ ನಮ್ಮ ಗುರಿ. ಮಠದಲ್ಲಿ ಬಡ ಮಕ್ಕಳಿಗೆ ಪ್ರಸಾದ ಜೊತೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ ಸಮಾಜವನ್ನು ಹೊರ ರಾಜ್ಯಗಳಲ್ಲಿಯೂ ಕಟ್ಟುವಂತ ಕಾರ್ಯ ಮಾಡಲಾಗುತ್ತಿದೆ. ಸಮಾಜಕ್ಕೆ ಧಕ್ಕೆಯಾದಾಗಲೆಲ್ಲ ಹೋರಾಟ ಮಾಡುವುದರ ಮೂಲಕ ಸಮಾಜವನ್ನು ಮುನ್ನಡೆಸುವ ಕಾರ್ಯ ಮಾಡಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.

ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿ ಮಾತನಾಡಿ, ಸಮಾಜದ ಯಾವುದೇ ಕಾರ್ಯಕ್ರಮವಾದರೂ ಗುರುಗಳಿಗೆ ಶಕ್ತಿ ತುಂಬುವ ಹಾಗೂ ಭೋವಿಗಳಿಗೆ ಬಲ ನೀಡಬೇಕಿದೆ. ಧೀಕ್ಷಾ ಕಾರ್ಯಕ್ರಮಕ್ಕೆ ಕೈ ಜೋಡಿಸದೇ ಇರುವವರು ಈಗ ಪರಿತಪಿಸುತ್ತಿದ್ದಾರೆ. ಸಹಾಯ ಮಾಡದೇ ಇರುವ ಕಾರಣಕ್ಕೆ ನೋವು ಅನುಭವಿಸುತ್ತಿದ್ದಾರೆ. ಕಾರ್ಯಕ್ರಮವನ್ನು ನೋಡಿ ಸಹಾಯ ಮಾಡದವರು ಈಗ ನೋವನ್ನು ಅನುಭವಿಸುತ್ತಿದ್ದಾರೆ. ಸಮಾಜಕ್ಕೆ ಒಂದೇ ಸಂಘಟನೆ, ಒಬ್ಬರೇ ಗುರುಗಳು ಇರಬೇಕು. ಹೊಟ್ಟೆ ಪಾಡಿಗಾಗಿ ಸಂಘ ಹುಟ್ಟಬಾರದು ಎಂದರು.

ಸಮಾಜ ಪಕ್ಷಾತೀತವಾಗಿ ಇದ್ದರೆ ಬೆಲೆ. ಸಂಘಟನೆ ಬಲವಾಗಿ ಇದ್ದಾಗ ಮಾತ್ರ ರಕ್ಷಣೆ ಸಿಗಲು ಸಾಧ್ಯ. ನಮ್ಮ ಶಕ್ತಿ ಪ್ರದರ್ಶನ ಮಾಡಿದರೆ ರಾಜಕೀಯ ಪಕ್ಷಗಳು ನಮ್ಮನ್ನು ಗುರುತಿಸಲು ಸಾಧ್ಯವಿದೆ. ಗುರುಗಳು ಇರುವುದು ನಮ್ಮ ಸಮಾಜ ಸುಧಾರಣೆ ಮಾಡಲು ಹೊರೆತು ಭೋವಿ ನಿಗಮದ ಅವ್ಯವಹಾರದ ವಿರುದ್ಧ ಹೋರಾಟ ಮಾಡಲು ಅಲ್ಲ ಎಂದು ತಿಳಿಸಿದರು.

ಯುವ ಮುಖಂಡ ರಘುಚಂದನ್ ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮುಖಂಡರು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು. ಈ ವೇಳೆ ರವಿ ಮಾಕಳಿ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಇದ್ದರು.

Share this article