ಕನ್ನಡದ ತೇರನ್ನು ಒಂದಾಗಿ ಮುನ್ನಡೆಸೋಣ

KannadaprabhaNewsNetwork |  
Published : Nov 02, 2025, 04:15 AM IST
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿದರು | Kannada Prabha

ಸಾರಾಂಶ

ಅಖಂಡ ಕರ್ನಾಟಕ ನಿರ್ಮಾಣದ ಕನಸು, ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈ ಜೋಡಿಸೋಣ. ಕನ್ನಡ ನಾಡು-ನುಡಿ, ನೆಲ-ಜಲ ಸಂರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ. ನಾವೆಲ್ಲರೂ ಒಂದಾಗಿ ಕನ್ನಡದ ತೇರನ್ನು ಮುನ್ನಡೆಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಖಂಡ ಕರ್ನಾಟಕ ನಿರ್ಮಾಣದ ಕನಸು, ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈ ಜೋಡಿಸೋಣ. ಕನ್ನಡ ನಾಡು-ನುಡಿ, ನೆಲ-ಜಲ ಸಂರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ. ನಾವೆಲ್ಲರೂ ಒಂದಾಗಿ ಕನ್ನಡದ ತೇರನ್ನು ಮುನ್ನಡೆಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭುವನೇಶ್ವರಿ ದೇವಿಯ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಸರ್ವಜನರ ಹಿತಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಗಡಿ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿರುತ್ತದೆ ಎಂದರು.ಜಿಲ್ಲೆಯಲ್ಲಿ ಪ್ರಸ್ತುತ ಹಿಂಗಾರು ಹಂಗಾಮಿಗೆ 4.25 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಬಿತ್ತನೆಗೆ ಬೇಕಾಗುವ ಸುಮಾರು 26,092 ಕ್ವಿಂಟಲ್ ರಷ್ಟು ವಿವಿಧ ಬಿತ್ತನೆ ಬೀಜಗಳನ್ನು ದಾಸ್ತಾನುಕರಿಸಲಾಗಿದ್ದು, ಇಲ್ಲಿವರೆಗೆ 10,532 ಕ್ವಿಂಟಲ್ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಬಿತ್ತನೆ ಬೀಜದ ಕೊರತೆ ಇರುವುದಿಲ್ಲ. ಸುಮಾರು 94,308 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದ್ದು, ಇಲ್ಲಿಯವರೆಗೆ ಸುಮಾರು 1.82 ಹೆಕ್ಟೇರ್ ಬಿತ್ತನೆ ಆಗಿರುತ್ತದೆ. ಜಿಲ್ಲೆಯ 9000 ರೈತರಿಗೆ ಒಟ್ಟು ₹93.51 ಕೋಟಿ ಮೊತ್ತದ ವಿಮೆ ಪರಿಹಾರ ವಿತರಿಸಲಾಗಿದೆ ಎಂದರು.ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 41,834 ಅರ್ಜಿಗಳನ್ನು ಪರಿಗಣಿಸಲಾಗಿರುತ್ತದೆ. ಈ ಪೈಕಿ 14,082 ಪುರುಷರು ಹಾಗೂ 11,482 ಮಹಿಳೆಯರು ಸೇರಿದಂತೆ ಒಟ್ಟಾರೆ 25,564 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಉಳಿದ ಅರ್ಜಿದಾರರ ದಾಖಲೆಗಳ ಪರಿಶೀಲನೆ ನಡೆದಿರುತ್ತದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 10,51,697 ಸಂಖ್ಯೆಯ ಅರ್ಹ ಫಲಾನುಭವಿಗಳಿದ್ದು, ಸದರಿ ಯೋಜನೆಯಡಿ ಒಟ್ಟು 10,28,618 ಸಂಖ್ಯೆಯ ಬಳಕೆದಾರರು ನೋಂದಾಯಿಸಿದ್ದು, ಎಲ್ಲ ಅರ್ಹ ಫಲಾನುಭವಿಗಳಿಗೆ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸರಾಸರಿ ಬಳಕೆಯ ಆಧಾರದ ಮೇಲೆ ಮಾಸಿಕ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್‌ನ್ನು ನೀಡಲಾಗುತ್ತಿದೆ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ವಿಭಾಗದಿಂದ ₹221.49 ಕೋಟಿಗಳ ವೆಚ್ಚದಲ್ಲಿ 45 ಆರೋಗ್ಯ ಇಲಾಖೆಯ ವಿವಿಧ ಹಂತದ ಆಸ್ಪತ್ರೆಗಳ ಕಟ್ಟಡ ನಿರ್ಮಾಣದ ಕಾಮಗಾರಿಗಳು ಪೂರ್ಣಗೊಂಡಿದ್ದು, 19 ಕಾಮಗಾರಿಗಳು ಪ್ರಗತಿಯಲ್ಲಿವೆ. ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನಾರೋಗ್ಯ, ಸಿಎಂ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಒಟ್ಟು 6 ಲಕ್ಷ ಫಲಾನುಭವಿಗಳಿಗೆ ₹424 ಕೋಟಿ ವಿತರಿಸಲಾಗಿದೆ. ಬೆಳಗಾವಿ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ನಗರ ಬಸ್ ನಿಲ್ದಾಣವನ್ನು ಸಿಎಂ ಸಿದ್ದರಾಮಯ್ಯನವರು ಉದ್ಘಾಟಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಪಿಎಂ-ಉಷಾ(ಮೇರು) ಕಟ್ಟಡ ಕಾಮಗಾರಿಗಳು ಮತ್ತು ಹೆದ್ದಾರಿಯಿಂದ ವಿಶ್ವವಿದ್ಯಾನಿಲಯದ ರಸ್ತೆ ಕಾಮಗಾರಿಗೆ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿರುತ್ತಾರೆ ಎಂದರು.ಜಿಲ್ಲೆಯಲ್ಲಿ 53ಕ್ಕೂ ಹೆಚ್ಚು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ₹8320 ಕೋಟಿಗಿಂತ ಹೆಚ್ಚು ಬಂಡವಾಳ ಹೂಡಿಕೆ ಮಾಡಿ ಸುಮಾರು 27 ಸಾವಿರ ಜನರಿಗೆ ಉದ್ಯೋಗ ನೀಡಿವೆ. ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ ₹38.95 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಈ ಯೋಜನೆಯಲ್ಲಿ 7 ಕೆರೆಗಳ ಪುನಶ್ಚೇತನ ಹಾಗೂ 7 ಉದ್ಯಾನವನಗಳ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ. ಈ ಪೈಕಿ ಕೋಟೆಕೆರೆ ಅಭಿವೃದ್ಧಿ ಹಾಗೂ ಪುನುಶ್ಚೇತನಕ್ಕಾಗಿ ₹9.20 ಕೋಟಿ ಅಂದಾಜು ಮೊತ್ತದ ಕಾಮಗಾರಿ ನಿರ್ವಹಿಸಲು ಒಪ್ಪಿಗೆ ಪತ್ರ ನೀಡಲಾಗಿದ್ದು, ₹5.75 ಕೋಟಿ ಮೊತ್ತದ 7 ಉದ್ಯಾನವನಗಳ ಸುಧಾರಣೆ ಕಾಮಗಾರಿಗಳಿಗೆ ಟೆಂಡರ ಕರೆಯಲಾಗಿದೆ. ಬೆಳಗಾವಿ ನಗರದಲ್ಲಿ ಒಳಚರಂಡಿ ನಿರ್ಮಾಣ ಹಾಗೂ ಹಾಲಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ₹45 ಕೋಟಿಗಳ ಮೊತ್ತವನ್ನು ಎನ್.ಜಿ.ಟಿ ಹಾಗೂ ಮಹಾನಗರ ಪಾಲಿಕೆಯ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.ಬೆಳಗಾವಿ ತಾಲೂಕಿನ ಎನ್.ಎಚ್.4ಎ (ದೇಸೂರ)ದಿಂದ ಹುದಲಿವರೆಗೆ ಕೂಡುರಸ್ತೆ ಕಿ.ಮೀ 63.34 ರೈಲ್ವೆ ಮೇಲ್ಸೆತುವೆ ನಿರ್ಮಾಣ ಮಾಡುವುದು (ಹುದಲಿ ಗ್ರಾಮದ ಹತ್ತಿರ) ಕಾಮಗಾರಿಯು ₹35.00 ಕೋಟಿ ಅನುದಾನದಡಿ ಮಂಜೂರಾಗಿರುತ್ತದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬೆಳಗಾವಿ ಜಿಲ್ಲೆಯ ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ 25 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಒಟ್ಟು 262 ಜನವಸತಿಗಳಿಗೆ ನದಿ ಜಲ-ಮೂಲದಿಂದ ಹಾಗೂ ಚಿಕ್ಕೋಡಿ ವಿಭಾಗದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ 38 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಒಟ್ಟು 717 ಜನವಸತಿಗಳಿಗೆ ನದಿ ಜಲ-ಮೂಲದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಶಾಸಕರಾದ ರಾಜು(ಆಸೀಫ್)ಸೇಠ, ಮಹಾಪೌರರಾದ ಮಂಗೇಶ ಪವಾರ, ಉಪಮಹಾಪೌರರಾದ ವಾಣಿ ವಿಲಾಸ ಜೋಶಿ, ನಗರ ಸೇವಕರು, ಬೆಲಘಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್, ಪೊಲೀಸ್‌ ಆಯುಕ್ತ ಭೋರಸೆ ಗುಲಾಭರಾವ್ ಭೂಷಣ, ಜಿಲ್ಲಾ ಪೊಲೀಸ್‌ ವರಿಷ್ಠಾಸಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ‌ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪವಿಭಾಗಾಧಿಕಾರಿ ಶ್ರವಣ ನಾಯಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.ತಪ್ಪಿದ ದುರಂತ

