ಕನ್ನಡಪ್ರಭ ವಾರ್ತೆ ಮೂಡಲಗಿ
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಕಲು ಮುಕ್ತ ಪರೀಕ್ಷೆಯಾಗಿ ಮಾಡುವ ಮೂಲಕ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನಕ್ಕೆ ಸಹಕಾರಿಯಾಗಿ ಮಾಡೋಣ ಎಂದು ಮೂಡಲಗಿ ತಹಸೀಲ್ದಾರ್ ಬಿ.ಎಸ್.ಕಡಕಬಾಂವಿ ಅಭಿಪ್ರಾಯ ಪಟ್ಟರು.ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೂಡಲಗಿ ಶೈಕ್ಷಣಿಕ ವಲಯದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿಬ್ಬಂದಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆಗಳು, ಪರೀಕ್ಷೆಗಳು, ಬರಗಾಲ ಏಕಕಾಲಕ್ಕೆ ಬಂದಿರುವುದರಿಂದ ಅಧಿಕಾರಿಗಳಿಗೆ ತೊಂದರೆಯಾಗಿದೆ. ಆದರೂ ಕೂಡ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಎಲ್ಲರೂ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ನಡೆಯುವ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸುವ ಮೂಲಕ ಈ ವಲಯ ಮತ್ತೊಮ್ಮೆ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಲು ಶ್ರಮಿಸೋಣ ಎಂದರು.
ಬಳಿಕ ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯದಲ್ಲಿ 87 ಪ್ರೌಢ ಶಾಲೆಗಳಿಂದ 21 ಪರೀಕ್ಷಾ ಕೇಂದ್ರಗಳಲ್ಲಿ 7957 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದ ನಿಟ್ಟಿನಲ್ಲಿ 21 ಪರೀಕ್ಷಾ ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಉಪಮುಖ್ಯ ಅದೀಕ್ಷಕರು, ಮಾರ್ಗಾಧಿಕಾರಿಗಳು, ಸ್ಥಾನಿಕ ಜಾಗೃತ ದಳ, ಮೊಬೈಲ್ ಸ್ವಾಧೀನಧಿಕಾರಿ ಹಾಗೂ ಪರೀಕ್ಷಾ ಮಂಡಳಿಯ ನಿಯಮಾನುಸಾರ ಸಿಸಿ ಕ್ಯಾಮೆರಾಗಳ ಅಳವಡಿಕೆ, ಆಸನದ ವ್ಯವಸ್ಥೆ, ಪಂಚಾಯತಿಗಳಿಂದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಪರೀಕ್ಷೆಗಳು ಸುಗಮವಾಗಿ ನಡೆಯಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾಗಿ ತಿಳಿಸಿದರು.ಪಿಎಸ್‌ಐ ಚಂದ್ರಶೇಖರ ಹೆರಕಲ ಮಾತನಾಡಿ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದರು. ತಾಪಂ ಇಒ ನವೀನಪ್ರಸಾದ ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಭಯ, ಆತಂಕಕ್ಕೊಳಗಾಗದೇ ಧೈರ್ಯವಾಗಿ ಪರೀಕ್ಷೆ ಎದುರಿಸುವ ಮೂಲಕ ವಲಯಕ್ಕೆ ಕೀರ್ತಿ ತರಲು ಪ್ರಯತ್ನಿಸಬೇಕು ಎಂದು ಚುನಾವಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಸಿಡಿಪಿಒ ಯಲ್ಲಪ್ಪ ಗದಾಡಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ, ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಹೆಸ್ಕಾಂ ಅಧಿಕಾರಿ ಎಸ್.ಎಸ್.ಮಠ, ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಗಂಗರಡ್ಡಿ, ನಾರಾಯಣ ನಿಪ್ಪಾಣಿ, ಸಾಹಿತಿ ಬಾಲಶೇಖರ ಬಂದಿ, ವಿವಿಧ ಶಿಕ್ಷಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಪರೀಕ್ಷಾ ಸಿಬ್ಬಂದಿ ಇದ್ದರು. ಶಿಕ್ಷಣ ಸಂಯೋಜಕ ಕೆ.ಬಸವರಾಜ ಮತ್ತು ಸತೀಶ ಬಿ.ಎಸ್ ನಿರೂಪಿಸಿದರು, ಶಿಕ್ಷಕ ಎ.ಪಿ.ಪರಸನ್ನವರ ವಂದಿಸಿದರು.