ಕನ್ನಡಾಂಬೆಯ ಬಾವುಟವನ್ನು ಸಂಕೇತಿ ಮಾತೆಗೂ ತೊಡಿಸೋಣ: ಡಾ.ಕೆ.ಅನಂತರಾಮು

KannadaprabhaNewsNetwork |  
Published : Dec 16, 2024, 12:48 AM IST
39 | Kannada Prabha

ಸಾರಾಂಶ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಬೇಕು. ಮೈಸೂರು ಸಾಹಿತ್ಯ ದಾಸೋಹದ ಮಾದರಿಯಲ್ಲಿ ಮೈಸೂರು ಉತ್ಸವ ಮೊದಲಾದ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಬೇಕು. ಸಾಹಿತ್ಯ ರಚನೆಗೆ ನಮ್ಮನ್ನು ನಾವು ತೆರೆದುಕೊಂಡಿರಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕದಲ್ಲಿರಬೇಕು. ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡಾಂಬೆಯ ಬಾವುಟವನ್ನು ಸಂಕೇತಿ ಮಾತೆಗೂ ತೊಡಿಸೋಣ. ಮೈಸೂರು ಸಾಹಿತ್ಯ ದಾಸೋಹದ ಮಾದರಿಯಲ್ಲಿ ಮೈಸೂರು ಉತ್ಸವ ಮೊದಲಾದ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆಸಬೇಕು ಎಂದು ಸಾಹಿತಿ ಡಾ.ಕೆ. ಅನಂತರಾಮು ಹೇಳಿದರು.

ಜಯನಗರದ ನಾಚಾರಮ್ಮ ಭವನದಲ್ಲಿ ಭಾನುವಾರ ಸಂಕೇತಿ ಸಮಾಜದಿಂದ ಆಯೋಜಿಸಿದ್ದ 2ನೇ ಸಂಕೇತಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಬೇಕು. ಮೈಸೂರು ಸಾಹಿತ್ಯ ದಾಸೋಹದ ಮಾದರಿಯಲ್ಲಿ ಮೈಸೂರು ಉತ್ಸವ ಮೊದಲಾದ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಬೇಕು. ಸಾಹಿತ್ಯ ರಚನೆಗೆ ನಮ್ಮನ್ನು ನಾವು ತೆರೆದುಕೊಂಡಿರಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕದಲ್ಲಿರಬೇಕು. ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳಬೇಕು. ಅಧ್ಯಯನದಿಂದ ಮಾತ್ರವೇ ನಾವು ಶಕ್ತಿವಂತರಾಗುತ್ತೇವೆ ಎನ್ನುವುದನ್ನು ಮರೆಯಬಾರದು ಎಂದರು.

ಸಂಕೇತಿ ಸಮಾಜದವರು ಅಂದಾಜು 40ಸಾವಿರ ಇದ್ದೇವೆ. ನಮ್ಮ ಸಂಖ್ಯೆ ಚಿಕ್ಕದಿದ್ದರೂ, ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದೇವೆ. ನಾವೆಲ್ಲರೂ ಕನ್ನಡವನ್ನು ಭದ್ರವಾಗಿ ಹಿಡಿದುಕೊಂಡು ಸಂಕೇತಿ ಸಾಹಿತ್ಯ ಬೆಳೆಸಬೇಕು. ಭಾರತ ಮಾತೆ, ಕನ್ನಡ ಮಾತೆ ಹಾಗೂ ಸಂಕೇತಿ ಮಾತೆ ಎಂಬ ಮೂವರು ತಾಯಂದಿರು ನಮಗಿದ್ದಾರೆ. ಆ ಮೂವರನ್ನೂ ಗೌರವಿಸಬೇಕು ಎಂದರು.