ಗಡಿನಾಡು ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ ಪರೇಡ್ ವೀಕ್ಷಣೆಗೆ ತೆರಳುವ ಜೀಪ್ ಡಿಸೇಲ್ ಸೋರಿಕೆಯಾದ ಪರಿಣಾಮ ದೊಡ್ಡ ಅನಾಹುತ ತಪ್ಪಿದ ಘಟನೆ ಶನಿವಾರ ನಡೆದಿದೆ. ಧ್ವಜಾರೋಹಣ ಬಳಿಕ ಪರೇಡ್ ವೀಕ್ಷಣೆಗೆ ಹೋಗುವಾಗ ಸಚಿವರು ಜೀಪ್ ಏರುವ ಮುನ್ನ ಡಿಸೇಲ್ ಸೋರಿಕೆಯಾಗಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ಹೊತ್ತದಂತೆ ಫೈಯರ್ ಕಂಟ್ರೋಲ್ ಗ್ಯಾಸ್ ಸಿಂಪಡಿಸಿ, ಜೀಪ್ ತಳ್ಳಿಕೊಂಡು ಮೈದಾನದಿಂದ ಹೊರ ತೆಗೆದುಕೊಂಡು ಹೋದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಕರ ಬಸ್‌ ಬೆಂಕಿಗೆ ಐವರು ಸಜೀವ ದಹನ
ಜಗಳದಲ್ಲಿ ಗಂಡನ ಕೊಲೆ ಮಾಡಿಅನಾರೋಗ್ಯದ ಕಥೆ ಕಟ್ಟಿದ ಪತ್ನಿ