ಪೌರಕಾರ್ಮಿಕರನ್ನು ಗೌರವಿಸೋಣ

KannadaprabhaNewsNetwork | Published : Sep 24, 2024 2:03 AM

ಸಾರಾಂಶ

ದಿನ ಬೆಳಗ್ಗೆ ಚಳಿ,ಮಳೆಗೆ ಜಗ್ಗದೆ ತಮ್ಮ ಕಾಯಕದಲ್ಲಿ ತೊಡಗುವ ಪೌರಕಾರ್ಮಿಕರು ರಸ್ತೆ, ಬೀದಿ ಸ್ವಚ್ಛಗೊಳಿಸಿ ಪಟ್ಟಣವನ್ನು ಸುಂದರವಾಗಿಸುತ್ತಾರೆ

ಮುಳಗುಂದ: ಪೌರ ಸೇವೆಗೆ ಕೃತಜ್ಞತೆ ಸಲ್ಲಿಸಿದಾಗ ಮಾತ್ರ ಪೌರ ಕಾರ್ಮಿಕರ ದಿನಾಚರಣೆಗೆ ಅರ್ಥ ಬರುತ್ತದೆ. ನಗರ,ಪಟ್ಟಣ ಸುಂದರವಾಗಿ ಕಾಣಲು ಮೂಲ ಕಾರಣೀಭೂತರು ಪೌರಕಾರ್ಮಿಕರು, ಸಮಾಜಕ್ಕೆ ಅವರ ಸೇವೆ ಅಪಾರವಾದ್ದು ಎಂದು ಎಸ್‌.ಜೆ.ಜೆ.ಎಂ ಕಾಲೇಜು ಪ್ರಾ. ಎ.ಎಂ.ಅಂಗಡಿ ಹೇಳಿದರು.

ಅವರು ಪಟ್ಟಣದ ಶ್ರೀಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾಭವನದಲ್ಲಿ ಸೋಮವಾರ ಪಪಂ, ರಾಜ್ಯ ಪೌರಕಾರ್ಮಿಕರ ಸಂಘ ಶಾಖೆ ಮುಳಗುಂದ ವತಿಯಿಂದ ನಡೆದ 13ನೇ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ದಿನ ಬೆಳಗ್ಗೆ ಚಳಿ,ಮಳೆಗೆ ಜಗ್ಗದೆ ತಮ್ಮ ಕಾಯಕದಲ್ಲಿ ತೊಡಗುವ ಪೌರಕಾರ್ಮಿಕರು ರಸ್ತೆ, ಬೀದಿ ಸ್ವಚ್ಛಗೊಳಿಸಿ ಪಟ್ಟಣವನ್ನು ಸುಂದರವಾಗಿಸುತ್ತಾರೆ. ಕೊರೋನಾ ಸಂಕಷ್ಟದ ಸಮಯದಲ್ಲೂ ಅವರ ಸೇವೆ ಅಪರಿಮಿತವಾಗಿತ್ತು. ಪೌರಕಾರ್ಮಿಕರು ತಮ್ಮ ಕಾಯಕದ ಜತೆಗೆ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸರ್ಕಾರ ತಮಗೆ ನೀಡಿದ ರಕ್ಷಾ ಕವಚ ಬಳಕೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ವರ್ಷಾ ಬಾರಕೇರ ಉಪನ್ಯಾಸ ನೀಡಿ ಪೌರ ಕಾರ್ಮಿಕರು ಶ್ರಮಿಸದಿದ್ದರೆ ನಾವು ಆರೋಗ್ಯವಾಗಿ ಜೀವಿಸಲು ಸಾಧ್ಯವಿಲ್ಲ. ಅಂತಹ ಆರೋಗ್ಯ ಉಡುಗೊರೆಯಾಗಿ ನೀಡಿದ ಪೌರಕಾರ್ಮಿಕರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು. ನಗರ ಸುಂದರವಾಗಿ ಕಾಣಲು ಪೌರಕಾರ್ಮಿಕರು ಅಗತ್ಯವಾಗಿಬೇಕು. ಕಾಯಕದಲ್ಲಿ ಕೈಲಾಸ ಕಾಣುವ ಶ್ರಮ ಜೀವಿಗಳು ಪೌರಕಾರ್ಮಿಕರು ಎಂದರು.

ಈ ವೇಳೆ ಪಪಂ ಸದಸ್ಯರಾದ ವಿಜಯ ನೀಲಗುಂದ, ಷಣ್ಮುಖಪ್ಪ ಬಡ್ನಿ ಹಾಗೂ ರಮೇಶ ಮ್ಯಾಗೇರಿ ಮಾತನಾಡಿದರು. ಕಾಯಂ ಪೌರಕಾರ್ಮಿರಿಗೆ ವಿಶೇಷ ಭತ್ಯೆಯ ಚೆಕ್‌ನ್ನು ವಿತರಿಸಲಾಯಿತು. ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ನೀಲಪ್ಪ ದೊಡ್ಡಮನಿ, ಉಪಾಧ್ಯಕ್ಷ ಮಹಾಂತೇಶ ದಿವಟರ, ಪಪಂ ಸದಸ್ಯರಾದ ಮಹಾದೇವಪ್ಪ ಗಡಾದ, ಮಹಾಂತೇಶ ನೀಲಗುಂದ, ಹೊನ್ನಪ್ಪ ಹಳ್ಳಿ, ಮಲ್ಲಪ್ಪ ಚವ್ಹಾಣ, ಉಪಾಧ್ಯಕ್ಷೆ ಅನುಸೂಯಾ ಸೋಮಗಿರಿ, ಲಕ್ಷ್ಮವ್ವ ಕುಂದಗೋಳ ಸೇರಿದಂತೆ ಪೌರಕಾರ್ಮಿಕರು, ಪಪಂ ಸಿಬ್ಬಂದಿ ಇದ್ದರು. ಸಮುದಾಯ ಸಂಘಟನಾಧಿಕಾರಿ ವಾಣಿಶ್ರೀ ನಿರಂಜನ ನಿರೂಪಿಸಿ ವಂದಿಸಿದರು.

Share this article