ಶಿವಮೊಗ್ಗ: ಅಂಬೇಡ್ಕರ್‌ರವರು ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಸಮಾನತೆಗಾಗಿ ಹೋರಾಡಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ. ಸಂಘಟನೆಯಿಂದ ಮಾತ್ರ ಶಕ್ತಿ ಎಂದು ಅಂಬೇಡ್ಕರ್‌ರವರು ತೋರಿಸಿದ್ದಾರೆ ಎಂದ ಅವರು, ಅಂಬೇಡ್ಕರ್‌ರವರು ತಮ್ಮ ಜೀವನದುದ್ದಕ್ಕೂ ಜಾತಿ ವ್ಯವಸ್ಥೆ, ಅಸೃಶ್ಯತೆ ವಿರುದ್ಧ ಹೋರಾಡಿ, ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ಎಲ್ಲರೂ ಅಂಬೇಡ್ಕರ್ ಅವರ ಹಾದಿಯಲ್ಲಿ ಒಟ್ಟಾಗಿ ನಡೆಯೋಣ ಎಂದು ಕರೆ ನೀಡಿದರು.
ನಮ್ಮ ಸಂವಿಧಾನದ ಪೀಠಿಕೆ ಬಗ್ಗೆ ಮುಖ್ಯವಾಗಿ ವಿದ್ಯಾರ್ಥಿಗಳು ತಿಳಿಯಬೇಕೆಂಬ ಉದ್ದೇಶದಿಂದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯವಾಗಿ ಓದುವ ಆದೇಶವನ್ನು ರಾಜ್ಯ ಸರ್ಕಾರ ಮಾಡಿದ್ದು, 1.8 ಕೋಟಿ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ತಿಳಿಸಿದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಭೂ ಮಂಡಲ ಇರುವವರೆಗೆ ಯಾರೂ ಬದಲಾಯಿಸದಂತಹ ಸಂವಿಧಾನ ನೀಡಿದ ಧೀಮಂತ ದಾರ್ಶನಿಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ಸರ್ಕಾರಗಳಿಂದ ಇಂದು ಪ.ಜಾ ಪ.ಪಂ ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ, ಉಚಿತ ಉಜ್ವಲ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಹಿಂದುಳಿದವರ ಏಳಿಗೆಗಾಗಿ ನೀಡಲಾಗುತ್ತಿದೆ ಎಂದರು.
ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಇಡೀ ಪ್ರಪಂಚ ಗೌರವಯುತವಾಗಿ, ಪ್ರೀತಿಯಿಂದ ಕಾಣುತ್ತಿದೆ. ಅವರು ಬೆಳೆದು ಬಂದ ರೀತಿ ಮಾದರಿಯಾಗಿದ್ದು ನಮ್ಮೆಲ್ಲರ ಧ್ವನಿ ಅವರು. ಮಹಿಳಾ ಸಮಾಜನತೆ ಬಗ್ಗೆ ಚಿಂತಿಸಿದ ಮೊದಲಿಗರು ಎಂದರು.ಉಪನ್ಯಾಸ ನೀಡಿ ಮಾತನಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮೇಟಿ ಮಲ್ಲಿಕಾರ್ಜುನ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜಗತ್ತು ಕಂಡ ಮುಖ್ಯ ಚಿಂತಕ. ಅಂಬೇಡ್ಕರ್ ಅವರು ಲೋಕ ಜ್ಞಾನಿ. 130 ವರ್ಷಗಳ ಕಾಲ ಬೇರೆ ಬೇರೆ ಸ್ವರೂಪದಲ್ಲಿ ಇವರನ್ನು ಅನುಸರಿಸಲಾಗುತ್ತಿದೆ. ಅವರು ಪ್ರತಿಪಾದಿಸಿದ ವಿಚಾರಗಳನ್ನು ರಾಜ್ಯ ಸರ್ಕಾರ 22 ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಸಂಪುಟಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಅದನ್ನೆಲ್ಲ ನಾವು ಓದಬೇಕಿದೆ. 537 ವಿಶೇಷ ಭಾಷಣ ಮಾಡಿದ್ದಾರೆ. ಪ್ರಭುತ್ವ ಮತ್ತು ಜನತೆ ಕುರಿತು ಮಹತ್ವದ ಚಿಂತನೆ ನೀಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಸಕ್ಷಮ ಅಂಗನವಾಡಿ ಕೇಂದ್ರಗಳಿಗೆ ಎಲ್‌ಇಡಿ ಟಿವಿ ವಿತರಣೆ ಮಾಡಲಾಯಿತು. ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷ ತುಂಬಿದ ಫಲಾನುಭವಿಗಳಿಗೆ ಪರಿಪಕ್ವ ಮೊತ್ತ ನೀಡಲಾಯಿತು. ಸುಕನ್ಯಾ ಸಮೃದ್ದಿ ಯೋಜನೆಯ ಫಲಾನುಭವಿಗಳಿಗೆ ಪಾಸ್‌ಬುಕ್ ವಿತರಣೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಾದೇಶ ಪತ್ರ ನೀಡಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ಡಿ.ಎಸ್.ಅರುಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಷಡಕ್ಷರಿ, ಸೂಡಾ ಅಧ್ಯಕ್ಷರಾದ ಎಚ್.ಎಸ್.ಸುಂದರೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಒ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಎಸಿ ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದು ಶಕ್ತಿ. ಅವರ ಚಿಂತನೆಗಳನ್ನು ಅಳವಡಿಸಿಕೊಂಡು ನಾವೆಲ್ಲ ಒಂದೇ ಎಂಬ ಭಾವನೆಯಿಂದ ರಾಜಕೀಯ, ಸಾಮಾಜಿಕವಾಗಿ ಜೊತೆಯಾಗಿ ಸಾಗಬೇಕು. ಇದು ಅಂಬೇಡ್ಕರ್ ಅವರ ಆಶಯವಾಗಿದ್ದು ಅದರಂತೆ ನಾವು ನಡೆದುಕೊಳ್ಳಬೇಕು.
ಎಸ್.ಎನ್.ಚನ್ನಬಸಪ್ಪ, ಶಾಸಕ