ದಸರಾ ಪರಂಪರೆ, ಸಂಸ್ಕೃತಿಯನ್ನು ಯುವಜನತೆಗೆ ತಿಳಿಸುವ ಕೆಲಸ ಆಗಲಿ: ಡಾ.ಲತಾ ರಾಜಶೇಖರ್‌

KannadaprabhaNewsNetwork |  
Published : Sep 11, 2025, 12:03 AM IST
4 | Kannada Prabha

ಸಾರಾಂಶ

ದಸರೆ ಎಂದರೇ ಸಾಮರಸ್ಯಕ್ಕೆ ಹೆಸರುವಾಸಿ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿಷ್ಠೆಯನ್ನು ಕೈಬಿಟ್ಟು ಜನಹಿತದ ಹಿತದೃಷ್ಟಿಯಿಂದ ಸಂಘರ್ಷದ ಬದಲು ಸಾಮರಸ್ಯದ ದಸರೆಗೆ ಮುಂದಾಗಬೇಕು. ಇಂದಿನ ಯುವಪೀಳಿಗೆಗೆ ದಸರಾ ಪರಂಪರೆ, ಸಂಸ್ಕೃತಿಯನ್ನು ತಿಳಿಸುವ ಕೆಲಸ ಆಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿನ ಯುವಪೀಳಿಗೆಗೆ ದಸರಾ ಪರಂಪರೆ, ಸಂಸ್ಕೃತಿಯನ್ನು ತಿಳಿಸುವ ಕೆಲಸ ಆಗಬೇಕು ಎಂದು ಕವಯತ್ರಿ ಡಾ.ಲತಾ ರಾಜಶೇಖರ್‌ ಹೇಳಿದರು.

ಜನಪರ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟವು ನಗರದ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಕಾಲೇಜಿನ ಎಂ. ವೆಂಕಟಕೃಷ್ಣಯ್ಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಮೈಸೂರು ದಸರಾ- ಒಂದು ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಯುವಜನತೆಗೆ ದಸರೆ ಎಂದರೇ ಯುವ ಸಂಭ್ರಮ ಹಾಗೂ ಯುವ ದಸರಾ ಬಗ್ಗೆ ಮಾತ್ರ ಗೊತ್ತಿದೆ. ಹೀಗಾಗಿ ವಿಜಯನಗರ ಸಾಮ್ರಾಜ್ಯ ಪತನಾನಂತರ ಮೈಸೂರು ರಾಜರು ದಸರೆಯನ್ನು ಹೇಗೆ ನಡೆಸಿಕೊಂಡು ಬಂದು, ವಿಶ್ವ ಪ್ರಸಿದ್ಧಿ ಮಾಡಿದರು ಎಂದು ತಿಳಿಸಬೇಕಾಗಿದೆ ಎಂದರು.

ದೇಶದ ವಿವಿಧೆಡೆ ಬೇರೆ ಬೇರೆ ಹೆಸರಿನಲ್ಲಿ ದಸರೆ ಆಚರಿಸಿದರೂ ಕೂಡ ಯಾವುದು ಕೂಡ ಮೈಸೂರಿನಷ್ಟು ಪ್ರಸಿದ್ಧಿಯಾಗಿಲ್ಲ. ಮೈಸೂರು ದಸರೆಗೆ ಅಷ್ಟೊಂದು ಮಹತ್ವ ಇದೆ, ಭಾರತೀಯ ಸಂಸ್ಕೃತಿಯಲ್ಲಿ ದುರ್ಗಾಪೂಜೆ ಅತ್ಯಂತ ಮಹತ್ವವಾದದ್ದು ಎಂದರು.

ದಸರೆ ಎಂದರೇ ಸಾಮರಸ್ಯಕ್ಕೆ ಹೆಸರುವಾಸಿ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿಷ್ಠೆಯನ್ನು ಕೈಬಿಟ್ಟು ಜನಹಿತದ ಹಿತದೃಷ್ಟಿಯಿಂದ ಸಂಘರ್ಷದ ಬದಲು ಸಾಮರಸ್ಯದ ದಸರೆಗೆ ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.

ಸಾವಿರಾರು ವರ್ಷಗಳ ಇತಿಹಾಸ- ಡಾ.ವಿ. ರಂಗನಾಥ್‌:

ಮೈಸೂರು ದಸರೆಗೆ 416 ವರ್ಷಗಳ ಇತಿಹಾಸ ಇದೆ. ಆದರೆ ನವರಾತ್ರಿ ಉತ್ಸವಕ್ಕೆ ನಾಲ್ಕೈದು ಸಾವಿರ ವರ್ಷಗಳ ಇತಿಹಾಸವಿದೆ ಎಂದು ದಸರಾ ಕುರಿತು ಪ್ರಧಾನ ಭಾಷಣ ಮಾಡಿದ ನಿವೃತ್ತ ತಹಸೀಲ್ದಾರ್‌ ಡಾ.ವಿ. ರಂಗನಾಥ್‌ ಅಭಿಪ್ರಾಯಪಟ್ಟರು.

ನವರಾತ್ರಿ ಉತ್ಸವದ ಬಗ್ಗೆ ಕ್ರಿಸ್ತಪೂರ್ವದಲ್ಲಿಯೇ ನಮುದಾಗಿದೆ. ನವರಾತ್ರಿ ಉತ್ಸವ ದೇಶದ ಹಿರಿಮೆಯಾಗಿದೆ ಎಂದು ಅವರು ಹೇಳಿದರು.

ಶಾರಾದವಿಲಾಸ ಶಿಕ್ಷಣ ಸಂಸ್ಥೆಯ ಗೌ. ಕಾರ್ಯದರ್ಶಿ ಆರ್‌. ನರಸಿಂಹ ಮಾತನಾಡಿ, ರಾಜರು ಅಂಬಾರಿಯಲ್ಲಿ ಕುಳಿತುಕೊಂಡು ಹೋಗುತ್ತಿದ್ದ ದಸರೆಯನ್ನು ನಾನು ನೋಡಿದ್ದೇನೆ. ರಾಜರನ್ನು ಕಾಣಲೆಂದೇ ಜನರು ಬರುತ್ತಿದ್ದರು. ಆ ಕಾಲದಷ್ಟು ವಿಜೃಂಭಣೆ, ಅದ್ಧೂರಿತನ ಈಗ ಕಾಣಿಸುತ್ತಿಲ್ಲ ಎಂದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಮೈಸೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ. ಮಹದೇವಸ್ವಾಮಿ, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಎಂ. ದೇವಿಕಾ ಮಾತನಾಡಿದರು. ಜನಪರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ. ಮಹೇಶ್‌ ಚಿಕ್ಕಲ್ಲೂರು ಸ್ವಾಗತಿಸಿದರು. ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್‌ ಪ್ರಾಸ್ತಾವಿಕ ಭಾಷಣ ಮಾಡಿದರು ವಿದ್ಯಾರ್ಥಿನಿ ಪ್ರಿಯಾಂಕ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಜಿ. ಆನಂದ್‌ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎನ್‌. ಗಿರೀಶ್‌ ವಂದಿಸಿದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!