ಶಿಗ್ಗಾಂವಿ: ಸಂವಿಧಾನದ ಆಶಯಗಳಂತೆ ಕಟ್ಟಬೇಕಾಗಿದೆ. ಸಂವಿಧಾನವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ.ಆಭಿಯಾನ ರೀತಿಯಲ್ಲಿ ಸಂವಿಧಾನ ಉಳಿಸುವ ಕಾರ್ಯ ಮಾಡೋಣ ಎಂದು ಹಿರಿಯ ಸಾಹಿತಿ ಡಾ. ಎಚ್.ಎಲ್. ಪುಷ್ಪಾ ತಿಳಿಸಿದರು.ಜಾನಪದ ವಿವಿಯ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ಸಾಹಿತ್ಯ: ಸಾಂವಿಧಾನಿಕ ಆಶಯಗಳು ಎಂಬ ಮೂರು ದಿನಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿ, ಹೋರಾಟ, ಚಿಂತನೆ, ಚರ್ಚೆಯ ಮೂಲಕ ಸಂವಿಧಾನವನ್ನು ಕಾಪಾಡಬಹುದು ಎಂದರು.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರಾರ್ಥಿಗಳ ಆತ್ಮವಿಮರ್ಶೆಯ ಸಾಹಿತ್ಯದ ಜತೆಗೆ ಸಂವಿಧಾನದ ಆಶಯಗಳನ್ನು ಮನವರಿಕೆ ಮಾಡಿಕೊಳ್ಳಲು ಅವಕಾಶ ನೀಡಿದ ಶಿಬಿರ ಅರ್ಥಪೂರ್ಣವಾಗಿದೆ ಎಂದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಕನ್ನಡಿಗರ ಬದುಕಿನ ಗಟ್ಟಿತನವೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಇದು ಎಲ್ಲ ವಿಶ್ವವಿದ್ಯಾಲಯಗಳಿಗಿಂತಲೂ ವಿಭಿನ್ನ ಹಾಗೂ ವಿಶೇಷವಾದದ್ದು ಎಂದರು.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ ಆಶಯಗಳಾದ ಸಮಾನತೆ, ಸಹಕಾರ ಸಹಬಾಳ್ವೆಯನ್ನು ಜೀವನದ ಪ್ರತಿ ಹಂತದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಶಿಬಿರದ ನಿರ್ದೇಶಕ ಡಾ. ಎ.ಬಿ. ರಾಮಚಂದ್ರಪ್ಪ,ಶಿಬಿರದ ನಿರ್ದೇಶಕ ಡಾ. ಜಿ. ಪ್ರಶಾಂತ ನಾಯಕ, ಸಾಹಿತ್ಯ ಅಕಾಡೆಮಿ ಸದಸ್ಯರಾದ ಮೈತ್ರಾಯಿಣಿ ಗದಿಗೆಪ್ಪಗೌಡ್ರ ಮಾತನಾಡಿದರು.
ಹಾವೇರಿ: ರಾಜ್ಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ಹಾಗೂ ಹಿರಿಯ ವಕೀಲ ಸದಾಶಿವ ರೆಡ್ಡಿಯವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಬಲಗೈಗೆ ಕೆಂಪು ಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ವಕೀಲರ ಸಂಘದ ಮುಖ್ಯಸ್ಥರು ಮಾತನಾಡಿ, ಕೇಸು ಕೊಡುವ ನೆಪದಲ್ಲಿ ಏ. 16ರಂದು ಅವರ ಕಚೇರಿಗೆ ಬಂದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬ ಫೈಬರ್ ಪೈಪಿನಿಂದ ಹೊಡೆದು ಗಾಯಗೊಳಿಸಿದ್ದಾನೆ. ಇನ್ನೊಬ್ಬ ಹೊಡೆಯುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಇವರಿಬ್ಬರ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಮಾಡಬೇಕೆಂದು ಆಗ್ರಹಿಸಿದರು.ದಾಳಿ ನಡೆಸಿದ ದುರುಳರಿಗೂ ಸದಾಶಿವ ರೆಡ್ಡಿಯವರ ಅವರಿಗೆ ಪ್ರಾಣಬೆದರಿಕೆ ಹಾಕಿದ್ದಾರೆ. ಹಾಗಾಗಿ ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತ್ವರಿತವಾಗಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಚ್. ಜತ್ತಿ, ಕಾರ್ಯದರ್ಶಿ ಸಿ.ಪಿ. ಜಾವಗಲ್ ಸೇರಿದಂತೆ ಮತ್ತಿತರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಪಾಲ್ಗೊಂಡಿದ್ದರು.