ಬಾರಿಸು ಕನ್ನಡ ಡಿಂಡಿಮವ, ಮರೆಯದೆ ಮಾಡೋಣ ಮತದಾನವ

KannadaprabhaNewsNetwork |  
Published : May 06, 2024, 12:39 AM IST
ಪೊಟೋ: 5ಎಸ್‌ಎಂಜಿಕೆಪಿ01ಶಿವಮೊಗ್ಗದ ನೆಹರು ಮೈದಾನದಲ್ಲಿ ಭಾನುವಾರ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಮ್ಯಾರಾಥಾನ್ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥನಾಯಕ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಶಿವಮೊಗ್ಗದ ನೆಹರು ಮೈದಾನದಲ್ಲಿ ಭಾನುವಾರ ಮತದಾನ ಜಾಗೃತಿಗಾಗಿ, ಮ್ಯಾರಾಥಾನ್‌ ಏರ್ಪಡಿಸಲಾಗಿತ್ತು. ಇ ವೇಳೆ ಮತದಾನದ ಮಹತ್ವ ಸಾರುವ ವಿವಿಧ ಘೋಷಣೆಗಳು ಮೊಳಗಿದವು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಮ್ಮನ್ನು ಯಾರು ಆಳಬೇಕೆಂಬ ತೀರ್ಮಾನ ಮತದಾರರ ಕೈಯಲಿದೆ. ಆದ್ದರಿಂದ ಎಲ್ಲ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ತಮ ನಾಯಕರನ್ನು ಆರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥನಾಯಕ್ ಕರೆ ನೀಡಿದರು.

ಇಲ್ಲಿನ ನೆಹರು ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಮ್ಯಾರಾಥಾನ್‌ಗೆ ಚಾಲನೆ ನೀಡಿಮಾತನಾಡಿ, ಮತದಾನ ಮಾಡಲು ಇಚ್ಛೆ ಇರುವವರಿಗೆ ಮತದಾನ ಹಕ್ಕು ಆಗುತ್ತದೆ. ಇತರರು ಮತದಾನ ಮಾಡಬೇಕೆಂದು ಪ್ರೇರೇಪಿಸುವುದು ಕರ್ತವ್ಯ. ಯುವಜನತೆ ದೇಶದ ದೊಡ್ಡ ಶಕ್ತಿ ಮತ್ತು ಜನರನ್ನು ತಲುಪಲು ದೊಡ್ಡ ಮಾಧ್ಯಮ. ಆದ್ದರಿಂದ ನಿಮ್ಮ ಮೂಲಕ ಎಲ್ಲರನ್ನು ತಲುಪುವ ಕೆಲಸ ಮಾಡಲಾಗುತ್ತಿದೆ ಎಂದರು.

ಮೊದಲು 21 ವರ್ಷ ತುಂಬಿದವರಿಗೆ ಮಾತ್ರ ಮತದಾನದ ಅವಕಾಶ ಇತ್ತು. ನಂತರ ಸಂವಿಧಾನಕ್ಕೆ ತಿದ್ದುಪಡಿ ತಂದು 18 ವರ್ಷ ತುಂಬಿದವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ. ನಾವೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂಬ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯ ನೋಟಾ ಮತದಾನದ ಅವಕಾಶ ನೀಡಿದೆ. ಮತದಾರರಿಗೆ ಒಂದು ವೇಳೆ ಯಾವ ಅಭ್ಯರ್ಥಿಗೂ ಮತ ಹಾಕಲು ಇಷ್ವವಿಲ್ಲದಿದ್ದರೆ ನೋಟಾ ಬಳಕೆ ಮಾಡಬಹುದು ಎಂದು ತಿಳಿಸಿದರು.