ಕನ್ನಡ ಸಾಹಿತಿಗಳು ಸನಾತನದ ಬಗ್ಗೆಯೂ ತಿಳಿದುಕೊಂಡಿರಬೇಕು. ವೇದ, ಶಾಸ್ತ್ರ ಹಾಗೂ ಪುರಾಣದ ಪರಿಚಯ ಇರಬೇಕು. ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಸಾಹಿತ್ಯದ ಬಗ್ಗೆ ಮಾಹಿತಿ ಹೊಂದಿರಬೇಕು. ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯ ಮೊದಲಾದ ಧಾರೆಗಳ ಪರಿಚಯ ಇಟ್ಟುಕೊಳ್ಳಬೇಕು. ಸಮೃದ್ಧ ಜಾನಪದ ಸಾಹಿತ್ಯದ ಮೇಲೂ ಕಣ್ಣಾಡಿಸಬೇಕು. ಆಗ ನಮ್ಮ ಸಾಹಿತ್ಯ ಪರಿಣಾಮಕಾರಿಯಾಗಿ ರಚನೆ ಆಗುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ.ಎಲ್.ಎಂ.ಎಲ್. ಶಾಸ್ತ್ರಿ ಮಾತನಾಡಿ, ಸಂಕೇತಿಗಳ ಸಾಹಿತ್ಯ ಸಮೃದ್ಧವಾದುದು. ಜ್ಞಾನದ ವಿಷಯದಲ್ಲಿ ನಾವು ಬ್ರಾಹ್ಮಣರಲ್ಲಿ ಅತ್ಯಂತ ಶ್ರೀಮಂತರು. ಸಂಕೇತಿ ತನ ಜಗತ್ತಿನಲ್ಲಿ ಸರ್ವಶ್ರೇಷ್ಠವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಕೇತಿ ವ್ಯಾಕರಣ ರಚನೆ ಕಾರ್ಯ ಸಮರ್ಪಕವಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿವೆ ಎಂದರು.

ಪ್ರತಿಮೆಗಳ ಮೂಲಕ ಅನುವಾದ ಮಾಡುವಾಗ ಮೂಲ ಕವಿ, ಲೇಖಕರ ಹೃದಯ ತಿಳಿದುಕೊಳ್ಳಬೇಕು. ಗದ್ಯ ವಿಸ್ತಾರ. ಆದರೆ, ಪದ್ಯ ಸೀಮಿತವಾದುದು. ನಮ್ಮ ಭಾವನೆಯನ್ನು ಪ್ರತಿಮೆಗಳ ಮೂಲಕ ಹೇಳಿದರೆ ಅದರ ಪರಿಣಾಮ ಹೆಚ್ಚಿರುತ್ತದೆ. ಓದಿದವರಿಗೆ ಇಷ್ಟವಾಗುತ್ತದೆ. ಈ ಪ್ರತಿಮಾ ವಿಧಾನ ಶಾಸ್ತ್ರಗಳಲ್ಲೂ ಉಂಟು ಎಂದರು.

ಲಿಂಗದಹಳ್ಳಿ ವಾರ್ತಾ ಸಂಪಾದಕ ಎಲ್.ಸಿ. ಆನಂದಮೂರ್ತಿ ಸಂಕೇತಿ ಗ್ರಂಥಸೂಚಿ ಪುಸ್ತಕ ಬಿಡುಗಡೆಗೊಳಿಸಿದರು.

ಪುಸ್ತಕ ಪ್ರದರ್ಶನ, ಶ್ರೀಮಾತಾ ನಾಚಾರಮ್ಮ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕವಿಗೋಷ್ಠಿ ನಡೆಯಿತು.

ಸಂಕೇತಿ ಸಂಘದ ಅಧ್ಯಕ್ಷ ಎಚ್.ಎಸ್. ಅನಂತ ಪದ್ಮನಾಭ, ಕೌಶಿಕ ಸಂಕೇತಿ ಸಂಘದ ಅಧ್ಯಕ್ಷೆ ಸರೋಜಾ ಹಿರಿಯಣ್ಣ, ಸಮಾಜದ ಆರ್.ಎನ್. ಪದ್ಮನಾಭ, ಎಸ್. ನಾಗರಾಜ್, ಸಂಸ್ಕೃತಿ ಸುಬ್ರಹ್ಮಣ್ಯ, ವೆಂಕಟಕೃಷ್ಣ ಸುಬ್ಬಣ್ಣ, ಆನಂದ್, ಪ್ರಣತಾರ್ಥಿ ಹರನ್, ವಿಜಯಾ ಹರನ್, ಆರ್.ಸಿ. ಮನೋರಮಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''