-ಕೊತ್ತಲ ಸ್ವರ್ಣ ಜಯಂತಿಯಂಗ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ ಶಹಾಪುರ
ಭಾರತವು ಸಂಸ್ಕೃತಿ, ಪರಂಪರೆಯಲ್ಲಿ ಶ್ರೀಮಂತಿಕೆ ಹೊಂದಿದ ರಾಷ್ಟ್ರ. ಪರಂಪರೆ ಉಳಿಸಿ, ಬೆಳೆಸುವಲ್ಲಿ ಶ್ರೀಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಮತ್ತು ಕಲಬುರಗಿ ವಿಕಾಸ ಅಕಾಡೆಮಿ ಹಾಗೂ ಭಾರತ ವಿಕಾಸ ಸಂಗಮ ಹಲವು ವರ್ಷಗಳಿಂದ ಶ್ರಮಿಸುಸುತ್ತಿರುವುದು ಶ್ಲಾಘನೀಯ ಎಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ರೇಣುಕಾ ಪಾಟೀಲ್ ಹೇಳಿದರು.ನಗರದ ಬಾಲಕರ ಸರ್ಕಾರಿ ಪ್ರೌಢ ಶಾಲಾವರಣದಲ್ಲಿ 7ನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸ್ವರ್ಣ ಜಯಂತಿ ಪ್ರಯುಕ್ತ ನಡೆದ ತಾಲೂಕು ಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿದ್ದು, ವಯಸ್ಸಿನ ಮಿತಿ ಅಳವಡಿಸದಿರುವುದು ಉತ್ತಮ ನಿರ್ಧಾರ. ಜಾನಪದ, ಭಜನಾ ಮಂಡಳಿ, ವಿವಿಧ ಸಾಂಸ್ಕೃತಿಕ ನೃತ್ಯ ಸೇರಿದಂತೆ ತತ್ವಪದ, ಕನ್ನಡ ಗೀತೆ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿಭಾವಂತ ಮಕ್ಕಳನ್ನು ಗುರುತಿಸುವ ಕೆಲಸ ನಡೆಯಲಿದೆ. ಸಾಂಸ್ಕೃತಿಕ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದರು.ಚರಬಸವೇಶ್ವರ ಗದ್ದುಗೆಯ ಶರಣು ಮಾತನಾಡಿ, ಭಾರತೀಯ ಸಂಸ್ಕೃತಿ ಉತ್ಸವಗಳಂತಹ ಅನೇಕ ಕಾರ್ಯಕ್ರಮಗಳನ್ನು 25 ವರ್ಷದಿಂದ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ನಡೆಸುತ್ತಿದೆ. ವಿಕಾಸ ಅಕಾಡೆಮಿ, ಭಾರತ ವಿಕಾಸ ಸಂಗಮ ಜಂಟಿಯಾಗಿ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಫೆಬ್ರವರಿಯಲ್ಲಿ ಕಲಬುರಗಿಯಲ್ಲಿ 240 ಎಕರೆ ಪ್ರದೇಶದಲ್ಲಿ ಕೊತ್ತಲ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಪ್ರಯುಕ್ತ ನಡೆವ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ನಾವೆಲ್ಲ ತನು-ಮನ-ಧನದಿಂದ ಸಹಕರಿಸೋಣ ಎಂದರು.
ಡಿಡಿಯು ಶಿಕ್ಷಣ ಸಂಸ್ಥೆಯ ಭೀಮಣ್ಣ ಮೇಟಿ, ಕಸಾಪ ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಮಾತನಾಡಿದರು.ಭೀಮಣ್ಣಗೌಡ ಬೈರಡ್ಡಿ, ಉಪ ಪ್ರಾಂಶುಪಾಲ ಮಲ್ಲಣ್ಣಗೌಡ ಬಿರೆದಾರ, ಶಿವರಾಜ ದೇಶಮುಖ, ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಇದ್ದರು. ಕಲಬುರಗಿ ವಿಕಾಸ ಅಕಾಡೆಮಿ ತಾಲೂಕು ಸಂಚಾಲಕ ಅಮೃತರಾವ್ ಮುಲಗೆ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ನಾರಾಯಣಾಚಾರ್ಯ ಸಗರ ಸ್ವಾಗತಿಸಿದರು. ವೀರೇಶ ಉಳ್ಳಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ರಂಗೋಲಿ, ಭಜನಾ ಮಂಡಳಿ, ಭರತ ನಾಟ್ಯ ಸೇರಿದಂತೆ ಕೋಲಾಟ, ಗಾಯನ ಇತರೆ ಸ್ಪರ್ಧೆಗಳು ಜರುಗಿದವು.
------ಫೋಟೊ: 12ವೈಡಿಆರ್13: ಶಹಾಪುರ ನಗರದ ಬಾಲಕರ ಸರ್ಕಾರಿ ಪ್ರೌಢ ಶಾಲಾವರಣದಲ್ಲಿ 7ನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸ್ವರ್ಣ ಜಯಂತಿ ಪ್ರಯುಕ್ತ ತಾಲೂಕು ಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಜರುಗಿತು.
---000---