ನಾವು ಆರಿಸುವ ಜನಪ್ರತಿನಿಧಿಗಳು ಕಾನೂನು ರೂಪಿಸುವವವರಾದ್ದರಿಂದ ಅತ್ಯಂತ ಜವಾಬ್ದಾರಿಯಿಂದ ನಾಯಕರನ್ನು ಆರಿಸಬೇಕಿದ್ದು, ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗಹವಹಿಸಬೇಕು ಹಾಗೂ ಇತರರನ್ನೂ ಪ್ರೇರೇಪಿಸುವ ಕೆಲಸ ಆಗಬೇಕು ಎಂದರು.

ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೀಜ್ ಮಾತನಾಡಿ, ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದರು. ಹಾಗೂ ಯಾವುದೇ ರೀತಿಯ ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ಸಿವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ದೂರು ನೀಡಬಹುದು. ಅಥವಾ 1950 ಗೆ ಸಹ ಕರೆ ಮಾಡಿ ದೂರು ಸಲ್ಲಿಸಬಹುದು ಎಂದರು.

ಮತದಾನದ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ವಿವಿಧತೆಯಲ್ಲಿ ಏಕತೆ ಸಾರುವ ‘ನಾ ಭಾರತ ಭಾರತ ನನ್ನಲ್ಲಿ’ ಗೀತೆಯನ್ನು ಹೇಳಿಕೊಡಲಾಯಿತು. ಇದೇ ಸಂದರ್ಭದಲ್ಲಿ ಮಾಚೇನಹಳ್ಳಿ ಕೆಎಸ್‍ಆರ್‌ಪಿ ತಂಡವು ಬ್ಯಾಂಡ್ ಮೂಲಕ ‘ನಾ ಭಾರತ’ ಗೀತೆಯನ್ನು ನುಡಿಸಿ ಎಲ್ಲರ ಗಮನ ಸೆಳೆದರು.ಘೋಷಣೆಗಳ ಮೂಲಕ ಜಾಗೃತಿ: ಮ್ಯಾರಾಥಾನ್‍ನಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದು, ಮ್ಯಾರಾಥಾನ್ ನೆಹರು ಕ್ರೀಡಾಂಗಣದಿಂದ ಮಹಾವೀರ ಸರ್ಕಲ್, ಶಿವಪ್ಪನಾಯಕ ಸರ್ಕಲ್, ಅಮೀರ್ ಅಹಮದ್ ಸರ್ಕಲ್, ಗೋಪಿ ಸರ್ಕಲ್, ಜೈಲ್ ಸರ್ಕಲ್, ಶಿವಮೂರ್ತಿ ಸರ್ಕಲ್ ಮೂಲಕ ಸಾಗಿ ಬಂದು ನೆಹರೂ ಮೈದಾನ ತಲುಪಿತು.

