ಕನ್ನಡಪ್ರಭ ವಾರ್ತೆ ಮಂಗಳೂರು
ಯಕ್ಷರಂಗವು ನನ್ನ ಬದುಕಿಗೆ ಅಭಿಮಾನಿಗಳ ಪ್ರೀತಿ ಮತ್ತು ಹೊಸತನದ ಸ್ಫೂರ್ತಿಯನ್ನು ನೀಡಿದೆ. ಅದು ಮರೆಯಲಾದ ಅವಿಸ್ಮರಣೀ ಕ್ಷಣಗಳು ಎಂದು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಹೇಳಿದರು.ಅವರು ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ರಂಗಸ್ಥಳ ಮಂಗಳೂರು ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು. ನನ್ನ ತಂದೆ ಜಲವಳ್ಳಿ ವೆಂಕಟೇಶ್ ರಾವ್ ಯಕ್ಷಗಾನ ಕ್ಷೇತ್ರಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ. ಪ್ರತಿಯೊಬ್ಬ ಕಲಾವಿದರು ಕೂಡ ಹಿರಿಯವರು ಹಾಕಿಕೊಟ್ಟ ಯಕ್ಷಪರಂಪರೆಯನ್ನು ಮುಂದುವರಿಸುವ ಮೂಲಕ ತನ್ನತನವನ್ನು ಕಾಯ್ದುಕೊಳ್ಳಬೇಕೇ ಹೊರತು ನಕಲಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಯಕ್ಷಗಾನದಲ್ಲಿ ಅಪಾರವಾದ ಓದು, ಕಲಿಕೆ ಅಭ್ಯಾಸದ ಮೂಲಕ ಕಲಾವಿದ ಬೆಳೆಯಬಹುದು. ಬದುಕಿಗಾಗಿ ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡಿದ್ದೇವೆ, ಆದರೆ ಬಹಳಷ್ಟು ಪ್ರೇಕ್ಷಕರನ್ನು ನಾವು ಗಳಿಸಿದ್ದೇವೆ. ಅಂದರೆ ಅದು ಯಕ್ಷಗಾನದ ಶಕ್ತಿ ಎನ್ನುವುದು ನನ್ನ ನಂಬಿಕೆ. ಕಲಾಮಾತೆಯ ಅನುಗ್ರಹಕ್ಕೆ ನಾವು ಒಳಗಾಗಿದ್ದೇವೆ ಅನ್ನುವುದಕ್ಕೆ ಈ ಪುರಸ್ಕಾರವೇ ಸಾಕ್ಷಿ ಎಂದು ಅವರು ಹೇಳಿದರು.ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್, ರಂಗಸ್ಥಳ ಮಂಗಳೂರು ಇದರ ಪದಾಧಿಕಾರಿಗಳಾದ ಎಸ್.ಎಲ್. ನಾಯಕ್ ಮತ್ತು ದಿನೇಶ್ ಪೈ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ದಿನಕರ ಎಸ್. ಬಳ್ಕೂರು, ಜಿಲ್ಲಾ ಕೃಷಿ ಪ್ರಶಸ್ತಿ ಪುರಸ್ಕೃತ ಕೃಷ್ಣರಾಜ ಬಳ್ಕೂರು, ನಾಗೇಶ್ ಎಸ್. ಬಳ್ಕೂರು, ಮೇಳದ ಯಜಮಾನ ರಂಜಿತ್ ಕುಮಾರ್ ವಕ್ವಾಡಿ, ಶ್ರೀಪತಿ ಆಚಾರ್ಯ ಇದ್ದರು. ಯಕ್ಷ ಕುಸುಮ ಟ್ರಸ್ಟ್‌ನ ಅಧ್ಯಕ್ಷ ಕರುಣಾಕರ ಬಳ್ಕೂರು ಪ್ರಾಸ್ತಾವಿಕ ಮಾತನಾಡಿದರು.ಬಳಿಕ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳದವರಿಂದ ಕಾಲಮಿತಿ ಯಕ್ಷಗಾನ ‘ಗದಾಯುದ್ಧ ಮತ್ತು ರಾಜಾ ರುದ್ರಕೋಪ’ ಎಂಬ ಕಥಾನಕ ಪ್ರದರ್ಶನ ನಡೆಯಿತು.