ಮ್ಯಾರಾಥಾನ್‍ನಲ್ಲಿ ಚುನಾವಣಾ ಪರ್ವ ದೇಶದ ಗರ್ವ ಎಂಬ ಘೋಷಣೆಯೊಂದಿಗೆ ‘ನೋಡಿ ನಾವು ಶಿವಮೊಗ್ಗದ ಜನ ಮಾಡೇ ಮಾಡ್ತಿವಿ ಮತದಾನ’ ‘ಮಲೆನಾಡ ಹೆಬ್ಗಾಗಿಲು ನಮ್ಮೂರು ಮತದಾನ ಮಾಡಲು ಮರೆಯದಿರು’ ‘ಮತದಾನ ನಿಮ್ಮ ಮಹಾಶಕ್ತಿ-ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ‘ಬಾರಿಸು ಕನ್ನಡ ಡಿಂಡಿಮವ, ಮರೆಯದೆ ಮಾಡೋಣ ಮತದಾನವ’ ಎಂಬಿತ್ಯಾದಿ ಘೋಷಣೆಗಳುಳ್ಳ ಪೋಸ್ಟರ್‌ಗಳನ್ನು ಹಿಡಿದು ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ರವರು ಮ್ಯಾರಾಥಾನ್‍ನಲ್ಲಿ ಮೊದಲು ಬಂದ ಮೂರು ಅಭ್ಯರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿದರು. ಹಾಗೂ ಮೊದಲು ತಲುಪಿದ 47 ಜನರಿಗೆ ಪದಕವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಸಿಪಿಓ ಗಾಯತ್ರಿ, ಯೋಜನಾ ನಿರ್ದೇಶಕ ರಂಗಸ್ವಾಮಿ, ಕೆಎಸ್‍ಆರ್‍ಪಿ ಕಮಾಂಡೆಂಟ್ ಯುವರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಂಜುನಾಥಸ್ವಾಮಿ, ಚುನಾವಣಾ ಐಕಾನ್ ಡಾ.ಶುಬ್ರತಾ, ಮಹಾನಗರಪಾಲಿಕೆ, ಜಿ.ಪಂ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.ಡೊಳ್ಳು, ಯೋಗಾಸನ, ಗಾಯನ, ಭರತನಾಟ್ಯದ ಮೂಲಕ ಮತದಾರರ ಜಾಗೃತಿಸಾಗರ: ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಮೌಲ್ಯ ಉಳಿಸಬೇಕು ಎಂದು ಉಪವಿಭಾಗಾಧಿಕಾರಿ ಯತೀಶ್ ಆರ್. ಹೇಳಿದರು. ಇಲ್ಲಿನ ಸ್ವೀಪ್ ಸಮಿತಿ ವತಿಯಿಂದ ಶನಿವಾರ ಡೊಳ್ಳು, ಯೋಗಾಸನ, ಗಾಯನ, ಭರತನಾಟ್ಯದ ಮೂಲಕ ಮತದಾರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮೇ ೭ರಂದು ನಡೆಯಲಿರುವ ಲೊಕಸಭಾ ಚುನಾವಣೆಯಲ್ಲಿ ಶೇ. ೧೦೦ ಮತದಾನ ಮಾಡಿಸಬೇಕು ಎಂಬ ಗುರಿ ಇರಿಸಿಕೊಂಡು ಸ್ವೀಪ್ ಕಾರ್ಯಕ್ರಮ ತಾಲೂಕಿನಾದ್ಯಂತ ನಡೆಸಲಾಗಿದೆ ಎಂದರು.ಮತದಾರರು ಕಡ್ಡಾಯವಾಗಿ ಮತದಾನ ಮಾಡಲು ಮನೆಯಿಂದ ಹೊರಬರಬೇಕು. ಅವರ ಮನವೊಲಿಸಲು ಬೇಕಾದ ಎಲ್ಲಾ ಕಾರ್ಯಕ್ರಮ ಅವರಿಗೆ ಮನವರಿಕೆಯಾಗುವ ರೀತಿ ತಲುಪಿಸುವ ಪ್ರಯತ್ನ ನಡೆಸಲಾಗಿದೆ. ನಮ್ಮ ಕಲಾಪ್ರಕಾರವಾಗಿರುವ ಭರತನಾಟ್ಯ, ಡೊಳ್ಳು ಕುಳಿತ, ಗಾಯನ ಹಾಗೂ ಯೋಗಾಸನ ಮೂಲಕ ಜನರನ್ನು ತಲುಪಿ ಅವರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಅಂತಿಮ ಪ್ರಯತ್ನ ನಡೆಸಲಾಗಿದೆ. ಮತದಾನದ ದಿನ ಯಾರೂ ಪ್ರವಾಸ, ಬೇರೆಬೇರೆ ಕಾರ್ಯಕ್ರಮ ಇದೆ ಎಂದು ಸಬೂಬು ಹೇಳದೆ ಮತದಾನದಲ್ಲಿ ಪಾಲ್ಗೊಳ್ಳಿ ಎಂದು ಹೇಳಿದರು. ತಹಸೀಲ್ದಾರ್ ಸೈಯದ್ ಕಲಿಮುಲ್ಲಾ, ಪೌರಾಯುಕ್ತ ಎಚ್.ಲಿಂಗರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ. ನಾಗಪ್ಪ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ, ಸಹಾಯಕ ನಿರ್ದೇಶಕ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!